ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ವಿ.ವಿ ಪರೀಕ್ಷೆ ಮುಂದೂಡಿಕೆ?

24 ಗಂಟೆಯಲ್ಲಿ ಬಿ.ಇಡಿ ಫಲಿತಾಂಶ– ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿದ್ಧತೆ
Last Updated 19 ಏಪ್ರಿಲ್ 2021, 21:04 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಹೆಚ್ಚಳ ಮತ್ತು ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಿ.ಎ ಪದವಿ (ಸಮಾಜವಿಜ್ಞಾನ) ಪರೀಕ್ಷೆ ಸೋಮವಾರ ನಡೆಯಿತು. ಆದರೆ, ಉಳಿದ ಪರೀಕ್ಷೆಗಳನ್ನು ಮುಂದೂಡಲು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕುಲಸಚಿವ (ಮೌಲ್ಯಮಾಪನ)ರಮೇಶ್‌ ಬಿ, ‘ಪರೀಕ್ಷೆ ಮುಂದೂಡುವ ಕುರಿತು ಚರ್ಚಿಸಲು ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಜೊತೆ ಮಂಗಳವಾರ ಸಭೆ ನಡೆಸಲಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸಮಂಜಸವೂ ಅಲ್ಲ. ಎಲ್ಲರ ಅಭಿಪ್ರಾಯ ಪಡೆದು ಈ ಬಗ್ಗೆ ನಿರ್ಧಾರ ತಳೆಯಲಾಗುವುದು’ ಎಂದರು.

‘ಸೋಮವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆ 15 ದಿನಗಳ ಹಿಂದೆಯೇ ನಿಗದಿಯಾಗಿತ್ತು. 20 ಕೇಂದ್ರಗಳಲ್ಲಿ 500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕೋವಿಡ್‌ ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

‘ಪರೀಕ್ಷೆ ಮುಂದೂಡುವಂತೆ ಪೋಷಕರು ಮನವಿ ಮಾಡಿಲ್ಲ. ಅಷ್ಟೇ ಅಲ್ಲದೆ, ಈ ಬಾರಿ ಆದಷ್ಟು ಬೇಗ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸುತ್ತಿದ್ದಾರೆ. ಆದರೂ ಕೋವಿಡ್ ಹೆಚ್ಚುತ್ತಿರುವುದರಿಂದ ಮತ್ತು ಸಾರಿಗೆ ನೌಕರರ ಮುಷ್ಕರ ಮುಂದುವರಿದಿರುವುದರಿಂದ ಪರೀಕ್ಷೆಗಳನ್ನು ಮುಂದೂಡಲೇಬೇಕಾದ ಅನಿವಾರ್ಯ ಇದೆ. ಪರೀಕ್ಷೆಗಳನ್ನು ಮುಂದೂಡಿದರೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದೂ ತಿಳಿಸಿದರು.

24 ಗಂಟೆಯಲ್ಲಿ ಬಿ.ಇಡಿ ಫಲಿತಾಂಶ: ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪದವಿ ಪರೀಕ್ಷೆ (5ನೇ ಸೆಮಿಸ್ಟರ್‌), ಬಿ.ಇಡಿ (3ನೇ ಸೆಮಿಸ್ಟರ್‌), ಸ್ನಾತಕೋತ್ತರ ಕೋರ್ಸ್‌ಗಳ (3ನೇ ಸೆಮಿಸ್ಟರ್‌) ಉಳಿದ ಪತ್ರಿಕೆಗಳ ಪರೀಕ್ಷೆಗಳು ಸೋಮವಾರ ನಡೆದವು. ಶೇ 98 ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ. ಜನಾರ್ದನಂ ತಿಳಿಸಿದರು.

‘ಇಂದಿರಾನಗರದಲ್ಲಿರುವ ಮೌಂಟ್‌ ಫೋರ್ಟ್‌ ಕಾಲೇಜಿನಲ್ಲಿ ಮಾತ್ರ ಇರುವ ಎಂ.ಎಸ್‌ಸಿ (ಸೈಕಾಲಜಿ) ಮತ್ತು ಎಂ.ಎಸ್‌ಸಿ (ಕೌನ್ಸೆಲಿಂಗ್‌) ವಿಷಯಗಳ ಪರೀಕ್ಷೆಗಳಿಗೆ ಒಟ್ಟು 84 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಈ ಪೈಕಿ, ಮೂವರಿಗೆ ಕೋವಿಡ್‌ ದೃಢಪಟ್ಟ ಬಗ್ಗೆ ಭಾನುವಾರ ಸಂಜೆ ಮಾಹಿತಿ ಸಿಕ್ಕಿದ ಕಾರಣ ಆ ಪರೀಕ್ಷೆಗಳನ್ನು ಮಾತ್ರ ಮುಂದೂಡಲಾಗಿದೆ. ಉಳಿದಂತೆ, ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಯಶಸ್ವಿಯಾಗಿ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದರು.

‘ಉಳಿದ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ. ಪರೀಕ್ಷೆ ಮುಂದೂಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅಂಥವುಗಳನ್ನು ನಂಬಬಾರದು’ ಎಂದೂ ಅವರು ತಿಳಿಸಿದ್ದಾರೆ.

‘ಕಳೆದ ವರ್ಷ ಬಿ.ಇಡಿ (ನಾಲ್ಕನೇ ಸೆಮಿಸ್ಟರ್‌) ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಕೇವಲ 48 ಗಂಟೆಯಲ್ಲಿ ನೀಡಿದ್ದೆವು. ಈ ಬಾರಿ,ಬಿ.ಇಡಿ ನಾಲ್ಕನೇ ಸೆಮಿಸ್ಟರ್‌ನ 1,780 ವಿದ್ಯಾರ್ಥಿಗಳ ಫಲಿತಾಂಶವನ್ನು 24 ಗಂಟೆಯ ಒಳಗೆ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಇದು ದಾಖಲೆ ಆಗಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT