ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸತ್ಯ, ಹಿಂಸೆಯ ಹಾದಿಯಲ್ಲಿ ಬಿಜೆಪಿಗೆ ನಂಬಿಕೆ: ಸಿದ್ದರಾಮಯ್ಯ

Last Updated 2 ಅಕ್ಟೋಬರ್ 2021, 18:42 IST
ಅಕ್ಷರ ಗಾತ್ರ

ಬೆಂಗಳೂರು: ‘ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನುಮಹಾತ್ಮ ಗಾಂಧಿ ತೋರಿದ್ದರೆ, ಅಸತ್ಯ ಮತ್ತು ಹಿಂಸೆಯ ಹಾದಿಯಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಎರಡೂ ತದ್ವಿರುದ್ಧ. ಅವರು ಏನು ಹೇಳುತ್ತಾರೊ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ. ಮೋದಿ ಅವರು ಯಾವುದನ್ನು ಉಳಿಸುತ್ತೇನೆ ಎನ್ನುತ್ತಾರೋ ಅದನ್ನು ನಾಶ ಮಾಡಲು ಹೊರಟಿದ್ದಾರೆ ಎಂದರ್ಥ’ ಎಂದರು.

‘10 ತಿಂಗಳುಗಳಿಂದ ರೈತರು ದೇಶದಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತುಕತೆಯ ಬದಲು, ಕ್ರೌರ್ಯ ಮತ್ತು ಬಲಪ್ರಯೋಗದ ಮೂಲಕ ಹೋರಾಟ ಅಂತ್ಯಗೊಳಿಸಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದರು.

‘ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಈಗಿನ ರಾಜಕಾರಣದಲ್ಲಿ ನೈತಿಕತೆ ಕಣ್ಮರೆಯಾಗಿದೆ’ ಎಂದರು.

ಕಾಂಗ್ರೆಸ್ಸಿಗ ಎನ್ನುವುದೇ ಹೆಮ್ಮೆ: ‘ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಪ್ರಧಾನಿ ಮೋದಿ, ರೈತಪರ ಹೋರಾಟ ನಡಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದರು.

‘ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳುವುದೇ ಹೆಮ್ಮೆ. ಕಾಂಗ್ರೆಸ್ ಸದಸ್ಯತ್ವವೇ ನಮಗೆ ಪವಿತ್ರ ಸ್ಥಾನ. ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಸಲಾಗಿದ್ದು, ಕಾಂಗ್ರೆಸ್ ಸಂಸ್ಥಾಪನಾ ದಿನದಂದು (ಡಿ. 28) ಅದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ’ ಎಂದರು.

‘75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಪಕ್ಷದಿಂದ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ನಾಯಕರು 6,000 ಪಂಚಾಯಿತಿ, 1,800 ವಾರ್ಡ್‌ಗಳಲ್ಲಿ ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಈ ತಿಂಗಳ ಒಳಗಾಗಿ ಕೆಪಿಸಿಸಿ ಸಮಿತಿ ಪುನಾರಚನೆಯಾಗಲಿದೆ. ಕಾಂಗ್ರೆಸ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮತ್ತೊಂದು ಸಮಿತಿ ರೂಪಿಸಲಾಗುತ್ತಿದೆ’ ಎಂದರು.

ಪಕ್ಷದ ಮುಖಂಡರಾದ ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT