ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾಗ್ಯಲಕ್ಷ್ಮಿ' ಯೋಜನೆ ಅಂಚೆ ಇಲಾಖೆ ಮೂಲಕ ಜಾರಿ

‘ಸುಕನ್ಯಾ ಸಮೃದ್ಧಿ’ ಮೂಲಕ ಮುಂದುವರಿಕೆ: ಸಂಪುಟ ಸಭೆ ನಿರ್ಧಾರ
Last Updated 22 ಅಕ್ಟೋಬರ್ 2020, 11:43 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆಚ್ಚಿನ ಯೋಜನೆಯಾದ ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಮೂಲಕ ಮುಂದುವರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

ಇನ್ನು ಮುಂದೆ ಈ ಯೋಜನೆಗೆ ಎಲ್‌ಐಸಿ ಬದಲು ಅಂಚೆ ಇಲಾಖೆ ಏಜೆನ್ಸಿಯಾಗಿರುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಅದಕ್ಕೆ ಸಚಿವ ಸಂಪುಟದ ಒಪ್ಪಿಗೆ ಸಿಗಬೇಕಿತ್ತು. ಕಳೆದ ಮೇ ತಿಂಗಳಿನಲ್ಲೇ ‘ಪ್ರಜಾವಾಣಿ’ ಏಜೆನ್ಸಿ ಬದಲಾವಣೆಯ ವಿಷಯವನ್ನು ಪ್ರಕಟಿಸಿತ್ತು.

ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿ ಮಾಡುವುದರಿಂದ ಫಲಾನುಭವಿಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಸರ್ಕಾರದ ಭರವಸೆಯಂತೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ₹1 ಲಕ್ಷ ಸಿಗುತ್ತದೆ. ಭಾರತೀಯ ಜೀವ ವಿಮಾ ನಿಗಮವು ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್‌ ಮುಚ್ಯುರಿಟಿ ಆದ ಬಳಿಕ ₹1 ಲಕ್ಷ ಪಾವತಿ ಮಾಡಲು ತಕರಾರು ಮಾಡುತ್ತಲೇ ಇತ್ತು. ಈ ವಿಷಯ ಕಳೆದ ಬಜೆಟ್‌ ತಯಾರಿಕೆ ಸಂದರ್ಭದಲ್ಲಿ ಚರ್ಚೆಗೆ ಬಂದಿತ್ತು. ಬಡ್ಡಿ ದರ ಕಡಿಮೆ ಇರುವುದರಿಂದ ಕಡಿಮೆ ಬೀಳುವ ಮೊತ್ತವನ್ನು ಸರ್ಕಾರವೇ ಭರಿಸಿಕೊಡಬೇಕು ಎಂದು ಎಲ್‌ಐಸಿ ಸರ್ಕಾರದ ಮೇಲೆ ಒತ್ತಡ ಹಾಕಿತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ಕಾರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯ ಸಮೃದ್ಧಿಗೆ ವರ್ಗಾಯಿಸಲಾಗಿದೆ. ಜೀವ ವಿಮಾ ನಿಗಮದ ಬೇಡಿಕೆ ಈಡೇರಿಸಲು ಹೊರಟರೆ ರಾಜ್ಯ ಸರ್ಕಾರ ವಾರ್ಷಿಕ ₹2,000 ಕೋಟಿ ಗೂ ಹೆಚ್ಚು ಹಣ ತುಂಬಿ ಕೊಡಬೇಕಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಅನಗತ್ಯ ಹೊರೆ ಆಗುತ್ತಿತ್ತು. ಆದ್ದರಿಂದ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಅಂಚೆ ಇಲಾಖೆಗೆ ನೀಡುವುದೆಂದರೆ ಏಜೆನ್ಸಿ ಬದಲಾವಣೆ ಮಾಡಿದಂತೆ. ಫಲಾನುಭವಿಗಳಿಗೆ ₹1 ಲಕ್ಷ ಸಿಗುತ್ತದೆ ಎಂದು ಅವರು ತಿಳಿಸಿದರು.

ಬಿಪಿಎಲ್‌ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಅವರಿಗೆ ಬಾಂಡ್‌ ನೀಡುವ ಯೋಜನೆ ಇದಾಗಿದೆ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದರು.

ಸಂಪುಟದ ಪ್ರಮುಖ ನಿರ್ಧಾರಗಳು:

*ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು 2020 ಕ್ಕೆ ಅನುಮೋದನೆ

*ಉಡುಪಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಆಸ್ಪತ್ರೆ ಕಟ್ಟಡ, ಸಿಬ್ಬಂದಿ ವಸತಿ ಗೃಹಗಳು ಮತ್ತು ಇತರೆ ಮೂಲ ಸೌಕರ್ಯ ಕಾಮಗಾರಿಗಳನ್ನು ₹115 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

*ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ ಕರಾವಳಿ ಮೂರು ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಮತ್ತು ಪ್ರಸರಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ₹26.92 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

*ಬಹುಗ್ರಾಮ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗೌತಮಪುರ ಮತ್ತು ಇತರ 127 ಜನವಸತಿಗಳಿಗೆ ಕುಡಿಯುವ ನೀರು ಯೋಜನೆಯ ಪರಿಷ್ಕೃತ ಅಂದಾಜು ₹91.50 ಕೋಟಿಗೆ ಅನುಮೋದನೆ.

*ಬಿಬಿಎಂಪಿ ವ್ಯಾಪ್ತಿಯ ಚಿಕ್ಕನಾಗಮಂಗಲದಲ್ಲಿ ಫ್ರೆಂಚ್‌ ಕಂಪನಿ 500 ಮೆಟ್ರಿಕ್‌ ಟನ್‌ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪನೆಗೆ ನೀಡಿದ್ದ ಅನುಮೋದನೆ ಹಿಂಪಡೆಯಲಾಗಿದೆ.

*ಮುಧೋಳ ಪಟ್ಟಣಕ್ಕೆ ಬೈಪಾಸ್‌ ರಸ್ತೆ ನಿರ್ಮಿಸಲು₹109.81 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

*ಮುಧೋಳ ತಾಲ್ಲೂಕು ತಿಮ್ಮಾಪುರದ ರತ್ನನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿಯಮಿತವನ್ನು 40 ವರ್ಷಗಳ ಅವಧಿಗೆ ಎಲ್‌ಆರ್‌ಓಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ.

* ಪಶ್ಚಿಮ ವಾಹಿನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಬಿಳಿಯೂರು ಗ್ರಾಮದ ಬಳಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ₹46.70 ಕೋಟಿ ನೀಡಲು ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT