ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ನೂತನ ಸಿಎಂ: ಇಲ್ಲಿದೆ ಮುಖ್ಯಮಂತ್ರಿಗಾದಿಗೇರಿದ ಅಪ್ಪ–ಮಕ್ಕಳ ಪಟ್ಟಿ

ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು, ತಂದೆ–ಮಗ ಇಬ್ಬರೂ ಮುಖ್ಯಮಂತ್ರಿಗಾದಿ ಅಲಂಕರಿಸಿದವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿವರ ತಂದೆ ಎಸ್.ಅರ್. ಬೊಮ್ಮಾಯಿಯವರು ಸಹ ಆಗಸ್ಟ್ 1988 ರಿಂದ ಏಪ್ರಿಲ್ 1989 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಅಪ್ಪ–ಮಗ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಹಲವು ಉದಾಹರಣೆಗಳು ದೇಶದಲ್ಲಿವೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಬೊಮ್ಮಾಯಿಯವರಿಗೂ ಮುನ್ನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಅವರ ಮಗ ಎಚ್‌.ಡಿ. ಕುಮಾರಸ್ವಾಮಿಯವರು ಈ ಸಾಲಿಗೆ ಸೇರುತ್ತಾರೆ.

1. ದೇವೇಗೌಡರು 14 ನೇ ಮುಖ್ಯಮಂತ್ರಿಯಾಗಿ ಡಿಸೆಂಬರ್ 1994 ರಿಂದ ಮೇ 1996 ರವರೆಗೆ ಅಧಿಕಾರ ನಡೆಸಿದ್ದರು. ನಂತರ ರಾಜೀನಾಮೆ ನೀಡಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ್ದರು. ಇನ್ನು, ಅವರ ಮಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. 2006ರಿಂದ 2007ರವರೆಗೆ 20 ತಿಂಗಳ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಮೇ 2018ರಿಂದ ಜುಲೈ 2019ರವರೆಗೆ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

2. ನೆರೆಯ ತಮಿಳುನಾಡಿನಲ್ಲಿ ಡಿಎಂಕೆಯ ಎಂ. ಕರುಣಾನಿಧಿ ಮತ್ತು ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೇಗೇರಿದ ಅವರ ಮಗ ಎಂ.ಕೆ. ಸ್ಟಾಲಿನ್ ಈ ಸಾಲಿಗೆ ಸೇರುತ್ತಾರೆ. ಕರುಣಾನಿಧಿಯವರು 1969ರಿಂದ 2011ರವರೆಗೆ 5 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

3. ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಅವರ ಮಗ ಜಗನ್ ಮೋಹನ ರೆಡ್ಡಿ ಮುಖ್ಯಮಂತ್ರಿಗಾದಿ ಏರಿದ ಅಪ್ಪ–ಮಕ್ಕಳಾಗಿದ್ದಾರೆ. ವೈ.ಎಸ್. ರಾಜಶೇಖರ ರೆಡ್ಡಿ 2004–2009ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಅವರ ಮಗ ಜಗನ್ 2019ರಿಂದ ಆಂದ್ರಪ್ರದೇಶದ ಚುಕ್ಕಾಣಿ ಹಿಡಿದಿದ್ದಾರೆ.

4.ಒಡಿಶಾದ ಬಿಜು ಜನತಾದಳದಿಂದ ಬಿಜು ಪಟ್ನಾಯಕ್ ಅವರು 1961-1963 ಮತ್ತು 1990-95ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಮಗ ನವೀನ್ ಪಟ್ನಾಯಕ್ 2000ದಿಂದ ಸದ್ಯ 5ನೇ ಬಾರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಿದ್ದಾರೆ.

5. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಿಂದ ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಸಿಎಂ ಆಗಿದ್ದರು. ಅವರ ಮಗ ಅಖಿಲೆಶ್ ಯಾದವ್ 2012ರಿಂದ 2017ರವರೆಗೆ ಮುಖ್ಯಮಂತ್ರಿಯಗಿ ಅಧಿಕಾರ ನಡೆಸಿದ್ದರು.

6. ಜಾರ್ಖಂಡ್‌ನಲ್ಲಿ ಶಿಬು ಸೊರೆನ್ ಅವರು ಮೂರು ಬಾರಿ ಅಧಿಕಾರ ನಡೆಸಿದ್ದರು. ಅವರ ಮಗ ಹೇಮಂತ್ ಸೊರೆನ್ ಅವರು 2019ರಿಂದ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ.

ಮಹಾರಾಷ್ಟ್ರದ ಶಂಕರರಾವ್ ಚವಾಣ್-ಅಶೋಕ್ ಚವಾಣ್, ಮೇಘಾಲಯದ ಪಿಎ ಸಂಗ್ಮಾ-ಕಾನ್ರಾಡ್ ಸಂಗ್ಮಾ ಮತ್ತು ಅರುಣಾಚಲ ಪ್ರದೇಶದ ದೋರ್ಜಿ ಖಂಡು-ಪೆಮಾ ಖಂಡು ಅಪ್ಪ–ಮಗ ಸಿಎಂ ಆದವರ ಸಾಲಿಗೆ ಸೇರುತ್ತಾರೆ.

ಉಳಿದಂತೆ, ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ತಂದೆ-ಮಗ ಮತ್ತು ತಂದೆ-ಮಗಳು ಸಿಎಂಗಳಾಗಿರುವ ಉದಾಹರಣೆ ಇದೆ. ಫಾರೂಕ್ ಅಬ್ದುಲ್ಲಾ ಮತ್ತು ಅವರ ಮಗ ಒಮರ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಅವರ ಮಗಳು ಮೆಹಬೂಬಾ ಮುಫ್ತಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT