ಶನಿವಾರ, ಸೆಪ್ಟೆಂಬರ್ 18, 2021
30 °C
ರಾಜಕೀಯ ವಿಶ್ಲೇಷಣೆ

ವರಿಷ್ಠರ ಹೊಯ್ದಾಟ: ಬಿಎಸ್‌ವೈ ಹೊಸ ಆಟ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವರಿಷ್ಠರು ಹೇಳಿದ ಕೂಡಲೇ ರಾಜೀನಾಮೆ ಕೊಡುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಆದರೂ, ಬಿಜೆಪಿಯ ಸೂತ್ರಧಾರಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ‘ಸೂಚನೆ’ ರವಾನಿಸುವ ವಿಷಯದಲ್ಲಿ ನಿಧಾನಿಸುತ್ತಿರುವುದು ಕಮಲ ಪಾಳಯದ ನಾಯಕರನ್ನೇ ಗೊಂದಲಕ್ಕೆ ದೂಡಿದೆ.

ತಮ್ಮ ಪಕ್ಷ ಪ್ರತಿನಿಧಿಸುವ ವಿವಿಧ ರಾಜ್ಯ ಸರ್ಕಾರಗಳ ನಾಯಕತ್ವವನ್ನು ಕ್ಷಣ ಮಾತ್ರದಲ್ಲಿ ಬದಲಿಸುವ (ಉತ್ತರ ಪ್ರದೇಶ ಬಿಟ್ಟು), ಅನ್ಯ ಪಕ್ಷಗಳ ಸರ್ಕಾರ ಇರುವ ಕಡೆ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ರಾಜಕೀಯದ ದಿಕ್ಕುಗಳನ್ನೇ ಬದಲಿಸುವ ‘ಚಾಣಕ್ಯರು’ ಕರ್ನಾಟಕದ ಮಟ್ಟಿಗೆ ಹೊಯ್ದಾಟದ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಪಕ್ಷದ ಅತ್ಯಂತ ಹಿರೀಕರಲ್ಲಿ ಒಬ್ಬರಾದ ಯಡಿಯೂರಪ್ಪ, ಬೀದಿ ಯಲ್ಲೇ ಬಂದು ನಿಂತು ಸವಾಲು ಕೂಗಿ ದರೂ ಮುಂದಡಿ ಇಡಲಾಗದ ಇಕ್ಕಟ್ಟಿಗೆ ‘1–2’ ನಾಯಕರು ಸಿಲುಕಿದ್ದಾರೆಯೇ ಎಂಬ ಸಂಶಯ ಪಕ್ಷದ ಮುಖಂಡರಲ್ಲಿ ಮೂಡಲು ಶುರುವಾಗಿದೆ.

‘ಇದೇ 25ಕ್ಕೆ ಸಂದೇಶ ಬರುವ ನಿರೀಕ್ಷೆ ಇದೆ. ಬಂದ ಕೂಡಲೇ ರಾಜೀನಾಮೆ ಕೊಡುವೆ’ ಎಂದು ಯಡಿಯೂರಪ್ಪ ಹೇಳಿದ್ದರು. 26ಕ್ಕೆ ಅವರು ರಾಜೀನಾಮೆ ಕೊಡಲಿದ್ದಾರೆ ಎಂದೂ ಹೇಳಲಾಗಿತ್ತು.

ಈ ಹೇಳಿಕೆ ಹೊರಬಿದ್ದ ಆಸುಪಾಸಿನಲ್ಲೇ ಯಡಿಯೂರಪ್ಪ ನಡೆ, ಮಠಾಧೀಶರ ಅಬ್ಬರ, ಉಳಿದ ನಾಯಕರ ಮೌನ ಇವೆಲ್ಲವೂ ಪಕ್ಷದ ಆಂತರ್ಯದಲ್ಲಿ ನಡೆಯುತ್ತಿರುವ ‘ಕೂಡುವ–ಕಳೆಯುವ ಲೆಕ್ಕ’ದ ಕಡೆಗೆ ಬೊಟ್ಟು ಮಾಡುತ್ತವೆ.

ಈ ಎಲ್ಲ ತರ್ಕಗಳನ್ನೂ ಮೀರಿ,  ಪರಿಣಾಮ ಏನಾದರೂ ಆಗಲಿ; ಯಡಿಯೂರಪ್ಪ ಪದಚ್ಯುತಿ ಮಾಡಿಯೇ ಬಿಡುತ್ತೇವೆ ಎಂಬ ನಿರ್ದುಷ್ಟ, ನಿಷ್ಠುರ ನಿರ್ಧಾರಕ್ಕೆ ‘1–2’ ನಾಯಕರು ಬಂದರೂ ಅಚ್ಚರಿಯಿಲ್ಲ. ಯಡಿಯೂರಪ್ಪ ಹಾಕಿಕೊಂಡಿರುವ ಗಡುವಿನೊಳಗೆ ಈ ನಿರ್ಣಯ ಹೊರ ಬಿದ್ದೀತು ಎಂಬ ಭರವಸೆ ಮುಖ್ಯಮಂತ್ರಿ ವಿರೋಧಿ ಬಣದಲ್ಲಿ ಚಿಗುರುತ್ತಲೇ ಇದೆ.

ತರ್ಕಕ್ಕೆ ಹಲವು ಮಜಲು:‘ಯಡಿಯೂರಪ್ಪ ಪದಚ್ಯುತಿ ಕ್ಷಣಮಾತ್ರದ ಕೆಲಸ. ಅದರ ದೂರಗಾಮಿ ಪರಿಣಾಮಗಳು ಅನೇಕ. ಹೀಗಾಗಿ, ಅಳೆದು ತೂಗಿ ನಿರ್ಧಾರ ಮಾಡಬೇಕಾದ ಹಂಗಿನಲ್ಲಿ ವರಿಷ್ಠರಿದ್ದಾರೆ’ ಎನ್ನುತ್ತವೆ ಬಿಜೆಪಿ ಮೂಲಗಳು.

ವರಿಷ್ಠರು ಇಡೀ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಖಾಸಗಿ ಸಂಸ್ಥೆಯ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರ ಸಾಮರ್ಥ್ಯ, ಆ ಕ್ಷೇತ್ರದ ಎದುರಾಳಿಯ ಸದ್ಯದ ಸ್ಥಿತಿ, ಯಡಿಯೂರಪ್ಪ ಬದಲಾದರೆ ಏನು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದರ ವರದಿ ಕೈಸೇರಿದ ಬಳಿಕವೇ ತೀರ್ಮಾನ ಹೊರಬೀಳುವ ಸಾಧ್ಯತೆ ಹೆಚ್ಚು ಎಂಬ ಚರ್ಚೆಯೂ ನಡೆದಿದೆ.

ಸಂಘದ ಸಿದ್ಧಾಂತ ನೆಚ್ಚಿಕೊಂಡು 40 ಕ್ಷೇತ್ರಗಳ ಗೆಲುವು ಸಲೀಸು. ಚುನಾವಣೆ ಕಾಲದಲ್ಲಿ ಮೋದಿ ಪ್ರಚಾರದ ಜತೆಗೆ ಸಿಬಿಐ, ಐಟಿ, ಇಡಿ ಬಳಕೆಯ ಕೈಚಳಕದ ಪರಿಣಾಮದಿಂದ ಇನ್ನೂ 35–40 ಸೀಟುಗಳು ಬರಬಹುದು. ಇವಲ್ಲದೇ ಯಡಿಯೂರಪ್ಪ ಪ್ರಭಾವದಿಂದಲೇ ಬರುವ ಸಂಖ್ಯೆ 35–40ರಷ್ಟಿದೆ. ಹಿಂದಿನ ಚುನಾವಣೆಗಳ ಲೆಕ್ಕಾಚಾರವೂ ಇದನ್ನೇ ಹೇಳುತ್ತದೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಇಳಿಸಿದರೆ ಇದು ಉಲ್ಟಾ ಆಗಬಹುದು ಎಂಬ ಚರ್ಚೆಯೂ ವರಿಷ್ಠರ ಮಟ್ಟದಲ್ಲಿ ನಡೆಯುತ್ತಿದೆ.

ಮುಖ್ಯವಾಗಿ ದಕ್ಷಿಣ ಭಾರತದ ಒಟ್ಟು 150 ಲೋಕಸಭಾ ಕ್ಷೇತ್ರಗಳಲ್ಲಿ 2019ರಲ್ಲಿ ಬಿಜೆಪಿ ಗೆದ್ದಿರುವುದು 38. ಆ ಪೈಕಿ 25 ಸ್ಥಾನ ಕರ್ನಾಟಕದ ಕೊಡುಗೆ. ಲೋಕಸಭೆ ಚುನಾವಣೆಯಲ್ಲಿ ಈ ಸಂಖ್ಯೆ ದೊಡ್ಡದೇ. ಅದರ ಮೇಲೂ ಆಗಬಹುದಾದ ಪರಿಣಾಮಗಳ ಬಗ್ಗೆ ನಾಯಕರು ಗಂಭೀರ ಆಲೋಚನೆಯಲ್ಲಿದ್ದಾರೆ.

ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದು ಉತ್ತರ ಮತ್ತು ಮಧ್ಯ ಕರ್ನಾಟಕದ ಭಾಗದಲ್ಲಿ. ಅವರಲ್ಲಿ ಬಹುತೇಕರು ಯಡಿಯೂರಪ್ಪ ನಾಯಕತ್ವ ನೆಚ್ಚಿಕೊಂಡು ಜನತಾ ಪರಿವಾರದಿಂದ ಬಂದವರೇ ಹೆಚ್ಚು. ಅವರ ವೈಯಕ್ತಿಕ ವರ್ಚಸ್ಸಿನ ಜತೆಗೆ, ಯಡಿಯೂರಪ್ಪ ಸೆಳೆವ ಮತಗಳೇ ಗೆಲುವಿಗೆ ಕಾರಣ. ಯಡಿಯೂರಪ್ಪ ನಿರ್ಲಿಪ್ತರಾದರೆ ಅಥವಾ ತಿರುಗಿಬಿದ್ದರೆ ಇಲ್ಲಿ ಬಿಜೆಪಿ ವಿಜಯದ ಹಾದಿ ಕಷ್ಟವಾಗಬಹುದು ಎಂಬ ಅಂಶವೂ ಪರಿಗಣನೆಯಲ್ಲಿದೆ.

ಯಡಿಯೂರಪ್ಪ ಬದಲಿಗೆ ಬೇರೊಬ್ಬ ಲಿಂಗಾಯತ ನಾಯಕನನ್ನು ಮುಖ್ಯಮಂತ್ರಿ ಗಾದಿಗೇರಿಸಿದರೆ ಆ ಸಮುದಾಯದ ಮತಗಳನ್ನು ಪೂರ್ಣ ಪ್ರಮಾಣದಲ್ಲಿ ಸೆಳೆಯಬಲ್ಲರು ಎಂಬ ಭರವಸೆ ಇಲ್ಲ. ಇನ್ನೊಂದೆಡೆ ಬಿಜೆಪಿಗೆ ಉತ್ತರದ ರಾಜ್ಯಗಳಲ್ಲಿ ಇರುವಂತಹ ಬಲಿಷ್ಠ ಹಿಂದುಳಿದ ವರ್ಗಗಳ ನಾಯಕರು ಕರ್ನಾಟಕದಲ್ಲಿಲ್ಲ. ಒಕ್ಕಲಿಗರ ಮತಗಳನ್ನು ಜೆಡಿಎಸ್‌, ಕಾಂಗ್ರೆಸ್‌ನಿಂದ ಕಸಿದು ಬಿಜೆಪಿಯೆಡೆಗೆ ಸೆಳೆಯಬಲ್ಲ ನಾಯಕತ್ವದ ಕೊರತೆಯೂ ಬಿಜೆಪಿ ವರಿಷ್ಠರ ಹಿಂದೇಟಿಗೆ ಕಾರಣ ಎನ್ನಲಾಗುತ್ತಿದೆ.

ಈ ಹಂತದಲ್ಲಿ ನಾಯಕತ್ವ ಬದಲಾದರೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಹಾಗೂ 2022ರ ಜನವರಿಯೊಳಗೆ ನಡೆಯಬೇಕಾದ ವಿಧಾನಪರಿಷತ್ತಿನ 25 (ಸ್ಥಳೀಯ ಸಂಸ್ಥೆಗಳಿಂದ) ಕ್ಷೇತ್ರಗಳ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೂ ಬಿಜೆಪಿ ನಾಯಕರಿಗೆ ಶುರುವಾಗಿದೆ. ತೀರ್ಮಾನದ ವಿಳಂಬಕ್ಕೆ ಇವೆಲ್ಲವೂ ಕಾರಣ ಎಂಬುದು ಆ ಪಕ್ಷದ ಶಾಸಕರ ಮಧ್ಯೆ ನಡೆಯುತ್ತಿರುವ ಚರ್ಚೆ.

ಬಿಎಸ್‌ವೈ ನಿಗೂಢ ನಡೆ?

ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳುತ್ತಿದ್ದರೂ ಯಡಿಯೂರಪ್ಪನವರ ನಡೆ ಮಾತ್ರ ನಿಗೂಢ.

ವರಿಷ್ಠರು ಸೂಚಿಸಿದ್ದಾರೆ, ಪದಚ್ಯುತಿ ಖಚಿತ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಹಾಗಿದ್ದ ಮೇಲೆ, 25ಕ್ಕೆ ಸಂದೇಶ ಬರುತ್ತದೆ ಎಂದು ಬಹಿರಂಗವಾಗಿ ಹೇಳುವ ಅಗತ್ಯ ಏನಿತ್ತು. ಯಾವ ಸಂದೇಶವನ್ನು ರವಾನಿಸಲು ಹೀಗೆ ಹೇಳಿದರು ಎಂಬ ಚರ್ಚೆಯೂ ನಡೆಯುತ್ತಿದೆ.

‘ಎರಡು ತಿಂಗಳ ಹಿಂದೆ ರಾಜೀನಾಮೆ ನಿರ್ಧಾರ ಮಾಡಿದ್ದೆ’ ಎಂದು ಹೇಳಿದ ಯಡಿಯೂರಪ್ಪ, ಮಠಾಧೀಶರ ಗುಂಪನ್ನು ಸೇರಿಸಿ ಬಲಪ್ರದರ್ಶನ ಮಾಡುತ್ತಿರುವುದು ಏಕೆ? 25ರಂದೇ ಸಂದೇಶ ಬರುವುದಾದರೆ ಮಠಾಧೀಶರು ಸ್ವಯಂ ಪ್ರೇರಣೆಯಿಂದ ಸಮಾವೇಶ ಆಯೋಜಿಸಿದ್ದಾರೆಯೇ? ಹೀಗೆ ಮಾಡುವ ಮೂಲಕ ತಮ್ಮನ್ನು  ಕೆಳಗಿಳಿಸಿದರೆ ಲಿಂಗಾಯತರು ತಿರುಗಿಬೀಳುವುದು ಖಚಿತ ಎಂಬ ಸಂದೇಶ ರವಾನಿಸುವುದು ಯಡಿಯೂರಪ್ಪ ಉದ್ದೇಶವೇ?  ತಮ್ಮ ಮಗ ಬಿ.ವೈ.ವಿಜಯೇಂದ್ರಗೆ ರಾಜಕೀಯ ಭವಿಷ್ಯ ಕಲ್ಪಿಸುವುದರ ಜತೆಗೆ, ತಾವು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿಸಿ, ಅಧಿಕಾರದ ಅಂಕೆ ತಮ್ಮ ಕೈಯಲ್ಲೇ ಇರುವಂತೆ ನೋಡಿಕೊಳ್ಳುವ ಅಂದಾಜು ಇದ್ದಂತಿದೆ ಎಂಬ ವಿಶ್ಲೇಷಣೆ ಪಕ್ಷದೊಳಗೆ ನಡೆದಿದೆ.

ಯಡಿಯೂರಪ್ಪ ಅಷ್ಟು ಸುಲಭಕ್ಕೆಲ್ಲ ಅಧಿಕಾರ ಬಿಟ್ಟುಕೊಡುವ ಜಾಯಮಾನದವರಲ್ಲ. ಕೊನೆ ಗಳಿಗೆಯ ಆಟ ಹಾಕುವುದು ಅವರಿಗೆ ಗೊತ್ತು ಎಂದು  ಹೇಳುತ್ತಾರೆ ಅವರ ಜತೆ ನಿಕಟವಾಗಿ ಗುರುತಿಸಿಕೊಂಡಿರುವ ಶಾಸಕರು.

ಈ ಆತಂಕದಿಂದಲೇ, ಇದೇ 25ರಂದು ನಡೆಯಬೇಕಿದ್ದ ಶಾಸಕರ ಭೋಜನ ಕೂಟ  ರದ್ದುಪಡಿಸುವಂತೆ ವರಿಷ್ಠರು ಸೂಚಿಸಿದರು ಎಂಬ ಮಾತುಗಳೂ ಇವೆ. ಹಾಗೊಂದು ವೇಳೆ ಮೇಲಿನ ತರ್ಕವೆಲ್ಲ ಸರಿಯಾದರೆ, 29ರಂದು ನಡೆಯಬೇಕಿದ್ದ ಶಿವಮೊಗ್ಗದ ಕಾರ್ಯಕ್ರಮಗಳನ್ನು 24ಕ್ಕೇ ಮುಗಿಸಿದ್ದು ಯಾಕೆ? ಎಂಬ ಪ್ರಶ್ನೆಯೂ ಇದೆ.

‘1–2’ ನಾಯಕರು ಮಾತ್ರ ಕೊಡಬಹುದಾದ ಉತ್ತರಕ್ಕೆ ಯಾರೊಬ್ಬರೂ ಏನನ್ನೂ ಹೇಳಲಾರರು. ಅವರ ತೀರ್ಮಾನವೇ ಯಡಿಯೂರಪ್ಪನವರ ಭವಿಷ್ಯ ನಿರ್ಣಯಿಸಲಿದೆ ಎಂಬುದಷ್ಟೇ ನಿಜ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು