ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಬ್ಲಾಕಿಂಗ್: ಶಾಸಕನ ಆಪ್ತನ ಖಾತೆಗೆ ಹಣ

ಬಾಬು ಸೇರಿ ಮೂವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು
Last Updated 18 ಜೂನ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಹಾಸಿಗೆ ಬ್ಲಾಕಿಂಗ್ ಪ್ರಕರಣದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಇನ್‌ಸ್ಪೆಕ್ಟರ್‌ ಶ್ರೀಧರ್ ಪೂಜಾರ ನೇತೃತ್ವದ ತಂಡ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 250 ಪುಟಗಳ ಆರೋಪ ಪಟ್ಟಿ ನೀಡಿದೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿದ್ದ ಹಾಸಿಗೆಗಳನ್ನು ಬ್ಲಾಕ್‌ ಮಾಡಿದ್ದ ಆರೋಪಿಗಳು, ಅವುಗಳನ್ನೇ ಹಣಕ್ಕಾಗಿ ಮಾರಾಟ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾದ ಬಾಬು, ಬೇಗೂರಿನ ನಿವಾಸಿ ನೇತ್ರಾವತಿ ಹಾಗೂ ಆಕೆಯ ಸ್ನೇಹಿತ ರೋಹಿತ್‌ಕುಮಾರ್‌ನನ್ನು ಬಂಧಿಸಲಾಗಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿದರು.

’40 ಮಂದಿ ಸಾಕ್ಷಿ ಹಾಗೂ ಹಣ ವರ್ಗಾವಣೆ ದಾಖಲಾತಿ ಸಮೇತ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಸದ್ಯದಲ್ಲೇ ಆರಂಭವಾಗಲಿದೆ’ ಎಂದೂ ತಿಳಿಸಿದರು.

ಮೂವರಿಗೆ ಹಾಸಿಗೆ ಮಾರಾಟ: ‘ಕೋವಿಡ್ ರೋಗಿಗಳಿಗೆ ಹಾಸಿಗೆಗಳು ಲಭ್ಯವಿವೆ’ ಎಂಬ ಜಾಹೀರಾತನ್ನು ಆರೋಪಿ ನೇತ್ರಾವತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು. ಇದಕ್ಕೆ ರೋಹಿತ್‌ಕುಮಾರ್ ಸಹಕರಿಸಿದ್ದ. ಜಾಹೀರಾತು ನೋಡಿದ್ದ ರೋಗಿಗಳು, ಹಾಸಿಗೆಗಾಗಿ ನೇತ್ರಾವತಿಯನ್ನು ಸಂಪರ್ಕಿಸಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಬಾಬು ಜೊತೆ ನಂಟು ಹೊಂದಿದ್ದ ನೇತ್ರಾವತಿ, ಆತನ ಮೂಲಕ ಮೂವರು ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸಿದ್ದಳು. ಅದಕ್ಕಾಗಿ ಒಬ್ಬರಿಂದ ₹ 80 ಸಾವಿರ, ಮತ್ತೊಬ್ಬರಿಂದ ₹ 25 ಸಾವಿರ ಹಾಗೂ ಇನ್ನೊಬ್ಬರಿಂದ ₹ 50 ಸಾವಿರ ಪಡೆದುಕೊಂಡಿದ್ದಳು. ಎಲ್ಲ ಹಣವನ್ನು ಗೂಗಲ್‌ ಪೇ ಹಾಗೂ ಫೋನ್ ಪೇ ಮೂಲಕ ಬಾಬುಗೆ ವರ್ಗಾಯಿಸಿದ್ದಳು. ಅದಕ್ಕೆ ಪ್ರತಿಯಾಗಿ ಬಾಬು, ನೇತ್ರಾವತಿ ಹಾಗೂ ರೋಹಿತ್‌ಕುಮಾರ್‌ಗೆ ಕಮಿಷನ್ ನೀಡಿದ್ದ. ಈ ಸಂಗತಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದೂ ತಿಳಿಸಿವೆ.

‘ಇನ್ನೊಬ್ಬ ರೋಗಿಗೂ ಹಾಸಿಗೆ ನೀಡುವ ಆಮಿಷವೊಡ್ಡಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತು. ಆ ರೋಗಿಯಿಂದಲೇ ಹೇಳಿಕೆ ಸಂಗ್ರಹಿಸಿ ಆರೋಪ ಪಟ್ಟಿ ಜೊತೆ ಲಗತ್ತಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

‘2 ಪ್ರಕರಣಗಳ ತನಿಖೆ ಪ್ರಗತಿಯಲ್ಲಿ’

‘ಜಯನಗರ ಠಾಣೆಗಳಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ಪೈಕಿ ಒಂದರಲ್ಲಿ ಇದೀಗ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಇನ್ನೊಂದು ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಾರ್‌ರೂಮ್‌ಗೆ ನುಗ್ಗಿ ಗಲಾಟೆ ಮಾಡಿದ್ದ ಬಾಬು ಹಾಗೂ ಆತನ ಬೆಂಬಲಿಗರ ವಿರುದ್ಧ ಐಎಎಸ್ ಪ್ರೊಬೇಷನರಿ ಅಧಿಕಾರಿ ವಿ. ಯಶವಂತ್ ನೀಡಿದ್ದ ದೂರಿನಡಿ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದರ ತನಿಖೆಯೂ ಪ್ರಗತಿಯಲ್ಲಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT