ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಬಿಜೆಪಿಗೆ ಅಲ್ಪತೃಪ್ತಿ, ಕಾಂಗ್ರೆಸ್‌ಗೆ ಹಿನ್ನಡೆ

ಮಹಾನಗರ ಪಾಲಿಕೆ ಚುನಾವಣೆ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಹು–ಧಾ ಬಿಜೆಪಿ ಮೇಲುಗೈ, ಕಲಬುರ್ಗಿ ಅತಂತ್ರ
Last Updated 7 ಸೆಪ್ಟೆಂಬರ್ 2021, 4:03 IST
ಅಕ್ಷರ ಗಾತ್ರ

ಬೆಂಗಳೂರು: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಶುಕ್ರವಾರ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಅಲ್ಪತೃಪ್ತಿಗೆ ಸಮಾಧಾನ ಹೊಂದಿದ್ದರೆ,ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ.ಜೆಡಿಎಸ್‌ ಆಘಾತ ಅನುಭವಿಸಿದೆ.

ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯಲ್ಲಿಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಆದರೆ, ಮುಖ್ಯಮಂತ್ರಿ, ಕೇಂದ್ರ ಸಚಿವರು, ಹಲವು ಪ್ರಮುಖ ನಾಯಕರ ಹಿಡಿತ ನಗರದಲ್ಲಿ ಇದ್ದರೂ ಬಹುಮತದ ‘ಮ್ಯಾಜಿಕ್‌ ಸಂಖ್ಯೆ’ 42 ತಲುಪಲು ಬಿಜೆಪಿ ವಿಫಲವಾಗಿದೆ.

ಆದರೆ, ಬೆಳಗಾವಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ನಗರಸಭೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿಲ್ಲ. ತರೀಕೆರೆಯಲ್ಲಿ ಬಿಜೆಪಿ ಶಾಸಕರಿದ್ದರೂ ಗೆಲುವು ಸಾಧಿಸಲು ಶಕ್ಯವಾಗಿಲ್ಲ. ಕಾಂಗ್ರೆಸ್‌ ಮತ್ತೆ ಅಧಿಕಾರ ದಕ್ಕಿಸಿಕೊಂಡಿದೆ. ಜೆಡಿಎಸ್‌ ಒಟ್ಟಾರೆ ಸಾಧನೆ ಕಳಪೆಯಾಗಿದ್ದು, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಹುಬ್ಬಳ್ಳಿ–ಧಾರವಾಡ ಮತ್ತು ಬೆಳಗಾವಿಯಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಬಸವರಾಜ ಬೊಮ್ಮಾಯಿ ಸರ್ಕಾರದ ಚುಕ್ಕಾಣಿ ಹಿಡಿದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಚುನಾವಣಾ ಸಾಧನೆ ಅವರಿಗೆ ‘ತೃಪ್ತಿಕರ’ ಎನಿಸಿದೆ. ಹುಬ್ಬಳ್ಳಿ– ಧಾರವಾಡದಲ್ಲಿ ಬಹುಮತಕ್ಕೆ ಮೂರು ಸ್ಥಾನದ ಕೊರತೆ ಇದೆ. ಆದರೆ, ಕಲಬುರ್ಗಿ
ಯಲ್ಲಿ ಅಧಿಕಾರ ಹಿಡಿಯಬೇಕಿದ್ದರೆ, ಜೆಡಿಎಸ್‌ ಮತ್ತು ಪಕ್ಷೇತರ ನೆರವು ಬೇಕೇ ಬೇಕು.

ಬೆಳಗಾವಿಯಲ್ಲಿ ಬಿಜೆಪಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿತ್ತು. ಆರ್‌ಎಸ್ಎಸ್‌ ಕೂಡಾ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜಾರಕಿಹೊಳಿ ಸಹೋದರರ ನೆರವು ಇಲ್ಲದೇ ಚುನಾವಣೆ ಗೆಲ್ಲುವುದು ಕಷ್ಟ ಎಂಬ ಮಾತು ಹುಸಿಯಾಗಿದೆ.

ಬಿಜೆಪಿಯ ಇತರ ನಾಯಕರು ನಿರ್ಣಾಯಕ ಪಾತ್ರವಹಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಆಟಾಟೋಪಕ್ಕೆ ಮತದಾರ ತಕ್ಕ ಉತ್ತರ ನೀಡಿದ್ದಾನೆ. ಶಿವಸೇನೆಯ ಆಟ ಈ ಚುನಾವಣೆಯಲ್ಲಿ ನಡೆದಿಲ್ಲ.ಕಾಂಗ್ರೆಸ್‌ನ ಸ್ಥಳೀಯ ಮಟ್ಟದ ನಾಯಕರ ಒಳಜಗಳ ಆ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ.

ಹು–ಧಾ: ಸರಳ ಬಹುಮತಕ್ಕೆ 3 ಸ್ಥಾನ ಕೊರತೆ: ಬೆಳಗಾವಿಯಲ್ಲಿ ಅರಳಿದ ಕಮಲ:

ಹುಬ್ಬಳ್ಳಿ/ಬೆಳಗಾವಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನ ಗೆದ್ದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 35 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ.

ಹು–ಧಾ ಮಹಾನಗರ ಪಾಲಿಕೆಯ ಸದಸ್ಯ ಬಲ 82 ಆಗಿದ್ದು, ಸರಳ ಬಹುಮತಕ್ಕೆ 42 ಸ್ಥಾನ ಬೇಕಿತ್ತು. ಬಿಜೆಪಿ 39 ಸ್ಥಾನ ಗಳಿಸಿದೆ. ಜತೆಗೆ ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರ ಮತ ಸೇರಿ 45 ಸದಸ್ಯರಾಗಲಿದ್ದು ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ.

ಮೊದಲ ಬಾರಿಗೆ ಸ್ಪರ್ಧೆಗೆ ಇಳಿದಿದ್ದ ಎಐಎಂಐಎಂ ಮೂರು ಸ್ಥಾನ ಗೆದ್ದಿದ್ದು, ಖಾತೆ ತೆರೆದಿದೆ. ಕಳೆದ ಬಾರಿ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಬಿಜೆಪಿ 33, ಕಾಂಗ್ರೆಸ್‌ 22, ಜೆಡಿಎಸ್‌ 9, ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಈ ಬಾರಿ ಜೆಡಿಎಸ್‌ಗೆ ತೀವ್ರ ಹಿನ್ನಡೆಯಾಗಿದೆ.

ಬೆಳಗಾವಿ–ಚಿಹ್ನೆಯಡಿ ಪ್ರಥಮ ಬಾರಿ ಚುನಾವಣೆ: ಕನ್ನಡ, ಮರಾಠಿ ಹಾಗೂ ಉರ್ದು ಭಾಷೆಗಳ ಆಧಾರದಲ್ಲಿ ಈವರೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆಯಡಿ ಕಣಕ್ಕಿಳಿದಿದ್ದವು.

ಭಾಷೆ ಮತ್ತು ಗಡಿ ವಿಷಯವನ್ನು ಅಸ್ತ್ರವಾಗಿಸಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಬೆಂಬಲಿತರು 23 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದರು. ಎರಡು ಕಡೆಗಳಲ್ಲಿ ಅವರಿಗೆ ಗೆಲುವು ಸಿಕ್ಕಿದೆ. 7 ವಾರ್ಡ್‌ಗಳಲ್ಲಿ ಸ್ಪರ್ದಿಸಿದ್ದ ಎಐಎಂಐಎಂ ಖಾತೆ ತೆರೆದಿದೆ. 27ರಲ್ಲಿ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಸೋಲುಂಡಿದೆ.

ಈ ಬಾರಿ ಮತದಾರರು ಭಾಷಾ ರಾಜಕಾರಣವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಮರಾಠಿ ಭಾಷಿಗರ ಮತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಎಂಇಎಸ್‌ನವರು ಪ್ರಯೋಗಿಸಿದ್ದ ‘ಎಂ ಪ್ಲಸ್ ಎಂ’ (ಮರಾಠಿ ಮತ್ತು ಮುಸ್ಲಿಂ) ಸೂತ್ರಕ್ಕೆ ಮತದಾರರು ಮನ್ನಣೆ ನೀಡಿಲ್ಲ.

ತರೀಕೆರೆ ಪುರಸಭೆ: ಕಾಂಗ್ರೆಸ್ ಪಾರಮ್ಯ

ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾರಮ್ಯ ಸಾಧಿಸಿದೆ. ಪಕ್ಷೇತರರೂ ಗಣನೀಯ ಸಾಧನೆ ಮಾಡಿದ್ದಾರೆ. 15 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಪಕ್ಷೇತರರು ಏಳು ಸ್ಥಾನ ಗೆದ್ದಿದ್ದಾರೆ. ಬಿಜೆಪಿ ಒಂದು ಸ್ಥಾನ ಪಡೆದಿದೆ, ಜೆಡಿಎಸ್‌ನದು ಶೂನ್ಯ ಸಾಧನೆ.

ಬಿಜೆಪಿ ಶಾಸಕ ಡಿ.ಎಸ್‌.ಸುರೇಶ್‌ ಅವರ ಚುನಾವಣಾ ತಂತ್ರಗಾರಿಕೆ ಫಲ ನೀಡಿಲ್ಲ. ತರೀಕೆರೆ ಪಟ್ಟಣದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಉಳಿಸಿಕೊಂಡಿದೆ. ಎರಡನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಮಾರ್ ಹಳಿಯೂರು ಅವರು ಒಂದು ಮತದಿಂದ ಗೆಲುವಿನ ನಗೆ ಬೀರಿದರು.

ತೃತೀಯ ಲಿಂಗಿ ಸ್ಪರ್ಧೆಯಿಂದಾಗಿ 23ನೇ ವಾರ್ಡ್‌ ಗಮನ ಸೆಳೆದಿತ್ತು. ಇಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದು, ಬಿಜೆಪಿಯಿಂದ ಕಣಕ್ಕಿಳಿದಿದ್ದ ತೃತೀಯ ಲಿಂಗಿ ಅರುಂಧತಿ ಜಿ.ಹೆಗ್ಗಡೆ ಪರಾಭವಗೊಂಡಿದ್ದಾರೆ.

ದೊಡ್ಡಬಳ್ಳಾಪುರ ನಗರಸಭೆ ಅತಂತ್ರ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯ ಸದಸ್ಯ ಬಲ 31 ಆಗಿದ್ದು, 12 ವಾರ್ಡ್‌ಗಳಲ್ಲಿ ಗೆದ್ದಿರುವ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ ಮೂವರು ಪಕ್ಷೇತರರು ಜಯಗಳಿಸಿದ್ದಾರೆ.
ಅಧಿಕಾರ ಹಿಡಿಯಲು 16 ಸದಸ್ಯ ಬಲದ ಅಗತ್ಯವಿದೆ. ಇದನ್ನು ಪಡೆಯುವಲ್ಲಿ ಯಾವುದೇ ಪಕ್ಷ ಯಶಸ್ವಿಯಾಗಿಲ್ಲ. ಅಧಿಕಾರದ ಚುಕ್ಕಾಣಿ ಯಾರಿಗೆ ಎಂಬ ಕುತೂಹಲ ಮೂಡಿದೆ.

ಕಲಬುರ್ಗಿ ಪಾಲಿಕೆ: ಜೆಡಿಎಸ್‌ ನಿರ್ಣಾಯಕ

ಕಲಬುರ್ಗಿ: 55 ಸದಸ್ಯ ಬಲದ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ ಗೆದ್ದಿದ್ದು, ಅತಿ ದೊಡ್ಡ ‌ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 23 ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟುಕೊಂಡಿದೆ‌. ಆದರೂ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ.

55 ಸದಸ್ಯರ ಜೊತೆಗೆ ಮೇಯರ್ ಆಯ್ಕೆಯಲ್ಲಿ ಶಾಸಕರು, ಸಂಸದರಿಗೂ ಮತದಾನದ ಹಕ್ಕಿದೆ. ಪಕ್ಷದ ಶಾಸಕರು, ಸಂಸದರನ್ನು ಸೇರಿ ಬಿಜೆಪಿ ಬಲ 29 ಆಗುತ್ತದೆ. ಕಾಂಗ್ರೆಸ್‌ನ ಶಾಸಕರು, ರಾಜ್ಯಸಭೆ ಸದಸ್ಯರ ಮತ ಸೇರಿ ಆ ಪಕ್ಷದ 30 ಆಗುತ್ತದೆ. ಮತದಾನದ ಹಕ್ಕಿರುವ ಸಂಸದರು–ಶಾಸಕರು ಸೇರಿ ಒಟ್ಟು ಒಟ್ಟು ಸದಸ್ಯ ಬಲ 64 ಆಗುತ್ತಿದ್ದು, ಬಹುಮತಕ್ಕೆ 33 ಮತಗಳ ಅಗತ್ಯವಿದೆ.

ಜೆಡಿಎಸ್‌ನ ನಾಲ್ವರು ಹಾಗೂ ಒಬ್ಬ ಪಕ್ಷೇತರ ಸದಸ್ಯರ ಬೆಂಬಲದಲ್ಲಿ ಸಾರಥ್ಯ ಹಿಡಿಯಲು ಬಿಜೆಪಿ ಹಾಗೂ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಯತ್ನ ಆರಂಭಿಸಿವೆ. ಹಿಂದಿನ ಚುನಾವಣೆಯಲ್ಲಿಯೂಯಾವುದೇ ಪಕ್ಷಗಳಿಗೆ ಬಹುಮತ ಇರಲಿಲ್ಲ. ಆಗ 23 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಪಕ್ಷೇತರರ ನೆರವಿನಿಂದ ಅಧಿಕಾರ ನಡೆಸಿತ್ತು . ಜೆಡಿಎಸ್‌–10, ಬಿಜೆಪಿ–7, ಕೆಜೆಪಿ–7, ಪಕ್ಷೇತರರು–7, ಆರ್‌ಪಿಐ–1 ಸದಸ್ಯರು ಇದ್ದರು.

ಉಪ ಚುನಾವಣೆ: ಗೆಲುವು ಯಾರಿಗೆ?

* ರಾಮನಗರ ನಗರಸಭೆಯ ನಾಲ್ಕನೇ ವಾರ್ಡಿಗೆ ನಡೆದ ಉ‌ಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಸುರೇಶ್ 899 ಮತಗಳ ಅಂತರದಿಂದ ಗೆಲುವು ದಾಖಲಿಸಿದೆ. ಕಳೆದ ಬಾರಿ ಚುನಾವಣಾ ಫಲಿತಾಂಶ ಪ್ರಕಟಣೆಗೆ ಮೊದಲೇ ಅಭ್ಯರ್ಥಿ ಮೃತಪಟ್ಟಿದ್ದರಿಂದ ಈಗ ಉಪಚುನಾವಣೆ ನಡೆದಿತ್ತು. ಪಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೈಸೂರು: ಕಾಂಗ್ರೆಸ್‌ಗೆ ಗೆಲುವು

ಮೈಸೂರು: ಮಹಾನಗರ ಪಾಲಿಕೆ 36ನೇ ವಾರ್ಡ್‌ (ಯರಗನಹಳ್ಳಿ) ಉಪಚುನಾವಣೆಯಲ್ಲಿ ಕಾಂಗ್ರೆಸ್ 1,997 ಮತಗಳಿಂದ ಜಯ ಸಾಧಿಸಿದೆ. ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆದ್ದಿದ್ದಾರೆ. ಈ ಸ್ಥಾನವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಬೀದರ್‌ ನಗರಸಭೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ ಗೆದ್ದಿವೆ. ಬಸವಕಲ್ಯಾಣ ನಗರಸಭೆಯ ಎರಡು ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ, ಕಾಂಗ್ರೆಸ್‌ ತಲಾ ಒಂದು ಸ್ಥಾನ ಗೆದ್ದಿದೆ.

ವಾಡಿ ಪುರಸಭೆಯ 2, ಕುಷ್ಠಗಿ ಪುರಸೆಯ 1 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT