ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲು ಶೇ. 40 ಕಮಿಷನ್ ಹೊಡೆಯಬೇಕಾ: ಸಿದ್ದರಾಮಯ್ಯ

ಬೆಂಗಳೂರು: ‘ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲು ಶೇ. 40 ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಆರೆಸ್ಸೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಪ್ರಶ್ನೆ ಮಾಡಿದ್ದು ಆರೆಸ್ಸೆಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರೆಸ್ಸೆಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ’ ಎಂದು ಹೇಳಿದ್ದಾರೆ
‘ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರೆಸ್ಸೆಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ?’ ಎಂದು ಪ್ರಶ್ನಿಸಿದ್ದಾರೆ.
‘ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರೆಸ್ಸೆಸ್ ತೀರ್ಮಾನಿಸಿದೆ? ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು?’ ಎಂದು ಮಾಜಿ ಸಿಎಂ ಕೇಳಿದ್ದಾರೆ.
ಇದನ್ನೂ ಓದಿ– ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ ಕಾಂಗ್ರೆಸ್ ಸ್ವಯಂ ಸೇವಕ: ರೋಹಿತ್ ಚಕ್ರತೀರ್ಥ
‘ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳು ಅಲ್ಲವೇ?’ ಎಂದು ಟ್ವೀಟಿಸಿದ್ದಾರೆ.
‘ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ... ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
‘ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರೆಸ್ಸೆಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರ್.ಎಸ್.ಎಸ್ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ– ಆರ್ಎಸ್ಎಸ್ ಇಟಲಿ ಮೂಲದ್ದಲ್ಲ: ಸಿದ್ದರಾಮಯ್ಯಗೆ ಸಚಿವ ಬಿ.ಸಿ. ನಾಗೇಶ್ ತಿರುಗೇಟು
‘ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ಏನು? ಹಿಂದೂ ಆಗಲು ಹಿಂದೂ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಸಾಕಾ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷದ ಸದಸ್ಯರಾಗಬೇಕಾ?’ ಎಂದೂ ಅವರು ಕೇಳಿದ್ದಾರೆ.
‘ಹಿಂದೂಗಳೆಲ್ಲ ಒಂದು ಎಂದು ಕಂಠ ಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ಯಾಕೆ ಹಿಂದೂ ಧರ್ಮದ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಢ ನಂಬಿಕೆ, ಕಂದಾಚಾರಗಳ ಬಗ್ಗೆ ಮಾತನಾಡುತ್ತಿಲ್ಲ?’ ಎಂದು ಟ್ವೀಟ್ ಮಾಡಿದ್ದಾರೆ.
‘ಹಿಂದೂ ಧರ್ಮದೊಳಗಿನ ಅನಿಷ್ಠಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನಂತಹವರು ಹಿಂದೂ ವಿರೋಧಿ ಆಗುವುದಾದರೆ? ಇದೇ ಕೆಲಸ ಮಾಡಿರುವ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ?’ ಎಂದು ಕೇಳಿದ್ದಾರೆ.
ಇದನ್ನೂ ಓದಿ– ಸಿದ್ಧರಾಮಯ್ಯ ದ್ರಾವಿಡರೇ ಆರ್ಯರೇ : ಸ್ಪಷ್ಟನೆಗೆ ಬೊಮ್ಮಾಯಿ ಆಗ್ರಹ
‘ಆರೆಸ್ಸೆಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ?’ ಎಂದು ಪ್ರಶ್ನಿಸಿದ್ದಾರೆ
‘ಆರೆಸ್ಸೆಸ್ ನಾಯಕರೇ, ಈ ರಿಮೋಟ್ ಕಂಟ್ರೋಲ್ ರಾಜಕೀಯ ಬಿಟ್ಟು ಬಿಡಿ. ನಿಮ್ಮ ತತ್ವ-ಸಿದ್ದಾಂತದ ಬಗ್ಗೆ ಅಷ್ಟೊಂದು ವಿಶ್ವಾಸ ನಿಮಗಿದ್ದರೆ ಈ ಹಿಂಬಾಗಿಲ ರಾಜಕೀಯ ಮಾಡದೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಡಿ, ಗೆಲುವು ಕೋಮುವಾದದ್ದೋ? ಜಾತ್ಯತೀತತೆಯದ್ದೋ? ನೋಡಿಯೇ ಬಿಡೋಣ’ ಎಂದು ಸವಾಲು ಹಾಕಿದ್ದಾರೆ.
ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ. 5/12#AryanRSS
— Siddaramaiah (@siddaramaiah) May 28, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.