ಗುರುವಾರ , ಅಕ್ಟೋಬರ್ 6, 2022
22 °C

2013–17ರಲ್ಲೂ ಪಿಎಸ್‌ಐ ನೇಮಕಾತಿ ಅಕ್ರಮ: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2013ರಲ್ಲಿ ನಡೆದ ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಅವುಗಳ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಪಿ.ರಾಜೀವ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’2013 ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪರೀಕ್ಷೆಯನ್ನೇ ಬರೆಯದ ಹಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಥವರು ಕರ್ತವ್ಯಕ್ಕೂ ಹಾಜರಾಗಿದ್ದಾರೆ.  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದರ ಸುಳಿವು ಪಡೆದು ವರದಿ ಪಡೆದಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕರ ಹುದ್ದೆ ನಿರ್ವಹಿಸುತ್ತಿದ್ದ ಸುಮಾರು 30 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ‘ ಎಂದು ಹೇಳಿದರು.

‘ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಪಾರದರ್ಶಕ ತನಿಖೆ ನಡೆಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ನಮ್ಮ ಸರ್ಕಾರ ಬಂಧಿಸಿದೆ. ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಆ ದೂರಿನಲ್ಲಿ ಮಂಜುನಾಥ್ ಎಂಬುವರು, 2013 ರಿಂದ 2017 ರವರೆಗೆ ಡಿವೈಎಸ್ಪಿ, ಪಿಎಸ್‌ಐ, ಎಫ್‌ಡಿಸಿ, ಎಸ್‌ಡಿಸಿ ಮತ್ತಿತರ ಹುದ್ದೆಗಳನ್ನು ಕೊಡಿಸುವುದಾಗಿ ಸುಮಾರು ₹18 ಕೋಟಿಯನ್ನು ಸಾರ್ವಜನಿಕರಿಂದ ವಸೂಲಿ ಮಾಡಿದ್ದರು. ಅಕ್ರಮದಲ್ಲಿ ಭಾಗಿಯಾಗಿದ್ದ ಲಕ್ಷ್ಮೀಕಾಂತ್ ಮತ್ತು ಲೋಕೇಶ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಎಂದು ತಿಳಿಸಲಾಗಿತ್ತು. ಅಂದಿನ ಕಾಂಗ್ರೆಸ್‌ ಸರ್ಕಾರ ತನಿಖೆ ಮಾಡಿದ್ದರೆ ಮುಂದಿನ ಹಗರಣವನ್ನು ತಡೆಯಬಹುದಿತ್ತು’ ಎಂದು ರಾಜೀವ್ ದೂರಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ’2012–13 ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿ 3,407 ಹುದ್ದೆಗಳು, 2014–15 ರ ಸಾಲಿನಲ್ಲಿ 1,689 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿಯಲ್ಲಿ ಕಡಿಮೆ ಅಂಕ ಪಡೆದವರಿಗೆ ಮತ್ತು ಪರೀಕ್ಷೆ ಬರೆಯದವರನ್ನೂ ಆಯ್ಕೆ ಮಾಡಲಾಗಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯ ಒಬ್ಬರು ಮತ್ತು 12 ಶಿಕ್ಷಕರನ್ನು ಬಂಧಿಸಲಾಗಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು