ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಚೇತನ ಮತ್ತೆ ಜಾರಿ: ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಬೊಮ್ಮಾಯಿ 

Last Updated 14 ಜುಲೈ 2022, 13:21 IST
ಅಕ್ಷರ ಗಾತ್ರ

ಬೆಂಗಳೂರು: ’ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಭೂಚೇತನ ಯೋಜನೆಯನ್ನು ಮರು ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಣ್ಣಿನಲ್ಲಿ ಪೋಷಕಾಂಶ ಹೆಚ್ಚಿಸಲು ಭೂಚೇತನ ಯೋಜನೆ ಜಾರಿಗೊಳಿಸಿದ್ದರು. ಮಣ್ಣಿನ ಆರೋಗ್ಯ ಮತ್ತು ಸಂರಕ್ಷಣೆ ದೃಷ್ಟಿಯಿಂದ ಮತ್ತೆ ಈ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕೇಂದ್ರಿತ ನೀತಿಗಳನ್ನು ರೂಪಿಸುವ ಅಗತ್ಯವಿದೆ. ಆಹಾರ ಭದ್ರತೆ ಒದಗಿಸುತ್ತಿರುವ ಕೃಷಿ ಕ್ಷೇತ್ರ ಈ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಆದರೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರೀಕ್ಷಿತ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ’ ಎಂದರು.

‘ಸ್ವಾತಂತ್ರ್ಯ ದೊರೆತ ನಂತರ ಮೊದಲ 15 ವರ್ಷಗಳಲ್ಲಿ ಕೃಷಿ ಕ್ಷೇತ್ರದ ಮಹತ್ವವನ್ನು ಅರಿತುಕೊಳ್ಳಲಿಲ್ಲ. ಹೀಗಾಗಿಯೇ, ಕೃಷಿ ಕ್ಷೇತ್ರ ಹಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ರೈತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿಯೂ ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು.

ಕೇಂದ್ರ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮಾನ್ಸುಖ್‌ ಮಾಂಡವೀಯ ಮಾತನಾಡಿ, ’ದೇಶಿಯವಾಗಿ ಅಭಿವೃದ್ಧಿಪಡಿಸಿರುವ ನ್ಯಾನೊ ರಸಗೊಬ್ಬರ ಬಳಕೆಗೆ ರಾಜ್ಯ ಸರ್ಕಾರಗಳು ಹೆಚ್ಚು ಉತ್ತೇಜನ ನೀಡಬೇಕು’ ಎಂದು ಹೇಳಿದರು.

‘ಪ್ರತಿ ವರ್ಷ ಭಾರತ ಸುಮಾರು 70 ಲಕ್ಷ ಮೆಟ್ರಿನ್‌ ಟನ್‌ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದೆ. ಜಗತ್ತಿನ ಒಟ್ಟು ರಸಗೊಬ್ಬರದಲ್ಲಿ ಭಾರತದಲ್ಲೇ ಶೇ 35ರಷ್ಟು ಬಳಸಲಾಗುತ್ತಿದೆ’ ಎಂದು ವಿವರಿಸಿದರು.

‘ರೈತರಿಗೆ ಅತಿ ಹೆಚ್ಚಿನ ಸಬ್ಸಿಡಿ ದರದಲ್ಲಿ ರಸಗೊಬ್ಬರವನ್ನು ಪೂರೈಸಲಾಗುತ್ತಿದೆ. ಕೇಂದ್ರ ಸರ್ಕಾರವು ರಸಗೊಬ್ಬರಕ್ಕೆ ಸುಮಾರು 2.5 ಲಕ್ಷ ಕೋಟಿ ಮೊತ್ತದಷ್ಟು ಸಬ್ಸಿಡಿಯನ್ನು ನೀಡುತ್ತಿದೆ. ಇದು ಕರ್ನಾಟಕದಂತಹ ರಾಜ್ಯಗಳ ವಾರ್ಷಿಕ ಬಜೆಟ್‌ನಷ್ಟು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT