ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವಾರದ ಕೂಗುಮಾರಿಗಳಂತೆ ವರ್ತಿಸಬೇಡಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

Last Updated 14 ಅಕ್ಟೋಬರ್ 2021, 15:53 IST
ಅಕ್ಷರ ಗಾತ್ರ

ಬೆಂಗಳೂರು: 'ಅಧಿಕಾರಿಕ್ಕಾಗಿ ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ಪರಿವಾರದ ಕೂಗುಮಾರಿಗಳ ರೀತಿ ಆರೋಪಿಸಬೇಡಿ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೊದಲು ನೀವು ಕುಳಿತಿರುವ ಕುರ್ಚಿಯ ಘನತೆಯ ಬಗ್ಗೆ ಯೋಚಿಸಿ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.

ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿ ಮುಖ್ಯಮಂತ್ರಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಅಲ್ಲಿಯೇ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ ಹಿಂದೂಗಳ ಹತ್ಯೆಯ ಆರೋಪ ಮಾಡಿದ್ದರು.

ಮುಖ್ಯಮಂತ್ರಿಯವರ ಆರೋಪಕ್ಕೆ ಟ್ವಿಟರ್‌ನಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಾ ಕೂರಬೇಡಿ. ನೀವು ಗೃಹ ಸಚಿವರಾಗಿದ್ದವರು, ಈಗ ಮುಖ್ಯಮಂತ್ರಿ ಆಗಿದ್ದೀರಿ. ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿಯನ್ನು ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯವನ್ನು ತಿಳಿಸಿ' ಎಂದು ಆಗ್ರಹಿಸಿದ್ದಾರೆ.

ತಮ್ಮ ವಿರುದ್ಧಸುಳ್ಳು ಆರೋಪ ಮಾಡಿರುವುದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಮುಖ್ಯಮಂತ್ರಿಯವರು ಕಿರಿಯರಿರುವ ಕಾರಣದಿಂದ ತಿದ್ದಿಕೊಳ್ಳಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯೆಯನ್ನಷ್ಟೇ ನೀಡುತ್ತಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾದ 10 ಹಿಂದೂಗಳ ಸಾವು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಸದಸ್ಯರಿಂದ ನಡೆದಿದೆ. 11 ಮುಸ್ಲಿಮರು ಮತ್ತು 10 ಹಿಂದೂಗಳ ಸಾವಿಗೆ ಬಜರಂಗ ದಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕಾರಣ ಎಂದು ಪ್ರತಿಪಕ್ಷದ ನಾಯಕ ಲೆಕ್ಕ ನೀಡಿದ್ದಾರೆ.

'ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆ ಎಂದು ನಿಮ್ಮ ಪಕ್ಷದವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ಪಟ್ಟಿಯಲ್ಲಿ ಜೀವಂತವಾಗಿ ಇರುವ ಅಶೋಕ್‌ ಪೂಜಾರಿ ಅವರ ಹೆಸರನ್ನೂ ಸೇರಿಸಲಾಗಿತ್ತು. ಅದರಿಂದ ಬಿಜೆಪಿ ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೆ ಗುರಿಯಾಗಿದ್ದು ನೆನಪಿದೆಯೇ' ಎಂದು ಪ್ರಶ್ನಿಸಿದ್ದಾರೆ.

'ಹಿಂದೂಗಳ ಹತ್ಯೆಗೆ ಕಣ್ಣೀರು ಸುರಿಸುವ ನೀವು ಹೊನ್ನಾವರದ ಪರೇಶ್‌ ಮೇಸ್ತಾ ಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸಿ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ನಿಮ್ಮ ಪ್ರಭಾವವನ್ನು ಬಳಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ, ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಿ. ಆ ಮೂಲಕ ಒಬ್ಬ ಹಿಂದೂ ಯುವಕನ ಸಾವಿನ ಪ್ರಕರಣದಲ್ಲಿ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೀರಾ' ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಭಾಗ್, ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಕೂಡ ಹಿಂದೂಗಳು ಎನ್ನುವುದು ನೆನಪಿನಲ್ಲಿರಲಿ. ಇವರ ಹತ್ಯೆಯ ಆರೋಪಿಗಳನ್ನೂ ದಯವಿಟ್ಟು ಶಿಕ್ಷಿಸಿ ಎಂದು ಒತ್ತಾಯಿಸಿದ್ದಾರೆ.

ಆರೋಪಿ ಜತೆ ಕಟೀಲ್‌ ನಂಟು: 'ಮಂಗಳೂರಿನ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನರೇಶ್ ಶೆಣೈ ಜತೆ ನಿಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿಕಟ ನಂಟು ಹೊಂದಿದ್ದಾರೆ. ಅವರಿಬ್ಬರೂ ಖಾಸಾ ದೋಸ್ತ್‌ಗಳು. ಕಟ್ಟಾ ಹಿಂದೂ ಆಗಿದ್ದ ಬಾಳಿಗಾ ಅವರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ದಯವಿಟ್ಟು ನೀವಿಬ್ಬರೂ ಒಟ್ಟಾಗಿ ನ್ಯಾಯ ಕೊಡಿಸಿ' ಎಂದು ಹೇಳಿದ್ದಾರೆ.

'ನೀವು ಮತ್ತು ನಿಮ್ಮ ಪಕ್ಷದ ನಾಯಕರು ಆಗಾಗ ಟಿಪ್ಪು ಸುಲ್ತಾನ ಹೆಸರಿನ ಜಪ ಮಾಡುವ ಮೊದಲು ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಸೇರಿದಂತೆ ನಿಮ್ಮದೇ ಪಕ್ಷದ ನಾಯಕರು ಟಿಪ್ಪು ವೇಷ ಹಾಕಿ ಖಡ್ಗ ಹಿಡಿದು ಕುಣಿದಾಡಿದ ಫೋಟೊಗಳನ್ನು ನೋಡಿ ಕಣ್ತುಂಬಿಕೊಳ್ಳಿ' ಎಂದು ಸಿದ್ದರಾಮಯ್ಯ ತಮ್ಮ ವಿರುದ್ಧದ ಟೀಕೆಗೆ ತಿರುಗೇಟು ನೀಡಿದ್ದಾರೆ.

'ನನ್ನಿಂದ ಆಡಳಿತವನ್ನಾಗಲಿ, ಪೊಲೀಸಿಂಗ್ ಆಗಲಿ ಕಲಿಯಬೇಕಿಲ್ಲ ಎಂದು ಹೇಳಿದ್ದೀರಿ. ನನ್ನಿಂದಾಗಲಿ, ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಂದಾಗಲಿ ನೀವು ಏನಾದರೂ ಕಲಿತಿದ್ದರೆ, ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದೀರಿ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT