ಮಂಗಳವಾರ, ಅಕ್ಟೋಬರ್ 20, 2020
23 °C
ಸಾಲ ವಿತರಣೆಯಲ್ಲಿ ₹ 50 ಕೋಟಿ ಅಕ್ರಮ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಕ್ರಮ: ವಿದ್ಯಾರ್ಥಿ ವೇತನ ಹಣ ಮಸೀದಿಗೆ ವರ್ಗಾವಣೆ

ಎಸ್. ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

Vidhan soudha

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ‘ವಿದ್ಯಾರ್ಥಿ ವೇತನ’ ಹಣವನ್ನು ಬೇಕಾಬಿಟ್ಟಿ ಹಂಚಿರುವುದರ ಜತೆಗೆ, ವಿದ್ಯಾರ್ಥಿಗಳಿಗೆ ಸಾಲ ನೀಡುವ ಅರಿವು–1 ಯೋಜನೆಯಲ್ಲಿ ಇಲಾಖಾ ಸಿಬ್ಬಂದಿ ಭಾರಿ ಅಕ್ರಮ ನಡೆಸಿರುವುದು ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

* ಪ್ರಕರಣ 1– ವಿದ್ಯಾರ್ಥಿ ವೇತನಕ್ಕೆ ಕತ್ತರಿ

ಮುಸ್ಲಿಂ ಸಮುದಾಯದ ವಿದ್ಯಾರ್ಥಿ ವೇತನಕ್ಕಾಗಿ ಮೀಸಲಿಟ್ಟ ಹಣವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮಸೀದಿ, ದರ್ಗಾ ಮತ್ತು ಪ್ರತಿಷ್ಠಿತ ಸಂಘ– ಸಂಸ್ಥೆಗಳಿಗೆ ವಿಶೇಷ ಅನುದಾನವಾಗಿ ₹ 5.20 ಕೋಟಿ ಬಿಡುಗಡೆ ಮಾಡಿದೆ.

ರಾಜ್ಯದ ಮಸೀದಿ, ದರ್ಗಾ ಮತ್ತು ಮುಸ್ಲಿಂ ಸಮುದಾಯದ ಸಂಘ– ಸಂಸ್ಥೆಗಳಿಗೆ 2019–20ನೇ ಸಾಲಿಗೆ ವಿಶೇಷ ಅನುದಾನ ಬಿಡುಗಡೆಗೆ ಹಣದ ಕೊರತೆ ಆಗಿದ್ದು, ವಿದ್ಯಾರ್ಥಿ ವೇತನದ ಹಣವನ್ನು ಬಳಕೆ ಮಾಡಲು ಅನುಮತಿ ನೀಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆರ್ಥಿಕ ಇಲಾಖೆಗೆ ಪತ್ರ ಬರೆದಿತ್ತು. ಒಟ್ಟು ₹ 5.20 ಕೋಟಿಯನ್ನು ಪುನರ್ವಿನಿಯೋಗ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

* ಪ್ರಕರಣ 2– ನಕಲಿ ಖಾತೆಗಳಿಗೆ ಸಾಲ

ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಸಾಲ ಸೌಲಭ್ಯ ನೀಡುವ ‘ಅರಿವು–2’ ಯೋಜನೆಯಲ್ಲೂ ಭಾರಿ ಅಕ್ರಮ ನಡೆದಿದೆ. ಅಲ್ಪಸಂಖ್ಯಾತರ ನಿಗಮದ ಕೆಲ ಸಿಬ್ಬಂದಿ ಸೇರಿ ಆನ್‌ಲೈನ್ ನಕಲಿ‌ ಖಾತೆಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡು, ಹಣವನ್ನು ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಜಿ.ರೆಹಮಾನ್‌ ಶರೀಫ್‌ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಆರ್‌.ಟಿ.ನಗರ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್‌ (ಅಪರಾಧ ಸಂಖ್ಯೆ 0019/2019) ದಾಖಲಾಗಿದ್ದು, ಹಣ ದುರುಪಯೋಗದ ಮೊತ್ತ ಸುಮಾರು ₹ 50 ಕೋಟಿಗೂ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ 2019ರಲ್ಲಿ ಎರಡು ಪತ್ರಗಳನ್ನು ಬರೆದಿದ್ದಾರೆ. ಆದರೆ, ಅದಕ್ಕೆ ಉತ್ತರ ನೀಡಿಲ್ಲ.

ಆ ಬಳಿಕ, 2020 ಫೆಬ್ರುವರಿಯಲ್ಲಿ ಹಣ ದುರುಪಯೋಗದ ಬಗ್ಗೆ ಚರ್ಚಿಸಲು ವಿಕಾಸಸೌಧದಲ್ಲಿ ಇಲಾಖೆ ಸಭೆಯನ್ನೂ ಕರೆದಿತ್ತು. ‘ ಸಭೆಯಿಂದ ಪ್ರಯೋಜನ ಆಗಿಲ್ಲ’ ಎಂದು ರೆಹಮಾನ್‌ ಶರೀಫ್‌ ಅವರು ಮತ್ತೊಂದು ಪತ್ರ ಬರೆದು, ‘ಇಲಾಖೆಯ ಕಾರ್ಯದರ್ಶಿಯವರೇ ಈ ಹಗರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡದೇ ತಪ್ಪಿತಸ್ಥರನ್ನು ರಕ್ಷಿಸುತ್ತಿದಾರೆ. ಆದ್ದರಿಂದ ಡಿಪಿಎಆರ್‌ ಮೂಲಕ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಿಬ್ಬಂದಿಯಿಂದಲೇ ದುರುಪಯೋಗ

ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಪಡೆಯಲು ಅರಿವು–2 ಯೋಜನೆ ಇದೆ. ಆದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಿಬ್ಬಂದಿಯೇ ನಕಲಿ ಇ–ಮೇಲ್‌ ಖಾತೆಗಳನ್ನು ಸೃಷ್ಟಿಸಿ, ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.

ಆರ್‌.ಟಿ.ನಗರ ಪೊಲೀಸರು ಸಿಬಿಐ ರಸ್ತೆಯ ಕರ್ನಾಟಕ ಬಿರಿಯಾನಿ ಪಾಯಿಂಟ್‌ ಪಕ್ಕದ ಕೊಠಡಿಯ ಮೇಲೆ ದಾಳಿ ನಡೆಸಿ, ಅಕ್ರಮದಲ್ಲಿ ನಿರತರಾಗಿದ್ದ ನಾಲ್ವರನ್ನು 2019ರ ಜ. 29ರಂದು ಬಂಧಿಸಿದ್ದರು. ಅವರಿಂದ ಎರಡು ಲ್ಯಾಪ್‌ಟಾಪ್, ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಸೀಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರಲ್ಲಿ ಒಬ್ಬ ಇಲಾಖೆ ಸಿಬ್ಬಂದಿ ಉಳಿದವರು ಗುತ್ತಿಗೆ ನೌಕರರು. 

ತನಿಖೆಯ ವೇಳೆಯಲ್ಲಿ ಅವರು ‘ಅರಿವು–2’ ವೆಬ್‌ಸೈಟ್‌ ನಲ್ಲಿ ಲಾಗ್‌ ಇನ್ ಆಗಿ ಸಾಲ ಮಂಜೂರು ಮಾಡಿಸಿಕೊಂಡು, ಆ ಹಣವನ್ನು ನ್ಯಾಷನಲ್‌ ಅಕಾಡೆಮಿ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಐಸಿಐಸಿಐ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ ಸಂದಾಯ ಯಾರಿಗೆ

ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘ ಚಿತ್ರದುರ್ಗ(₹70 ಲಕ್ಷ), ಜಾಮಿಯಾ ಮರ್ಕಜ್‌, ಗದಗ (₹1 ಕೋಟಿ), ದಿ ಬ್ಯಾರಿ ವೆಲ್ಫೇರ್‌ ಅಸೋಸಿಯೇಷನ್‌(₹1 ಕೋಟಿ), ಹಜರತ್‌ ಹಮೀದ್ ಶಾ ಕಾಂಪ್ಲೆಕ್ಸ್‌, ಬೆಂಗಳೂರು (₹1 ಕೋಟಿ), ಸೈಯದ್‌ ಮದನಿ ದರ್ಗಾ ಉಳ್ಳಾಲ (₹1 ಕೋಟಿ), ಸಾಹಿಬ್ ಥಂಗಲ್‌ ಸೆಂಟರ್‌ ಫಾರ್‌ ಹ್ಯುಮ್ಯಾನಿಟಿ,(₹1 ಕೋಟಿ) ಮತ್ತು ಮಸ್ಜಿದ್‌ ಎ ತಾಹಾ, ಬೆಂಗಳೂರು (₹50 ಲಕ್ಷ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು