ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಅಕ್ರಮ: ದಲ್ಲಾಳಿಗಳ ಮನೆಗಳಲ್ಲಿ ಎಸಿಬಿ ಶೋಧ

ಅಪಾರ ಪ್ರಮಾಣದ ಆಸ್ತಿ, ದಾಖಲೆಗಳನ್ನು ವಶಕ್ಕೆ ಪಡೆದ ತನಿಖಾ ತಂಡ
Last Updated 22 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಆರೋಪದ ಮೇಲೆ ಒಂಬತ್ತು ಮಂದಿ ಖಾಸಗಿ ಮಧ್ಯವರ್ತಿಗಳಿಗೆ ಸಂಬಂಧಿಸಿದ 11 ಸ್ಥಳಗಳ ಮೇಲೆ ಮಂಗಳವಾರ ದಾಳಿಮಾಡಿ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಅಪಾರ ಪ್ರಮಾಣದ ಆಸ್ತಿಯನ್ನು ಪತ್ತೆಮಾಡಿದೆ.

ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ನಿಕಟ ನಂಟು ಹೊಂದಿರುವ ಚಾಮರಾಜಪೇಟೆಯ ಬಿ.ಎನ್‌. ರಘು, ಆರ್‌.ಟಿ. ನಗರದ ಮನೋರಾಯನಪಾಳ್ಯದ ಮೋಹನ್‌, ದೊಮ್ಮಲೂರಿನ ಮನೋಜ್‌, ಮಲ್ಲತ್ತಹಳ್ಳಿಯ ಕೆನಗುಂಟೆ ಮುನಿರತ್ನ ಅಲಿಯಾಸ್‌ ರತ್ನವೇಲು, ರಾಜರಾಜೇಶ್ವರಿನಗರದ ತೇಜು ಅಲಿಯಾಸ್‌ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ವೃತ್ತದ ಅಶ್ವತ್ಥ್‌, ಚಾಮುಂಡೇಶ್ವರಿ ನಗರ ಬಿಡಿಎ ಬಡಾವಣೆಯ ರಾಮ ಮತ್ತು ಲಕ್ಷ್ಮಣ ಹಾಗೂ ಮುದ್ದಿನಪಾಳ್ಯದ ಚಿಕ್ಕಹನುಮಯ್ಯ ಅವರ ಮನೆ, ಕಚೇರಿಗಳಲ್ಲಿ ಇಡೀ ದಿನ ಶೋಧ ನಡೆಸಲಾಗಿದೆ.

2021ರ ನವೆಂಬರ್‌ 19ರಿಂದ 23ರವರೆಗೆ ಬಿಡಿಎ ಕಚೇರಿಗಳಲ್ಲಿ ಶೋಧ ನಡೆಸಿದ್ದ ಎಸಿಬಿ ಅಧಿಕಾರಿಗಳು, ನೂರಾರು ಕೋಟಿ ರೂಪಾಯಿ ಮೊತ್ತದ ಅಕ್ರಮಗಳು ನಡೆದಿರುವುದನ್ನು ಪತ್ತೆಮಾಡಿದ್ದರು. ಈ ಸಂಬಂಧ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳ ತನಿಖೆಯ ಭಾಗವಾಗಿ ಮಧ್ಯವರ್ತಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.

ಮನೋಜ್ ಅವರ ನಿವಾಸದಲ್ಲಿ ದುಬಾರಿ ಬೆಲೆಯ ಕನ್ನಡಕಗಳ ಸಂಗ್ರಹ
ಮನೋಜ್ ಅವರ ನಿವಾಸದಲ್ಲಿ ದುಬಾರಿ ಬೆಲೆಯ ಕನ್ನಡಕಗಳ ಸಂಗ್ರಹ

ಭಾರಿ ಪ್ರಮಾಣದ ಆಸ್ತಿ ಪತ್ತೆ: ‘ಈ ಖಾಸಗಿ ವ್ಯಕ್ತಿಗಳ ಬಳಿ ಭಾರಿ ಪ್ರಮಾಣದ ಸ್ಥಿರಾಸ್ತಿ, ಚಿನ್ನಾಭರಣ, ಐಷಾರಾಮಿ ಕಾರುಗಳು, ಬ್ಯಾಂಕ್‌ ಠೇವಣಿ, ಹೂಡಿಕೆ ಪತ್ತೆಯಾಗಿದೆ. ಆರೋಪಿಗಳು ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿ, ಭ್ರಷ್ಟಾಚಾರ ನಡೆಸಿ ಅಕ್ರಮವಾಗಿ ಸಂಪತ್ತು ಗಳಿಸಿರುವುದು ಶೋಧನೆಯಲ್ಲಿ ಪತ್ತೆಯಾಗಿದೆ’ ಎಂದು ಎಸಿಬಿ ತಿಳಿಸಿದೆ.

ಕೆಲವರ ಬಳಿ ಹತ್ತಾರು ನಿವೇಶನಗಳು ಇವೆ. ಕೆಲವರು ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಐಷಾರಾಮಿ ಮನೆಗಳನ್ನು ನಿರ್ಮಿಸಿದ್ದಾರೆ. ಕೆಲವು ಮನೆಗಳಲ್ಲಿ ಐಷಾರಾಮಿ ಈಜುಕೊಳ, ಜಿಮ್‌, ಹೋಂ ಥಿಯೇಟರ್‌, ಬಾರ್‌ ಕೊಠಡಿಗಳು ಇವೆ. ಆರೋಪಿಗಳಲ್ಲಿ ಕೆಲವರು ರಿಯಲ್‌ ಎಸ್ಟೇಟ್‌ ಚಟುವಟಿಕೆಯಲ್ಲಿ ಬೃಹತ್‌ ಪ್ರಮಾಣದ ಹೂಡಿಕೆ ಮಾಡಿರುವ ದಾಖಲೆಗಳೂ ಸಿಕ್ಕಿವೆ ಎಂದು ಮೂಲಗಳು ಹೇಳಿವೆ.

ದಾಖಲೆ ವಶ: ಆರೋಪಿಗಳು ಬಿಡಿಎ ನಿವೇಶನ ಹಂಚಿಕೆ, ಬಿಡಿಎ ಬಡಾವಣೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಣೆ, ಸ್ವಾಧೀನಕ್ಕೆ ಗುರುತಿಸಿದ ಜಮೀನುಗಳನ್ನು ಡಿನೋಟಿಫೈ ಮಾಡುವುದು, ಬದಲಿ ನಿವೇಶನ ಹಂಚಿಕೆ, ಕಟ್ಟಡ ನಕ್ಷೆ ಅನುಮೋದನೆ ಸೇರಿದಂತೆ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ.

ಕೆಲವರು ಬಿಡಿಎ ಕಚೇರಿಯ ಆಸುಪಾಸಿನಲ್ಲೇ ಕಚೇರಿಗಳನ್ನೂ ಹೊಂದಿದ್ದರು. ಅಲ್ಲಿಯೂ ಶೋಧ ನಡೆಸಲಾಗಿದೆ. ಬಿಡಿಎಗೆ ಸಂಬಂಧಿಸಿದ ಕಡತಗಳನ್ನು ಈ ಕಚೇರಿಗಳಿಂದ ವಶಕ್ಕೆ ಪಡೆಯಲಾಗಿದೆ.

ಎಸಿಬಿಯ ಕೇಂದ್ರ ಕಚೇರಿ ಎಸ್‌ಪಿ ಉಮಾ ಪ್ರಶಾಂತ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಬೆಂಗಳೂರು ನಗರ ವಿಭಾಗದ ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಶೋಧದಲ್ಲಿ ಪಾಲ್ಗೊಂಡಿದ್ದರು.

ಮನೋಜ್ ಅವರ ನಿವಾಸದಲ್ಲಿ ಬೆಲೆ ಬಾಳುವ ವಾಚ್‌ಗಳ ಸಂಗ್ರಹ
ಮನೋಜ್ ಅವರ ನಿವಾಸದಲ್ಲಿ ಬೆಲೆ ಬಾಳುವ ವಾಚ್‌ಗಳ ಸಂಗ್ರಹ

4.9 ಕೆ.ಜಿ. ಚಿನ್ನ ವಶ
ಆರ್‌.ಟಿ. ನಗರದ ಮೋಹನ್‌ ಮನೆಯಲ್ಲಿ 4.96 ಕೆ.ಜಿ. ಚಿನ್ನ, 15.02 ಕೆ.ಜಿ. ಬೆಳ್ಳಿ ಹಾಗೂ 61.9 ಗ್ರಾಂ. ತೂಕದ ವಜ್ರದ ಆಭರಣಗಳನ್ನು ಎಸಿಬಿ ವಶಪಡಿಸಿಕೊಂಡಿದೆ.

ದೊಮ್ಮಲೂರಿನ ಮನೋಜ್‌ ಮನೆಯಲ್ಲಿ 20ಕ್ಕೂ ಹೆಚ್ಚು ದುಬಾರಿ ವಾಚ್‌ಗಳು, ವಿವಿಧ ಬ್ರ್ಯಾಂಡ್‌ಗಳ ಹತ್ತಾರು ದುಬಾರಿ ಕನ್ನಡಕಗಳ ಸಂಗ್ರಹ ಪತ್ತೆಯಾಗಿದೆ.

ಕೆನಗುಂಟೆಯ ಮುನಿರತ್ನ ಅಲಿಯಾಸ್‌ ರತ್ನವೇಲು ಮನೆಯಲ್ಲಿ ಐಷಾರಾಮಿ ಈಜುಕೊಳ, ಜಿಮ್‌, ಹೋಂ ಥಿಯೇಟರ್‌ ಇರುವುದನ್ನು ತನಿಖಾ ತಂಡ ಪತ್ತೆಮಾಡಿದೆ.

ಅಶ್ವಥ್‌ ಅವರ ನಿವಾಸದಲ್ಲಿ ಪತ್ತೆಯಾಗಿರುವ ಐಷಾರಾಮಿ ಕಾರುಗಳು
ಅಶ್ವಥ್‌ ಅವರ ನಿವಾಸದಲ್ಲಿ ಪತ್ತೆಯಾಗಿರುವ ಐಷಾರಾಮಿ ಕಾರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT