ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ರಚನೆ: ಬೊಮ್ಮಾಯಿ ಅಧ್ಯಕ್ಷ, ಬಿಎಸ್‌ವೈ ಸದಸ್ಯ

Last Updated 10 ಮಾರ್ಚ್ 2023, 17:55 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಚಾರ ಸಮಿತಿಯ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಸ್ಪಷ್ಟ ಸೂಚನೆಯನ್ನು ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಲಾಗುವುದು ಎಂದು ಈಗಾಗಲೇ ಹೇಳಿಕೆ ನೀಡಿದ್ದರು. ಅದಕ್ಕೆ ಈಗ ಅಂತಿಮ ಮುದ್ರೆ ಸಿಕ್ಕಂತಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕಳೆದ ಕೆಲವು ತಿಂಗಳಿಂದ ಕೇಳಿ ಬಂದಿದ್ದವು. ಅವರಿಗೆ ಸಮಿತಿಯಲ್ಲಿ ಎರಡನೇ ಸ್ಥಾನ ನೀಡಲಾಗಿದೆ.

‘ಬೊಮ್ಮಾಯಿ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರ ವಿರುದ್ಧ ಆಕ್ರಮಣಕಾರಿ ಧೋರಣೆ ತಳೆದಿರುವುದೂ ಅಲ್ಲದೇ, ಸಿದ್ದರಾಮಯ್ಯ ಅವರ ವಿರುದ್ಧ ಅರ್ಕಾವತಿ ‘ರೀಡೂ’ ಮತ್ತು ಇತರ 58 ಪ್ರಕರಣಗಳನ್ನು ಪದೇ ಪದೇ ಪ್ರಸ್ತಾಪಿಸಿ ಕೇಂದ್ರದ ನಾಯಕರ ಮನಗೆಲ್ಲುವ ಪ್ರಯತ್ನ ನಡೆಸಿದ್ದರು. ವಿವಾದದ ಬೆನ್ನು ಏರುವ ಬದಲು ಕೇಂದ್ರ–ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಸೂಚಿಯನ್ನೇ ಮುನ್ನೆಲೆಗೆ ತಂದಿದ್ದರು. ಅದು ಈಗ ಫಲ ನೀಡಿದೆ’ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನ ನಡೆದಿದೆ.

ಶೋಭಾಗೆ ಮಹತ್ವದ ಹೊಣೆ: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಪಕ್ಷ ಉದ್ದೇಶಿಸಿತ್ತು. ಪ್ರಣಾಳಿಕೆ ಸಮಿತಿಯ ಮೊದಲ ಸಭೆಗೆ ಬರುವಂತೆ ರಾಜ್ಯ ನಾಯಕರು ಆಹ್ವಾನಿಸಿದ್ದರು. ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡುವ ಈ ಜವಾಬ್ದಾರಿ ಬೇಡ ಎಂಬ ಕಾರಣ ನೀಡಿ ಈ ಹೊಣೆಯನ್ನು ಶೋಭಾ ನಿರಾಕರಿಸಿದ್ದರು. ಈ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಇದೀಗ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ. ಅದರೊಂದಿಗೆ, ಪ್ರಚಾರ ಸಮಿತಿಯ ಸದಸ್ಯರನ್ನಾಗಿಯೂ ನೇಮಿಸಲಾಗಿದೆ. ಈ ಮೂಲಕ, 2014ರ ಲೋಕಸಭಾ ಚುನಾವಣೆಯ ಬಳಿಕ ಶೋಭಾ ಅವರಿಗೆ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಮಹತ್ವದ ಹೊಣೆ ವಹಿಸಲಾಗಿದೆ.

ಜೆ.ಪಿ.ನಡ್ಡಾ ನಿರ್ದೇಶನದಂತೆ ಪ್ರಚಾರ ಸಮಿತಿಗೆ 24 ಸದಸ್ಯರನ್ನು ಹಾಗೂ ನಿರ್ವಹಣಾ ಸಮಿತಿಗೆ 14 ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ರಾಷ್ಟ್ರೀಯ ‍ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎರಡೂ ಸಮಿತಿಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರ ಬೆಂಬಲಿ ಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

ಬಿಎಸ್‌ವೈಗೆ ಸಿಗದ ಅವಕಾಶ!
ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿ ನಡೆದಿದೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಡಲಾಗುವುದು ಎಂಬ ಮಾಹಿತಿ ಕೆಲವು ತಿಂಗಳಿಂದ ಪಕ್ಷದ ವಲಯದಲ್ಲಿ ಹರಿದಾಡಿತ್ತು. ಈಗ ಪಟ್ಟಿ ಹೊರಬಿದ್ದಾಗ ಅವರ ಬೆಂಬಲಿಗರಿಗೆ ನಿರಾಸೆ ಕಾದಿತ್ತು.

‘ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಅವರಿಗೆ ಆದ್ಯತೆ ನೀಡಿದರೆ ಪಕ್ಷಕ್ಕೆ ಹೆಚ್ಚು ಅನುಕೂಲ. ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಅನುಭವ ಬಳಸಿಕೊಳ್ಳಬೇಕು’ ಎಂದು ಬೆಂಬಲಿಗರ ಆಶಯವಾಗಿತ್ತು. ಯಡಿಯೂರಪ್ಪ ಅವರಿಗೆ ಮಹತ್ವ ಕೊಟ್ಟು ಲಿಂಗಾಯತ ಮತಗಳು ಚದುರಿ ಹೋಗದಂತೆ ಹೈಕಮಾಂಡ್‌ ಕ್ರಮಕೈಗೊಳ್ಳಲಿದೆ ಎಂದು ವಿಶ್ವಾಸದಲ್ಲಿ ಬೆಂಬಲಿಗರು ಇದ್ದರು. ಇದೇ ವೇಳೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೂ ಪ್ರಚಾರ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ ಎಂಬ ಚರ್ಚೆಯೂ ಪಕ್ಷದಲ್ಲಿ ಆರಂಭವಾಗಿದೆ.

ತೇಜಸ್ವಿ, ಸುನಿಲ್, ಪ್ರತಾಪ ಹೆಸರೂ ಇಲ್ಲ
ವಿವಾದಾಸ್ಪದ ಮಾತುಗಳಿಂದಲೇ ಹೆಚ್ಚು ಸದ್ದುಮಾಡುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮೈಸೂರು ಸಂಸದ ಪ್ರತಾಪ ಸಿಂಹ, ಇಂಧನ ಸಚಿವ ವಿ.ಸುನಿಲ್‌ ಕುಮಾರ್ ಅವರಿಗೆ ಸಮಿತಿಗಳಲ್ಲಿ ಸ್ಥಾನ ನೀಡಿಲ್ಲ. ಹಾಗೆಯೇ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನೂ ಹೊರಗಿಡಲಾಗಿದೆ.

ನಾನು ನಿಂತ ನೀರಲ್ಲ: ಸೋಮಣ್ಣ
ತಮಗೂ ಮತ್ತು ತಮ್ಮ ಪುತ್ರನಿಗೂ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಎರಡೂ ಸಮಿತಿಗಳಲ್ಲಿ ಜಾಗ ನೀಡಿಲ್ಲ. ಇವರು ಕಾಂಗ್ರೆಸ್‌ ಸೇರಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಎರಡೂ ಸಮಿತಿಗಳಲ್ಲಿ ಅವಕಾಶ ನೀಡದೇ ಇರುವ ಬಗ್ಗೆ ಸೋಮಣ್ಣ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ‘ನಾನು ನಿಂತ ನೀರಲ್ಲ. ಹರಿಯುವ ನೀರು. ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅವರ ಜತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ನನಗೆ ಈಗ 72 ವರ್ಷ. ಆಗಬೇಕಿರುವುದು ಏನೂ ಇಲ್ಲ’ ಎಂದರು.

‘ಕ್ಷೇತ್ರದ ಜನರ ಋಣ ತೀರಿಸಲು ಎಲ್ಲಿಯವರೆಗೆ ಇರಬೇಕೋ, ಅಲ್ಲಿಯವರೆಗೆ ಈ ಸೋಮಣ್ಣ ಇರುತ್ತಾನೆ’ ಎಂದು ಹೇಳಿದರು.

ಪ್ರಚಾರ ಸಮಿತಿಯ ಸದಸ್ಯರು: ಬಿ.ಎಸ್‌.ಯಡಿಯೂರಪ್ಪ, ನಳಿನ್‌ ಕುಮಾರ್ ಕಟೀಲ್, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್‌, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್‌.ಅಶೋಕ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಪ್ರಭು ಚವ್ಹಾಣ, ಡಾ.ಸಿ.ಎನ್‌.ಅಶ್ವತ್ಥ
ನಾರಾಯಣ, ಸಿ.ಟಿ.ರವಿ, ವಿ. ಶ್ರೀನಿವಾಸಪ್ರಸಾದ್, ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ.

ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು: ಭಗವಂತ ಖೂಬಾ, ಕೋಟ ಶ್ರೀನಿವಾಸಪೂಜಾರಿ, ಅರವಿಂದ ಲಿಂಬಾವಳಿ, ರಘುನಾಥರಾವ್‌ ಮಲ್ಕಾಪುರೆ, ನಿರ್ಮಲ್‌ಕುಮಾರ್‌ ಸುರಾನ, ತೇಜಸ್ವಿನಿ ಅನಂತಕುಮಾರ್, ಎನ್‌.ರವಿಕುಮಾರ್, ಸಿದ್ದರಾಜು, ಅಶ್ವತ್ಥನಾರಾಯಣ, ಮಹೇಶ್‌ ಟೆಂಗಿನಕಾಯಿ, ಎಸ್‌.ಕೇಶವಪ್ರಸಾದ್‌, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ.

ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ರಚನೆ: ಬೊಮ್ಮಾಯಿ ಅಧ್ಯಕ್ಷ, ಬಿಎಸ್‌ವೈ ಸದಸ್ಯ
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ರಚನೆ: ಬೊಮ್ಮಾಯಿ ಅಧ್ಯಕ್ಷ, ಬಿಎಸ್‌ವೈ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT