ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದಿಂದ ಸ್ಪರ್ಧೆ ವಿಜಯೇಂದ್ರ ನಿರಾಸಕ್ತಿ

Last Updated 8 ನವೆಂಬರ್ 2020, 22:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರ ಒಂದು ಬಣ ಒತ್ತಾಯಿಸಿದ್ದು, ಆದರೆ, ವಿಜಯೇಂದ್ರ ಸ್ಪರ್ಧೆಯ ಬಗ್ಗೆ ಆಸಕ್ತಿ ತೋರಿಸಿಲ್ಲ.

ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಸ್ಥಳೀಯವಾಗಿ ಚರ್ಚೆ ಆರಂಭವಾಗಿದ್ದು, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿ ಬಂದಿದೆ. ಒಂದು ಬಣ ಮಾತ್ರ ವಿಜಯೇಂದ್ರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಆಸಕ್ತಿ ತೋರಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಮಂತ್ರಿಯವರು ಭರವಸೆ ನೀಡಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರಕ್ಕೆ ಟಿಕೆಟ್‌ ಕೇಳಿದ ಸಂದರ್ಭದಲ್ಲಿ ವರಿಷ್ಠರು ಕೊನೇ ಕ್ಷಣದಲ್ಲಿ ಟಿಕೆಟ್‌ ನಿರಾಕರಿಸಿದ್ದರಿಂದ ಯಡಿಯೂರಪ್ಪ ಅವರು ಮುಜುಗರಕ್ಕೆ ಒಳಗಾಗಿದ್ದರು. ಆದ್ದರಿಂದ ತಮ್ಮ ಪುತ್ರನ ಪರ ಟಿಕೆಟ್‌ ಕೇಳದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರು, ಚಾಮರಾಜನಗರ ಜಿಲ್ಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ವಿಜಯೇಂದ್ರ ಆ ಭಾಗದ ವೀರಶೈವ/ಲಿಂಗಾಯತ ಸಮುದಾಯದ ನಾಯಕತ್ವವನ್ನು ಮುನ್ನಡೆಸುವ ಬಗ್ಗೆ ಒಲವು ಹೊಂದಿದ್ದಾರೆ. ಬಿಜೆಪಿಯಲ್ಲಿ ಸದ್ಯಕ್ಕೆ ಈ ಸಮುದಾಯದ ವರ್ಚಸ್ವಿ ನಾಯಕರ ಕೊರತೆ ಇದೆ. ಆ ಜನಾಂಗದ ಯುವ ಸಮುದಾಯದಲ್ಲಿ ವಿಜಯೇಂದ್ರ ಅವರಿಗೆ ಸಾಕಷ್ಟು ಬೆಂಬಲಿಗರಿದ್ದಾರೆ ಎಂದು ವಿಜಯೇಂದ್ರ ಆಪ್ತವಲಯ ಹೇಳಿದೆ.

ಸಂಘಟನೆಯೇ ಆದ್ಯತೆ:ವಿಜಯೇಂದ್ರ

‘ಬಸವಕಲ್ಯಾಣದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಲ್ಲ. ಪಕ್ಷ ನನ್ನನ್ನು ಉಪಾಧ್ಯಕ್ಷನನ್ನಾಗಿ ನೇಮಿಸಿದೆ. ಪಕ್ಷದ ಸಂಘಟನೆಗೆ ಆದ್ಯತೆ ನೀಡಿದ್ದೇನೆ. ಸ್ವಂತ ಬಲದ ಮೇಲೆ ಪಕ್ಷದಲ್ಲಿ ಬೆಳೆಯಲು ಶ್ರಮಿಸುತ್ತೇನೆ’ ಎಂದು ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆಯ ಹೆಸರು ಮುಂದಿಟ್ಟುಕೊಂಡು ರಾಜಕೀಯದಲ್ಲಿ ಬೆಳೆಯುವ ಉದ್ದೇಶವಿಲ್ಲ. ಆದರೆ, ಅವರ ಹೋರಾಟದ ಜೀವನ ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ. ಹೀಗಾಗಿ ನಾನು ಈಗ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶ ಹೊಂದಿಲ್ಲ. ನಾವು ಕೆಲಸ ಮಾಡಿ ತೋರಿಸಿದಾಗ, ಖಂಡಿತವಾಗಿಯೂ ಪಕ್ಷ ಅವಕಾಶ ನೀಡುತ್ತದೆ’ ಎಂದು ಹೇಳಿದರು.

‘ಕೆ.ಆರ್‌.ಪೇಟೆಯ ಕ್ಷೇತ್ರವನ್ನು ಗೆದ್ದಾಗ ಫ್ಲೂಕ್‌ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಅಲ್ಲಿ ನಮ್ಮೆಲ್ಲ ಕಾರ್ಯಕರ್ತರ ಶ್ರಮವಿತ್ತು,ಗೆದ್ದೆವು. ಅದು ಫ್ಲೂಕ್‌ ಅಲ್ಲ ಎಂಬುದನ್ನು ಶಿರಾದಲ್ಲಿ ಗೆದ್ದು ತೋರಿಸುತ್ತೇವೆ. ರಾಜರಾಜೇಶ್ವರಿ ಕ್ಷೇತ್ರಕ್ಕಿಂತಲೂ ಅಧಿಕ ಅಂತರ ಅಂದರೆ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT