ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಿಂದ ಬೆಂಗಳೂರು – ಹಾಸನ ಡೆಮು ರೈಲು: ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ

ಭಾನುವಾರ ಹೊರತುಪಡಿಸಿ ನಿತ್ಯ ರೈಲು ಸಂಚಾರ: ಪ್ರಯಾಣದ ಖರ್ಚು ಉಳಿತಾಯ
Last Updated 4 ಏಪ್ರಿಲ್ 2022, 19:46 IST
ಅಕ್ಷರ ಗಾತ್ರ

ಹಾಸನ: ಬೆಂಗಳೂರು– ಹಾಸನ ನಡುವೆ ಏ. 8ರಿಂದ ‘ಡೆಮು ರೈಲು’ ಸಂಚಾರ ಆರಂಭವಾಗಲಿದೆ.

‘ಕೋವಿಡ್‌ ಮೊದಲ ಅಲೆ ಪೂರ್ವದಲ್ಲಿ ಡೆಮು ರೈಲು ಯಶವಂತಪುರ– ಹಾಸನ ನಡುವೆ ಸಂಚರಿಸುತ್ತಿತ್ತು. ಸೋಂಕು ನಿಯಂತ್ರಣಕ್ಕಾಗಿ ಸಂಚಾರ ಸ್ಥಗಿತವಾಗಿತ್ತು. ಈಗ ಯಶವಂತಪುರ ನಿಲ್ದಾಣದ ಬದಲು ಡೆಮು ರೈಲು ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದಲೇ ಸಂಚಾರ ಆರಂಭಿಸಲಿದೆ’ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದೆ.

ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುವ ರೈಲು ನಿತ್ಯ ಬೆಳಿಗ್ಗೆ 9.45ಕ್ಕೆ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಹೊರಟು ಯಶವಂತಪುರ ರೈಲು ನಿಲ್ದಾಣಕ್ಕೆ 9.57ಕ್ಕೆ ಬರಲಿದೆ. ಅಲ್ಲಿಂದ 9.59ಕ್ಕೆ ಹೊರಟು ಕುಣಿಗಲ್‌, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮಾರ್ಗವಾಗಿ 1.45ಕ್ಕೆ ಹಾಸನ ರೈಲು ನಿಲ್ದಾಣ ತಲುಪಲಿದೆ.

ಹಾಸನ ರೈಲು ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ನಿಲುಗಡೆ ನಂತರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿಗೆ ಹೊರಡುವ ಡೆಮು ರೈಲು ಬೆಂಗಳೂರು ಸಿಟಿ ನಿಲ್ದಾಣಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ. ಎಂಟು ಬೋಗಿಗಳಿರುವ ಡೆಮು ರೈಲಿಗೆ ಹಾಸನ– ಬೆಂಗಳೂರು ಸಿಟಿ ರೈಲು ನಿಲ್ದಾಣಗಳ ನಡುವೆ ಇರುವ ಹದಿನೈದು ನಿಲ್ದಾಣದಲ್ಲೂ ನಿಲುಗಡೆಯಿದೆ.

ರೈಲು ಮೆಜೆಸ್ಟಿಕ್‌ ನಿಲ್ದಾಣ ತಲುಪಿದ ನಂತರ ದೇವನಹಳ್ಳಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಮರುದಿನ ಹಾಸನಕ್ಕೆ ಬರುವುದರಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

‘ಹಾಸನ– ಬೆಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇನ್ನೂ ಹೆಚ್ಚು ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ’ ಎಂದು ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ.ಲೋಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರು ಸಿಟಿ - ಹಾಸನ ನಡುವೆ ಡೆಮು ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿದೆ. ಬಸ್ ಪ್ರಯಾಣ ದರ ದುಬಾರಿಯಾಗುತ್ತಿರುವ ಈಗಿನ ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ ರೈಲುಗಳಲ್ಲಿ ಪ್ರಯಾಣ ಮಾಡಬಹುದು. ಹಾಸನ ಮತ್ತು ತುಮಕೂರು ಜಿಲ್ಲೆಯ ಜನರು ಡೆಮು ರೈಲು ಸಂಚಾರದ ಸೌಲಭ್ಯವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

***

ಹಾಸನ - ಚಿಕ್ಕಬಾಣಾವರ ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣವಾದ ನಂತರ ಈ ಡೆಮು ರೈಲು ಮೆಮು ರೈಲು ಆಗಿ 16 ಬೋಗಿಗಳವರೆಗೂ ವಿಸ್ತರಣೆಯಾಗಲು ಅವಕಾಶವಿದೆ.

- ಟಿ.ಪಿ.ಲೋಕೇಶ್, ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT