ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೋ ಯಾತ್ರೆಯಿಂದ ಚುನಾವಣೆಯಲ್ಲಿ ರಾಜಕೀಯ ಲಾಭ: ಸಿದ್ದರಾಮಯ್ಯ

Last Updated 18 ಸೆಪ್ಟೆಂಬರ್ 2022, 11:08 IST
ಅಕ್ಷರ ಗಾತ್ರ

ಮೈಸೂರು: ‘ಪಕ್ಷದ ನಾಯಕ ರಾಹುಲ್‌ ಗಾಂಧಿ ನಡೆಸುತ್ತಿರುವ ‘ಭಾರತ್ ಜೋಡೋ’ ಯಾತ್ರೆಯನ್ನು ಯಶಸ್ವಿಗೊಳಿಸುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಖಂಡಿತವಾಗಿಯೂ ರಾಜಕೀಯವಾಗಿ ಲಾಭವಾಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಜೋಡೋ’ ಪಾದಯಾತ್ರೆ ಪೂರ್ವ ಸಿದ್ಧತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರು, ಮಾಜಿ ಶಾಸಕರು ಹಾಗೂ ನಾಯಕರು ಯಾತ್ರೆಯಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ರಾಹುಲ್ ಗಾಂಧಿಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಿಜೆಯವರು ಲಜ್ಜೆಗೆಟ್ಟವರು. ರಾಜ್ಯ ಸರ್ಕಾರದಲ್ಲಷ್ಟೆ ಅಲ್ಲ, ಕೇಂದ್ರದಲ್ಲೂ ‌ಭ್ರಷ್ಟಾಚಾರ ನಡೆಯುತ್ತಿದೆ. ನಾನು ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ ಎನ್ನುವ ಮೋದಿ ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದವರು ಕೊಟ್ಟಿರುವ ಶೇ 40ರಷ್ಟು ಕಮಿಷನ್‌ ದೂರನ್ನು ಪರಿಗಣಿಸಲೇ ಇಲ್ಲ. ಚೌಕಿದಾರ ಎಂದು ಹೇಳಿಕೊಂಡಿರಲ್ಲಾ, ಅದೆಲ್ಲಿ ಕಾವಲುಗಾರನ ಕೆಲಸ ಮಾಡುತ್ತಿದ್ದೀರಿ ಮೋದಿ ಅವರೇ?’ ಎಂದು ವ್ಯಂಗ್ಯವಾಗಿ ಕೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ರಾಹುಲ್ ಜೊತೆ ನಡೆಯುವ ಅವಕಾಶವನ್ನು ಮೈಸೂರಿನವರು ಕಳೆದುಕೊಳ್ಳಬಾರದು. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ,ಯಾರೂ ಮಿತ್ರರಲ್ಲ. ಈ ಭಾಗದಲ್ಲಿ ನಡೆಯುವ ನಡಿಗೆಯಲ್ಲಿ ಪಕ್ಷದ ದೊಡ್ಡ ನಾಯಕಿಯೊಬ್ಬರು ಭಾಗವಹಿಸಲಿದ್ದಾರೆ. ಇಡೀ ರಾಜ್ಯಕ್ಕೆ ಸಂದೇಶ ರವಾನಿಸುವ ಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ತಪಾಸಣೆಗೆ ಒಳಗಾದ ಡಿಕೆಶಿ

ಸಭೆಯ ನಡುವೆಯೇ ಶಿವಕುಮಾರ್‌ ಆರೋಗ್ಯ ತಪಾಸಣೆಗೆ ಒಳಗಾದರು. ದೇಹದ ತಾಪಮಾನ ಹಾಗೂ ರಕ್ತದೊತ್ತಡ ಪ್ರಮಾಣವನ್ನು ವೈದ್ಯರು ಪರೀಕ್ಷಿಸಿದರು. ‘ಪಾದಯಾತ್ರೆಯ ಸಿದ್ಧತೆಯಲ್ಲಿ ತೊಡಗಿದ್ದೇನೆ. ಬಹಳ ಸುಸ್ತಾಗಿದೆ. ಊರು ಬಿಟ್ಟು 11 ದಿನಗಳಾದವು. ವಿಧಾನಮಂಡಲ ಅಧಿವೇಶನಕ್ಕೆ ಹೋಗಲಾಗಿಲ್ಲ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಯಾತ್ರೆ ತಯಾರಿಯಲ್ಲಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT