ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Last Updated 15 ಜನವರಿ 2023, 23:53 IST
ಅಕ್ಷರ ಗಾತ್ರ

ಬೆಂಗಳೂರು: ‘ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ವಿಶ್ವದ ಎಲ್ಲ ದೇಶಗಳಿಗೂ ಪಾಠ ಕಲಿಸಿದ್ದು, ಭವಿಷ್ಯದ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆಯು ಸದಾ ಸನ್ನದ್ಧ ಸ್ಥಿತಿಯಲ್ಲೇ ಇರಬೇಕಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ನಗರದ ಎಎಸ್‌ಸಿ ಕೇಂದ್ರದ ಮೈದಾನದಲ್ಲಿ ಭಾನುವಾರ ನಡೆದ ಸೇನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಭಾರತೀಯ ಸೇನೆಗೆ ಜ.15 ಶುಭ ದಿನ. ಈ ಸಂದರ್ಭದಲ್ಲಿ ದೇಶದ ಜನರು ಹಾಗೂ ಕೇಂದ್ರದ ಪರವಾಗಿ ಸೇನೆ ಸಿದ್ಧತೆಯಲ್ಲಿ ಇರಬೇಕೆಂಬ ಸೂಚನೆ ನೀಡುತ್ತಿದ್ದೇನೆ’ ಎಂದರು.

‘ಉಕ್ರೇನ್‌ನಲ್ಲಿ ಭಾರತದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಯುದ್ಧದ ವೇಳೆ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವುದು ಸವಾಲಿನ ಕೆಲಸವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದಿಂದ ಯಶಸ್ಸು ದೊರೆಯಿತು. ಉಕ್ರೇನ್‌ ಮತ್ತು ರಷ್ಯಾ ಅಧ್ಯಕ್ಷರ ಜತೆಗೆ ಪ್ರಧಾನಿ ಮಾತುಕತೆ ನಡೆಸಿದ ಪರಿಣಾಮ ಕೆಲವು ತಾಸುಗಳ ಕಾಲ ಯುದ್ಧವನ್ನೇ ಸ್ಥಗಿತಗೊಳಿಸಲು ಸಫಲವಾಗಿದ್ದೆವು. ಆಗ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲಾಯಿತು. ಇಂತಹ ಪ್ರಯತ್ನದ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಇತರ ರಾಷ್ಟ್ರಗಳು ಇಂತಹ ಪ್ರಯತ್ನ ಮಾಡಲಿಲ್ಲ’ ಎಂದು ಹೇಳಿದರು.

‘ಭಾರತೀಯ ಸೇನಾ ಪಡೆಗಳು ತಮ್ಮ ಸಾಮರ್ಥ್ಯ ಹಾಗೂ ರಕ್ಷಣಾ ವಿಧಾನ ವೃದ್ಧಿಸಿಕೊಂಡಿವೆ. ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತೀಯ ಸೇನೆ ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದೆ. ಸ್ವದೇಶಿ ನಿರ್ಮಿತ ಯುದ್ದ ಹೆಲಿಕಾಪ್ಟರ್‌ಗಳು ಶಕ್ತಿಯುತವಾಗಿವೆ’ ಎಂದು ಶ್ಲಾಘಿಸಿದರು.

‘ಮುಂದಿನ 25 ವರ್ಷಗಳಿಗೆ ಪೂರಕವಾಗಿ ಸೇನೆಯಲ್ಲೂ ಬದಲಾವಣೆ ಆಗಬೇಕಿದೆ. ಯುದ್ಧ ಸಾಮಗ್ರಿ ಆವಿಷ್ಕಾರದಲ್ಲಿ ಹೊಸತನ ಇರಲಿ. ದೇಶ ಹಾಗೂ ಜನರ ರಕ್ಷಣೆಗಾಗಿ ಸೇನೆಗೆ ಕೇಂದ್ರವು ಎಲ್ಲ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

‘ಭಾರತ ನಡೆಯತ್ತ ಗಮನ’: ‘ಈ ಹಿಂದೆ ಭಾರತದ ಮಾತನ್ನು ಬೇರೆ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈಗ ಭಾರತದ ನಡೆ ಹಾಗೂ ಅಭಿವೃದ್ಧಿಯ ಚಿಂತನೆಗಳನ್ನು ಇತರೆ ರಾಷ್ಟ್ರಗಳು ಎಚ್ಚರಿಕೆಯಿಂದ ಗಮನಿಸುತ್ತಿವೆ’ ಎಂದು ಪ್ರತಿಪಾದಿಸಿದರು.

‘ಭಾರತೀಯ ಸೇನೆ ವಿಶ್ವದ ಅತ್ಯುನ್ನತ ಸ್ಥಳದಲ್ಲಿ ಸೇತುವೆ ನಿರ್ಮಿಸಿದ ದಾಖಲೆ ಹೊಂದಿದೆ. ಭಾರತ ಯುದ್ಧ ಮಾಡುವುದಲ್ಲದೆ ಯುದ್ಧದಿಂದ ಸಮಸ್ಯೆಗೆ ಸಿಲುಕಿದ ರಾಷ್ಟ್ರಕ್ಕೂ ನೆರವು ನೀಡುತ್ತಿದೆ’ ಎಂದು ಅವರು ಹೇಳಿದರು.

‘ಮೊದಲ ಸ್ಥಾನಕ್ಕೆ ಭಾರತ’: ಭಾರತದ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದೆ. 2027 ಕ್ಕೆ ದೇಶವು ಆರ್ಥಿಕ ಸ್ಥಿತಿಯಲ್ಲಿ 3ನೇ ಸ್ಥಾನ ತಲುಪಲಿದೆ. 2047ಕ್ಕೆ ವಿಶ್ವದಲ್ಲಿಯೇ ಮೊದಲ ಸ್ಥಾನ ಗಳಿಸುವುದು ಖಚಿತ ಎಂದು ರಾಜನಾಥ್‌ ಸಿಂಗ್ ಅವರು ಹೇಳಿದರು.

ಇದೇ ವೇಳೆ ನಡೆದ ಯೋಧರ ಸಾಹಸ ಪ್ರದರ್ಶನವು ಮೈನವಿರೇಳಿಸಿತು. ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾನ್, ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT