ಮಂಗಳವಾರ, ಜೂನ್ 22, 2021
29 °C

ಬಿಜೆಪಿ ನಾಯಕರೇ ಹಾಸಿಗೆ ಬ್ಲಾಕ್‌ ದಂಧೆಯ ಕಿಂಗ್‌ಪಿನ್‌ಗಳು -ದಿನೇಶ್​ ಗುಂಡೂರಾವ್​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿ ನಾಯಕರೇ ಹಾಸಿಗೆ ಬ್ಲಾಕ್‌ ದಂಧೆಯ ಕಿಂಗ್​​ಪಿನ್​​ಗಳು’ ಎಂದು ಕಾಂಗ್ರೆಸ್​ ಶಾಸಕ ದಿನೇಶ್​ ಗುಂಡೂರಾವ್​ ಆರೋಪಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಿಬಿಎಂಪಿ ವಾರ್​ ರೂಂನಲ್ಲಿ ದಂಧೆ ಬಯಲಿಗೆಳೆದೆವು ಎಂದ ಬಿಜೆಪಿ ಮುಖಂಡರದ್ದು ಕಪಟ ನಾಟಕ ಮಂಡಳಿ. ಸಂಸದ ತೇಜಸ್ವಿ ಸೂರ್ಯ ಈ ಕಪಟ ನಾಟಕದ ಸೂತ್ರದಾರ’ ಎಂದೂ ಅವರು ವಾಗ್ದಾಳಿ ನಡೆಸಿದರು.

‘ಬಿಜೆಪಿ ಸಂಸದ, ಶಾಸಕರು ನಾಟಕ ಮಾಡುವುದು, ಪುಡಿ ರೌಡಿಗಳ ರೀತಿ ಅವರ ಬೆಂಬಲಿಗರು ವಿಡಿಯೊ ಮಾಡಿದ್ದಾರೆ. ವಾರ್​ ರೂಂನಲ್ಲಿ ಇರುವವರನ್ನು ಖಾಲಿ ಮಾಡಿಸಿ, ತಮ್ಮ ಬೆಂಬಲಿಗರನ್ನು ಅಲ್ಲಿ ತಂದು ಕೂರಿಸಬೇಕು ಎಂದು ಮಾಡಿದ ನಾಟಕವಿದು. ಕೊರೊನಾ ಸಂಕಷ್ಟ ಸಮಯದಲ್ಲಿ ಈ ನಾಟಕ ಆಡಲು ಸ್ಕ್ರಿಪ್ಟ್ ಮಾಡುವುದಕ್ಕೆ ಸಮಯ ಹೇಗೆ ದೊರೆಯಿತು’  ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ಇದು ಪ್ರಚಾರದ ಸಮಯವಲ್ಲ. ಕಪಟ ನಾಟಕಕಾರ ತೇಜಸ್ವಿ ಸೂರ್ಯ ಮತ್ತೆ ಅಲ್ಲಿಗೆ ಹೋಗಿ ವಿಡಿಯೊ  ಮಾಡಬೇಡಿ ಎಂದು ಕೇಳಿಕೊಂಡು ಕ್ಷಮಾಪಣೆ ಕೇಳಿದ್ದಾರೆ. ತೇಜಸ್ವಿ ಸೂರ್ಯ ಸಂಸದರಾಗುವುದಕ್ಕೆ ನಾಲಾಯಕ್’ ಎಂದು ಟೀಕಿಸಿದರು.

‘ಬಿಜೆಪಿಯ ರೌಡಿ ಶಾಸಕರು ಹಾಗೂ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ. ಈ ಪ್ರಕರಣ ನ್ಯಾಯಾಂಗ ತನಿಖೆ ನಡೆಸಬೇಕು. ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ರಕ್ಷಣೆ ಕೊಡಬೇಕು. ಬಿಜೆಪಿ ನಾಯಕರು ಮಾಡಿದ ಕೆಲಸ ಎಲ್ಲ ರಾಜಕಾರಣಿಗಳಿಗೂ ಅವಮಾನ’ ಎಂದರು.

ಇನ್ನೊಬ್ಬ ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, ‘ಹಾಸಿಗೆ ಹೈಜಾಕ್ ಮಾಡಲು ಬಿಜೆಪಿಯವರಿಗೆ ಅಧಿಕಾರಿಗಳು ಬಿಡಲಿಲ್ಲ. ಯಾರಿಗೆ ಅವಶ್ಯಕತೆ ಇಲ್ವೋ ಅಂಥವರಿಗೆ ಬಿಜೆಪಿಯವರು ಐಸಿಯು ಸೌಲಭ್ಯದ ಹಾಸಿಗೆ ಕೊಟ್ಟಿದ್ದಾರೆ’ ಎಂದು ದೂರಿದರು.

‘ಒತ್ತಡಕ್ಕೆ ಮಣಿಯದ ಅಧಿಕಾರಿಯ ಮೇಲೆ ಬಿಜೆಪಿಯವರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದೇ ಒತ್ತಡ ಬೆಂಗಳೂರು ದಕ್ಷಿಣದಲ್ಲೂ ನಡೆದಿದೆ. ಅಲ್ಲಿದ್ದ ಅಧಿಕಾರಿ ತುಳಸಿ ಕೂಡಾ, ‘ನೀವು ವಾರ್ ರೂಂಗೆ ಬರಬಾರದು, ಕೊಠಡಿಯಲ್ಲಿ ಬಂದು ಮಾತನಾಡಿ’ ಎಂದು ಸಂಸದರಿಗೂ ಹೇಳಿದ್ದಾರೆ. 17 ಜನರನ್ನು ತೆಗೆದುಹಾಕಿ ಅವರಿಗೆ ಬೇಕಾದವರನ್ನು ಸೇರಿಸುವುದುಉದ್ದೇಶವಾಗಿತ್ತು. ಜನರ ದಿಕ್ಕು ತಪ್ಪಿಸಲು ಒಂದು ಸಮುದಾಯದ ವಿರುದ್ಧ ಆರೋಪ ಮಾಡಿದ್ದಾರೆ. ಇದು ಬಿಜೆಪಿ ಬೆಡ್ ಹಗರಣ’ ಎಂದು ಆರೋಪಿಸಿದರು.

‘ಅವಶ್ಯಕತೆ ಇರುವರಗೆ ಹಾಸಿಗೆ  ಸಿಗುತ್ತಿಲ್ಲ. ಬಿಜೆಪಿ ಶಿಫಾರಸಿನಂತೆ ಹಾಸಿಗೆ ಹಂಚಿಕೆ ಆಗುತ್ತಿದೆ. ನಾನು ಸಹ ಅಧಿಕಾರಿಗಳಿಗೆ ಕರೆ ಮಾಡಿ ಮನೆ ಬಳಿ ಬಂದಿದ್ದಾರೆ ಎಂದು ಒಂದೋ ಎರಡೋ ಹಾಸಿಗೆ ಕೊಡಿಸಿದ್ದೇನೆ. ಆದರೆ, ಬಿಜೆಪಿಯವರು ಶೇ 75ರಷ್ಟು ಹಾಸಿಗೆಗಳನ್ನು ತಾವು ಹೇಳಿದವರಿಗೆ ಕೊಡಬೇಕು.ಶೇ 25 ಹಾಸಿಗೆಗಳನ್ನು ಮಾತ್ರ ಸಾರ್ವಜನಿಕರಿಗೆ ಕೊಡಬೇಕು ಎಂದು ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಮುಖ್ಯಮಂತ್ರಿ ಇದಕ್ಕೆ ಅವಕಾಶ ಕೊಡಬಾರದು. ಬಿಜೆಪಿ ಗೂಂಡಾಗಳು ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದರೂ ಎಫ್ಐಆರ್ ದಾಖಲಾಗಿಲ್ಲ’ ಎಂದು ಕಿಡಿಕಾರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು