ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರಿಂದ ಹಲ್ಲೆ ಆರೋಪ: ಪ್ರತಿಭಟನೆ

ಆರ್‌.ಆರ್‌. ನಗರ: ಆರೋಪ– ಪ್ರತ್ಯಾರೋಪ
Last Updated 22 ಅಕ್ಟೋಬರ್ 2020, 4:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿದ ಆರ್‌.ಆರ್‌. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಆ ಪಕ್ಷದ ಮುಖಂಡ ವೇಲು ನಾಯ್ಕರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್‌ ನಾಯಕರು ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

‘ಆರ್‌.ಆರ್‌. ನಗರ ಕ್ಷೇತ್ರದ ಲಕ್ಷ್ಮೀದೇವಿನಗರ ಮತಗಟ್ಟೆ ಸಂಖ್ಯೆ 156ರ ಬಳಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸುತ್ತಿದ್ದ ಸ್ಥಳೀಯ ವಾರ್ಡ್ ಅಧ್ಯಕ್ಷ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರಾದ ವೇಲು ನಾಯ್ಕರ್ ಮತ್ತು 30ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕ ಹರಿದುಹಾಕಿದ್ದಾರೆ. ಅಲ್ಲದೆ, ಮಾಜಿ ಸಂಸದ ಧ್ರುವನಾರಾಯಣ್‌ರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರ ಕಾರ್ಯಕ್ಕೆ ವೇಲು ನಾಯ್ಕರ್ ಮತ್ತು ಮುನಿರತ್ನ ಬೆಂಬಲಿಗರು ಅಡ್ಡಿಪಡಿಸಿದ್ದಾರೆ’ ಎಂದೂ ದೂರಿದರು.

‘ಮುನಿರತ್ನ ಮತ್ತು ವೇಲು ನಾಯ್ಕರ್‌ ಅವರನ್ನು ಬಂಧಿಸಬೇಕು. ಮುನಿರತ್ನ ಅವರ ಗೂಂಡಾ ವರ್ತನೆಗೆ ಧಿಕ್ಕಾರ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್‌ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್, ‘ಪಕ್ಷದ ಕಾರ್ಯಕರ್ತರನ್ನು ಹೆದರಿಸಿದರೆ, ಪೊಲೀಸ್ ಠಾಣೆ ಎದುರು ಚುನಾವಣೆ ನಡೆಯಬೇಕಾಗುತ್ತದೆ. ಇದೇ ಕೊನೆ ಎಚ್ಚರಿಕೆ. ನಮ್ಮ ಹುಡುಗರು ಪ್ರಚಾರ ನಡೆಸುವಾಗ ತೊಂದರೆ ಮಾಡಿದರೆ ಮುನಿರತ್ನನಿಗೆ ಹೇಳಿ, ಕಾಯ್ತಾವ್ರಪ್ಪ ಅಣ್ಣ ಅಂತ, ನಾನು ಕಾಯ್ತಾ ಇದ್ದೀನಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT