ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಹಿಡಿದ ತಂದೆ, ಕೂಲಿ ಮಾಡುವ ತಾಯಿ: ಪರಿಶಿಷ್ಟ ಜಾತಿ ಬಾಲಕನ ಕುಟುಂಬದ ಸಂಕಷ್ಟ

ಊರಿನಾಚೆ ಶೆಡ್‌ನಲ್ಲಿ ವಾಸ
Last Updated 21 ಸೆಪ್ಟೆಂಬರ್ 2022, 20:48 IST
ಅಕ್ಷರ ಗಾತ್ರ

ಕೋಲಾರ: ಅನಾರೋಗ್ಯಪೀಡಿತ ತಂದೆ, ಊರಿನಾಚೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಶೆಡ್‌ನಲ್ಲಿ ವಾಸ. ನಿತ್ಯ ಬೆಂಗಳೂರಿಗೆ ರೈಲಿನಲ್ಲಿ ಸಂಚರಿಸಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ತಾಯಿ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರದ ಬೆದರಿಕೆ.

– ಇದು ಬಹಿಷ್ಕಾರದ ಭೀತಿಯಲ್ಲಿ ಬದುಕುತ್ತಿರುವ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್‌ ಹೋಬಳಿಯ ಉಳ್ಳೇರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಬಾಲಕ ಚೇತನ್‌ ಕುಟುಂಬದ ಸ್ಥಿತಿ.

ಗ್ರಾಮ ಹೊರವಲಯದ ಗುಡ್ಡದ ಪಕ್ಕದ ಅರಣ್ಯ ಇಲಾಖೆ ಜಾಗದಲ್ಲಿ ಗುಬ್ಬಿ ಗೂಡಿನಂತಹ ಪುಟ್ಟ ಶೀಟ್‌ ಮನೆಯಲ್ಲಿ ಕುಟುಂಬ ವಾಸವಾಗಿದೆ. ಬಾಲಕನ ತಾಯಿ ಶೋಭಾ ಬೆಂಗಳೂರಿನ ವೈಟ್‌ಫೀಲ್ಡ್‌ನ ಖಾಸಗಿ ಸಂಸ್ಥೆಯೊಂದರ ಹೌಸ್‌ ಕೀಪಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ನಿತ್ಯ ರೈಲಿನಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಾರೆ. ₹300 ಕೂಲಿ ಸಿಗುತ್ತದೆ. ಪತಿ ರಮೇಶ್‌ ಬೈಕ್‌ ಅಪಘಾತದಲ್ಲಿ ಬೆನ್ನು, ಕಾಲಿಗೆ ಪೆಟ್ಟು ಮಾಡಿಕೊಂಡು ದುಡಿಯುಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಒಬ್ಬನೇ ಪುತ್ರ ಚೇತನ್‌ ಸಮೀಪದ ಟೇಕಲ್‌ನಲ್ಲಿ 10ನೇ ತರಗತಿ ಓದುತ್ತಿದ್ದಾನೆ.

‘ಹಲವಾರು ವರ್ಷಗಳಿಂದ ಊರಿನ ಮಧ್ಯದಲ್ಲಿ ಗುಡಿಸಲು ಮನೆಯಲ್ಲಿದ್ದೆವು. ಗ್ರಾಮಸ್ಥರ ಒತ್ತಾಯದಿಂದ ಊರ ಹೊರಗೆ ಹೋದೆವು’ ಎಂದು ಶೋಭಾ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಬಾಲಕನ ಕುಟುಂಬದ ಮನೆ ಮುರಿದು ಬೀಳುವ ಹಂತದಲ್ಲಿದ್ದರೂ ಗ್ರಾಮ ಪಂಚಾಯಿತಿಯಿಂದ ಈವರೆಗೆ ಮನೆ ನೀಡಿಲ್ಲ. ಊರಿನವರೆಲ್ಲಾ ಸೇರಿ ಕುಟುಂಬವನ್ನು ಹೊರಗೆ ಇಟ್ಟಿದ್ದಾರೆ’ ಎಂದು ಎಸ್‌.ಸಿ, ಎಸ್‌.ಟಿ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಸಮಿತಿ ಸದಸ್ಯ ವೆಂಕಟರಾಮ್‌ ಹೇಳುತ್ತಾರೆ.

ಸಾಲಕ್ಕಾಗಿ ಗೋಗರೆದಿದ್ದ ಮಹಿಳೆ: ₹60 ಸಾವಿರ ದಂಡ ಕಟ್ಟದಿದ್ದರೆ ಬಹಿಷ್ಕಾರ ಹಾಕಿ ಊರು ಬಿಟ್ಟು ಕಳುಹಿಸುತ್ತಾರೆ ಎಂಬ ಭಯದಿಂದ ಬಾಲಕನ ತಾಯಿ 12 ದಿನಗಳಿಂದ ಕಂಡಕಂಡವರಲ್ಲಿ ಸಾಲಕ್ಕಾಗಿ ಕೈಯೊಡ್ಡಿದ್ದರು. ಎಲ್ಲೆಂದರಲ್ಲಿ ಸಾಲ ಹುಡುಕಿಕೊಂಡು ಅಲೆದಿದ್ದರು. ಆದರೆ, ಎಲ್ಲಿಯೂ ಸಾಲ ಸಿಗದೆ ನಿರಾಸೆಯಿಂದ ಬರಿಗೈಯಲ್ಲಿ ಮರಳಿದ್ದರು.

‘ನನಗೆ ದಿನಕ್ಕೆ ಸಿಗುವುದೇ ₹300 ಕೂಲಿ. ಎಲ್ಲಿಂದ ₹60 ಸಾವಿರ ತಂದು ಕೊಡಲಿ ಎಂದು ಕೇಳಿದೆ. ಹಣ ನೀಡದಿದ್ದರೆ ಊರು ತೊರೆ ಯಬೇಕು. ಜೆಸಿಬಿ ಯಂತ್ರ ತಂದು ಮನೆ ಬೀಳಿಸುವುದಾಗಿ ಗ್ರಾಮಸ್ಥರು ಬೆದರಿಸಿ ದ್ದರು’ ಎಂದು ಅವರು ಕಣ್ಣೀರಿಟ್ಟರು.

ದೇವರ ಗುಜ್ಜುಕೋಲು ಮುಟ್ಟಿದನೆಂದು ಪರಿಶಿಷ್ಟ ಜಾತಿ ಬಾಲಕನಿಗೆ ಗ್ರಾಮದ ಕೆಲ ಒಕ್ಕಲಿಗ ಮುಖಂಡರು ₹ 60 ಸಾವಿರ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಿರುವ ಘಟನೆ ಸೆ. 8ರಂದು ನಡೆದಿತ್ತು. ಸೆ. 20ರಂದು ಘಟನೆ ಗೊತ್ತಾಗಿ ಗ್ರಾಮದ ಎಂಟು ಮಂದಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದೆ.

₹60 ಸಾವಿರಕ್ಕಾಗಿ 12 ದಿನ ತಳಮಳ

ಪರಿಶಿಷ್ಟ ಜಾತಿ ಬಾಲಕನಿಗೆ ಗ್ರಾಮದ ಕೆಲವು ಒಕ್ಕಲಿಗ ಮುಖಂಡರು ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಿ 12 ದಿನ ಕಳೆದರೂ ಪ್ರಕರಣ ರಹಸ್ಯವಾಗಿದ್ದ ಬಗ್ಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಅವಧಿಯಲ್ಲಿ ಕುಟುಂಬ ಅನುಭವಿಸಿದ ತಳಮಳ, ಸಂಕಷ್ಟ ಅಷ್ಟಿಷ್ಟಲ್ಲ. ಜೀವ ಬೆದರಿಕೆ ಕಾರಣ ಯಾರೂ ಬಳಿಯೂ ಸಮಸ್ಯೆ ಹೇಳಿಕೊಂಡಿಲ್ಲ. ₹60 ಸಾವಿರ ದಂಡದ ಹಣ ಹೊಂದಿಸಲು ಸಾಧ್ಯವಾಗದೆ ಕುಟುಂಬ ನಿದ್ದೆ ಇಲ್ಲದ ರಾತ್ರಿ ಕಳೆದಿದೆ.

ಜಿಲ್ಲಾಡಳಿತ, ಪೊಲೀಸ್‌, ಎಸ್‌.ಸಿ, ಎಸ್‌.ಟಿ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಸಮಿತಿ, ಸಂಘಟನೆಗಳು, ಜಿಲ್ಲಾಡಳಿತಕ್ಕೂ ಈ ಬಗ್ಗೆ ಮಾಹಿತಿ ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT