ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕಾರ್ಯವೈಖರಿ: ಇನ್ನಷ್ಟು ಬಂಡಾಯಗಾರರು ಇದ್ದಾರೆಯೇ?

ಯತ್ನಾಳ, ಈಶ್ವರಪ್ಪ ಬಳಿಕ ಮುಂದೆ ಯಾರು? l ಬಿಎಸ್‌ವೈ ಕಾರ್ಯವೈಖರಿಗೆ ಅತೃಪ್ತಿ ಇದ್ದರೂ ಬಹಿರಂಗಕ್ಕೆ ಹಿಂದೇಟು
Last Updated 2 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಸೆಟೆದು ನಿಂತಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನು ಎಷ್ಟು ಮಂದಿ ಈ ರೀತಿ ಬಂಡಾಯ ಸಾರಲಿದ್ದಾರೆ ಎಂಬ ಚರ್ಚೆ ಬಿಜೆಪಿಯಲ್ಲಿ ಮುನ್ನೆಲೆಗೆ ಬಂದಿದೆ.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಯತ್ನಾಳ ಅವರಿಗೆ ಎಚ್ಚರಿಕೆ ನೀಡಿದ್ದರೂ, ಅವರು ಮಾತನಾಡುವುದನ್ನು ನಿಲ್ಲಿಸಿಲ್ಲ.

‘ಸಂಘಟನೆಯ ಬಲ ಇರುವುದರಿಂದಲೇ ನಾನು ಇಲ್ಲಿ ಕುಳಿತು ಮಾತನಾಡಲು ಸಾಧ್ಯ’ ಎಂದು ಈಶ್ವರಪ್ಪ ಹೇಳಿದ್ದಾರೆ. ಹಾಗಿದ್ದರೆ ಆ ‘ಸಂಘಟನೆ’ ಯಾವುದು? ಅರುಣ್‌ ಸಿಂಗ್‌ ಸಂಘಟನೆಯ ಭಾಗವಲ್ಲವೇ, ಅವರ ಎಚ್ಚರಿಕೆ ಮಾತುಗಳನ್ನೂ ಉಲ್ಲಂಘಿಸುವಷ್ಟು ಸ್ವಾತಂತ್ರ್ಯವನ್ನು ‘ಸಂಘಟನೆ’ ಇವರಿಗೆ ನೀಡಿದೆಯೇ ಎಂಬ ವಾದವನ್ನು ಯಡಿಯೂರಪ್ಪ ಬಣ ಮುಂದಿಟ್ಟಿದೆ.

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಶಾಸಕರ ಎರಡು ಮಹತ್ವದ ಸಭೆಗಳು ನಡೆದವು. ಇವೆರಡೂ ಸಭೆಗಳ ಮೂಲಕ ತಮ್ಮ ಬಲ ಪ್ರದರ್ಶನದ ಸಂದೇಶ ರವಾನಿಸುವ ಪ್ರಯತ್ನ ನಡೆಯಿತು. ಇದು ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮ ಕುರ್ಚಿ ಅಲುಗಾಡಿಸಲು ಯತ್ನಿಸುತ್ತಿರುವ ನಾಯಕರಿಗೆ ನೀಡಿದ ಸಂದೇಶವೆಂದೇ ವ್ಯಾಖ್ಯಾನಿಸಲಾಗುತ್ತಿದೆ.

ಆದರೆ, ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅವರ ಪಕ್ಷ ನಿಷ್ಠೆಯನ್ನೇ ಪ್ರಶ್ನಿಸಿದ ಈಶ್ವರಪ್ಪ ಮರ್ಮಾಘಾತ ನೀಡಿದ್ದಾರೆ. ಪಕ್ಷ ಬಿಟ್ಟು ಕೆಜೆಪಿ ಸ್ಥಾಪಿಸಿದ್ದು, ಅವರನ್ನು ಮತ್ತೆ ಬಿಜೆಪಿಗೆ ಕರೆ ತರುವಲ್ಲಿ ತಮ್ಮ ಪಾತ್ರ ವಿವರಿಸುವ ಮೂಲಕ ಯಡಿಯೂರಪ್ಪ ಬಣಕ್ಕೆ ತಿರುಗೇಟು ನೀಡಿದ್ದಾರೆ.

ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂದು ಯತ್ನಾಳ ಹೇಳಿರುವುದು ಮತ್ತು ಈಶ್ವರಪ್ಪ ಅವರ ಬಂಡಾಯ ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ ಸೂಚನೆಯೇ, ಇನ್ನಷ್ಟು ಮಂದಿ ಬಂಡಾಯ ಏಳುವರೇ ಎಂಬ ಬಗ್ಗೆ ಪಕ್ಷದ ತಟಸ್ಥ ಶಾಸಕರು ಚರ್ಚಿಸಲು ಆರಂಭಿಸಿದ್ದಾರೆ.

‘ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಆಗಬೇಕು. ಇದರಲ್ಲಿ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ ಇರಬಾರದು. ಎಲ್ಲರಿಗೂ ಸಮಾನ ಅವಕಾಶ, ಅನುದಾನ ಹಂಚಿಕೆ ಮಾಡಬೇಕು’ ಎನ್ನುತ್ತಾರೆ ತಟಸ್ಥ ಶಾಸಕರು.

‘ಆಡಳಿತ ವೈಖರಿ ಬಗ್ಗೆ ಪಕ್ಷದ ಸಾಕಷ್ಟು ಶಾಸಕರಲ್ಲಿ ಅಸಮಾಧಾನ ಇದೆ. ಯಡಿಯೂರಪ್ಪ ಬಣದ ಎಲ್ಲ ಶಾಸಕರು ತೃಪ್ತರೆಂದು ಹೇಳಲೂ ಆಗುವುದಿಲ್ಲ. ಹಾಗೆಂದು ಎಲ್ಲರೂ ಯತ್ನಾಳ ಅಥವಾ ಈಶ್ವರಪ್ಪ ಅವರಂತೆ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸುವ ಸ್ಥಿತಿಯಲ್ಲೂ ಇಲ್ಲ. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಯಾರು? ಯತ್ನಾಳ ಅಥವಾ ಈಶ್ವರಪ್ಪ ಅವರು ಪಕ್ಷವನ್ನು ಗೆಲ್ಲಿಸಿಕೊಂಡು ಬಹುಮತದ ದಡ ಸೇರಿಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎನ್ನುತ್ತಾರೆ ಅವರು.

ವಿವಿಧ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಅಮಿತ್‌ ಶಾ, ಜೆ.ಪಿ.ನಡ್ಡಾ ಮತ್ತು ಅರುಣ್‌ ಸಿಂಗ್‌ ಅವರೇ ಇದಕ್ಕೆ ಅಂತಿಮ ತೆರೆ ಎಳೆಯಬೇಕು. ಅವರ ಬಳಿ ಇದಕ್ಕೆ ಯಾವ ಔಷಧ ಇದೆ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರೆ ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT