ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗಕ್ಕಾಗಿ ಸಾಲ: ಮಹಿಳೆಯ ಏಕಾಂಗಿ ಹೋರಾಟ ಯಶಸ್ವಿ

Last Updated 17 ಜನವರಿ 2022, 19:47 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಕೋರಿ ಬ್ಯಾಂಕ್‌ಗೆ ಅಲೆದು ಹೈರಾಣಾಗಿ, ಕೊನೆಗೆ ಹೋರಾಟದ ಮೂಲಕ ಯಶ ಸಾಧಿಸಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿ, ಮಣ್ಣಿನ ಆಭರಣ ತಯಾರಿಸುವ ನೀಲಿ ಕಲಾ ಕ್ರಿಯೇಷನ್ಸ್‌ನ ಸಂಸ್ಥಾಪಕಿ ಜೆ.ಮಂಜುಳಾ ದಿಟ್ಟತನ ತೋರಿದವರು. ಯಂತ್ರೋಪಕರಣ ಖರೀದಿಸಲು ₹ 14.25 ಲಕ್ಷ ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ವೊಂದಕ್ಕೆ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳು ಅಲೆದಿದ್ದರು. ಬ್ಯಾಂಕ್‌ನವರು ಅರ್ಜಿಯನ್ನು ತಿರಸ್ಕರಿಸಿದ್ದರು.

ನೊಂದ ಮಂಜುಳಾ, ಸೋಮವಾರ ಬೆಳಿಗ್ಗೆ ಬ್ಯಾಂಕ್‌ ಮೆಟ್ಟಿಲ ಬಳಿ ಏಕಾಂಗಿ ಧರಣಿ ನಡೆಸಿದರು. ಕೊನೆಯಲ್ಲಿ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಬಂದು ಸಾಲ ನೀಡುವ ಭರವಸೆ ನೀಡಿದ್ದಾರೆ. ಸಾಲ ಪಡೆಯಲು ಪಟ್ಟ ಪಾಡನ್ನು ಅವರು ಫೇಸ್‌ಬುಕ್‌ ಪುಟದಲ್ಲಿಯೂ ಬರೆದುಕೊಂಡಿದ್ದಾರೆ.

‘ಸ್ವಂತ ಉದ್ದಿಮೆ ವಿಸ್ತರಿಸಲು 2021ರ ಅ.18 ರಂದು ಪಿಎಂಇಜಿಪಿ ಅಡಿ ಸಾಲಕ್ಕೆ ಅರ್ಜಿ ಸಲ್ಲಿಸಿ ದಾಖಲೆ ಒದಗಿಸಿದ್ದೆ. ಅರ್ಜಿ ತಿರಸ್ಕೃತವಾಗಿದೆ ಎಂದು ಡಿ.15 ರಂದು ಕರೆಬಂತು’ ಎಂದಿದ್ದಾರೆ.

‘ಶಾಖೆಯ ವ್ಯವಸ್ಥಾಪಕರನ್ನು ಭೇಟಿಯಾದರೂ ಫಲ ಸಿಗಲಿಲ್ಲ. ಸಂಸದ ಪ್ರತಾಪಸಿಂಹ ಅವರ ಸಲಹೆಯಂತೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರ ಬಳಿ ಹೋದೆ. ಮುದ್ರಾ ಯೋಜನೆಯಡಿ ಸಾಲ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು. ಆಗಲೂ ಸಾಲ ಮಂಜೂರು ಆಗಲಿಲ್ಲ’ ಎಂದು ನೋವು ವಿವರಿಸಿದ್ದಾರೆ.

‘3 ತಿಂಗಳಿನಿಂದ, ಕಡೆಪಕ್ಷ ಮನುಷ್ಯ ಜಾತಿಯೆಂದು ನೋಡದೆ ನನ್ನನ್ನು ಅವಮಾನಿಸಿದ ವ್ಯವಸ್ಥೆಗೆ ಧಿಕ್ಕಾರ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ಸಾಧನೆ ಕನಸು: ‘ಪತಿ ಇದ್ದಾಗ ಮಣ್ಣಿನ ಆಭರಣ ತಯಾರಿಕೆ ನನ್ನ ಹವ್ಯಾಸವಾಗಿತ್ತು. ಈ ಕ್ಷೇತ್ರದಲ್ಲಿ ನಾನು ಉತ್ತಮ ಸಾಧನೆ ಮಾಡಬೇಕೆಂದು ಅವರು ಬಯಸಿದ್ದರು. ಅವರ ನಿಧನದ ಬಳಿಕ ಮನೆಯಲ್ಲೇ ಪೂರ್ಣಪ್ರಮಾಣದಲ್ಲಿ ಮಣ್ಣಿನ ಆಭರಣ ತಯಾರಿಕೆಯ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದೇನೆ. ಯುವತಿಯರಿಗೂ ತರಬೇತಿ ನೀಡುತ್ತಿದ್ದೇನೆ. ಸಾಲಕ್ಕಾಗಿ ಅಲೆದು ಸುಸ್ತಾಗಿ ಪ್ರತಿಭಟನೆಗೆ ಮುಂದಾದೆ’ ಎಂದು ಮಂಜುಳಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೋವಿಡ್‌ನಿಂದ ಮೃತಪಟ್ಟ ಪತಿ

ಮಂಜುಳಾ ಅವರ ಪತಿ ಜಿ.ಕೆ.ಲೋಹಿತ್‌, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ರಿಮ್ಸ್‌) ಹಿರಿಯ ಸಂಶೋಧನಾ ವಿಜ್ಞಾನಿಯಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೋವಿಡ್‌ ತಗುಲಿದ್ದು, ಹೃದಯಾಘಾತದಿಂದ ಕಳೆದ ಏಪ್ರಿಲ್‌ನಲ್ಲಿ ನಿಧನರಾದರು.

‘ಕೊರೊನಾ ವಾರಿಯರ್‌ ಪತ್ನಿ ಎಂದು ಯಾರ ಬಳಿಯೂ ನೆರವಿಗೆ ಕೈಚಾಚಿಲ್ಲ. ಪತಿ ತೀರಿಕೊಂಡ ಐದನೇ ದಿನದಿಂದಲೇ ದುಡಿಮೆಯಲ್ಲಿ ತೊಡಗಿದೆ. ಕೊರೊನಾ ಸಂಕಷ್ಟದಲ್ಲೂ ಒಬ್ಬಂಟಿಯಾಗಿ ಪತಿಯ ಕನಸು ನನಸು ಮಾಡಲು ಹೆಜ್ಜೆ ಇಡುತ್ತಿದ್ದೇನೆ. ಮನ್ಸೋರೆ ನಿರ್ದೇಶನದ ‘ಆ್ಯಕ್ಟ್‌ 1978’ ಸಿನಿಮಾ ನನ್ನ ಬದುಕಿನ ಗತಿ ಬದಲಿಸಿದೆ. ಪತಿ ಜೊತೆ ಕಡೆಯದಾಗಿ ನೋಡಿದ ಸಿನಿಮಾವದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT