ಸೋಮವಾರ, ಡಿಸೆಂಬರ್ 5, 2022
22 °C
ಮೋದಿಯಿಂದ ವರ್ಚುವಲ್‌ ಉದ್ಘಾಟನೆ * 25 ರ ಸಂಭ್ರಮದಲ್ಲಿ ಶೃಂಗಸಭೆ

ಇದೇ 16 ರಿಂದ 18 ಬೆಂಗಳೂರು ಟೆಕ್‌ ಸಮ್ಮಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬೆಂಗಳೂರು ಟೆಕ್‌ ಸಮ್ಮಿಟ್‌) ಇದೇ 16 ರಿಂದ 18 ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಈ ಶೃಂಗಸಭೆಗೆ 25 ವರ್ಷದ ಸಂಭ್ರಮವೂ ಆಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌ ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಕೋವಿಡ್ ನಂತರ ನಡೆಯುತ್ತಿರುವ ಪೂರ್ಣ ಪ್ರಮಾಣದ ಶೃಂಗಸಭೆ ಇದಾಗಿದ್ದು, ಪ್ರದರ್ಶನದಲ್ಲಿ 570 ಕ್ಕೂ ಹೆಚ್ಚು ನವೋದ್ಯಮಗಳು, ಯೂನಿಕಾರ್ನ್‌ಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಪ್ರಧಾನಿ ನರೇಂದ್ರಮೋದಿ ವರ್ಚುವಲ್‌ ಆಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಈ ಬಾರಿಯ ಶೃಂಗಸಭೆಯ ಘೋಷ ವಾಕ್ಯ ‘ಟೆಕ್‌ 4 ನೆಕ್ಸ್‌ಜೆನ್‌’ ಆಗಿದ್ದು, ಎಲೆಕ್ಟ್ರಾನಿಕ್ಸ್‌, ಐಟಿ, ಡೀಪ್‌ ಟೆಕ್‌, ಕೃತಕ ಬುದ್ಧಿಮತ್ತೆ, ಹೈಬ್ರೀಡ್‌ ಕ್ಲೌಡ್, 5ಜಿ, ಎಡ್ಜ್‌ ಕಂಪ್ಯೂಟಿಂಗ್‌, ಫಿನ್‌ಟೆಕ್‌, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಬೆಳ್ಳಿ ಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ 25 ಕ್ಕಿಂತ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿರುವ ಐಟಿ ವಲಯದ 35, ಎಸ್‌ಟಿಪಿಐ ವಲಯದ 10, ಬಿಟಿ ವಲಯದ 6 ಕಂಪನಿಗಳಿಗೆ ಮತ್ತು ಯೂನಿಕಾರ್ನ್‌ ದರ್ಜೆಯ 10 ನವೋದ್ಯಮಗಳಿಗೆ ಸನ್ಮಾನಿಸಲಾಗುವುದು. ಈ ಸಮಾವೇಶವು 300 ಶತಕೋಟಿ ಡಾಲರ್‌ ಮೌಲ್ಯದ ಡಿಜಿಟಲರ್‌ ಆರ್ಥಿಕತೆ ಸಾಧನೆಗೆ ಇಂಬು ನೀಡಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಖಾತೆಯ ಸಹಾಯಕ ಸಚಿವ ಒಮರ್‌ ಬಿನ್ ಸುಲ್ತಾನ್‌ ಅಲ್‌ ಒಲಾಮಾ, ಆಸ್ಟ್ರೇಲಿಯಾ ವಿದೇಶಾಂಗ ಖಾತೆಯ ಸಹಾಯಕ ಸಚಿವ ಟಿಮ್ ವ್ಯಾಟ್ಸ್‌, ಫಿನ್ಲೆಂಡಿನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್‌, ಭಾರತದ ಪ್ರಥಮ ಯೂನಿಕಾರ್ನ್‌ ಕಂಪನಿ ‘ಇಮ್ಮೊಬಿ’ಯ ಸಂಸ್ಥಾಪಕ ನವೀನ್‌ ತೆವಾರಿ, ಅಮೆರಿಕದ ಕೈಂಡ್ರೆಲ್‌ ಕಂಪನಿಯ ಸಿಇಒ ಮಾರ್ಟಿನ್‌ ಶ್ರೋಟರ್ ಭಾಗವಹಿಸಲಿದ್ದಾರೆ.  ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರೋನ್‌ ಅವರು ವರ್ಚುವಲ್‌ ಆಗಿ ಮಾತನಾಡಲಿದ್ದಾರೆ ಎಂದರು.

ಪ್ರಮುಖ ಅಂಶಗಳು:

* 2,000 ನವೋದ್ಯಮಗಳು ಭಾಗವಹಿಸಲಿವೆ

* 300 ನವೋದ್ಯಮಗಳ ಉತ್ಪನ್ನಗಳ ಪ್ರದರ್ಶನ

 * 570 ಪ್ರದರ್ಶಕರು ಭಾಗಿ

* ಐಟಿ 92, ಜೈವಿಕ ತಂತ್ರಜ್ಞಾನ 60, ಎಐ ಮತ್ತು ಎಂಎಲ್‌, ನವಯುಗದ ಆವಿಷ್ಕಾರಗಳ 15, ಎಜುಟೆಕ್‌ ಮತ್ತು ಫಿನ್‌ಟೆಕ್‌ 14, ಎಲೆಕ್ಟ್ರಾನಿಕ್ಸ್‌ ಮತ್ತು ಮೊಬಿಲಿಟಿ 10, ಸೈಬರ್‌ ಸೆಕ್ಯುರಿಟಿಯ 11 ನವೋದ್ಯಮಗಳಿಂದ ಪ್ರದರ್ಶನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು