ಭಾನುವಾರ, ಮಾರ್ಚ್ 26, 2023
24 °C

ವಿಧಾನಸಭೆ ಚುನಾವಣೆಗೆ ತಯಾರಿ: ಇದೇ 19ರಿಂದ ಬಿಜೆಪಿ ನಾಯಕರ ರಾಜ್ಯ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿರುವ ಬಿಜೆಪಿ ರಾಜ್ಯ ಘಟಕ ಇದೇ 19ರಿಂದ ನಾಲ್ವರು ನಾಯಕರ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಿದೆ.

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರವಾಸ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾಗಿರುವ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಾಲ್ಕು ತಂಡಗಳು ಪ್ರತ್ಯೇಕವಾಗಿ ಪ್ರವಾಸ ಮಾಡಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರು, ‘2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಿಸುವ ಗುರಿ ಇಟ್ಟುಕೊಂಡು ಪಕ್ಷ ಸಂಘಟಿಸುವ ಉದ್ದೇಶದಿಂದ ಸದ್ಯದಲ್ಲೇ ರಾಜ್ಯಪ್ರವಾಸ ಆರಂಭಿಸುವೆ’ ಎಂದು ಪ್ರಕಟಿಸಿದ್ದರು.

ಯಡಿಯೂರಪ್ಪ ಒಬ್ಬರೇ ರಾಜ್ಯ ಪ್ರವಾಸ ಶುರುಮಾಡಿದರೆ ಅವರ ವರ್ಚಸ್ಸಷ್ಟೇ ವೃದ್ಧಿಯಾಗುತ್ತದೆ. ‍ಪಕ್ಷದ ಬಲವರ್ಧನೆಗಿಂದ ಅವರ ಪ್ರಭಾವಳಿ ಹೆಚ್ಚಿಸಿಕೊಳ್ಳಲಷ್ಟೇ ಪ್ರವಾಸ ಪೂರಕವಾಗಲಿದೆ ಎಂಬ ಕಾರಣ ಮುಂದೊಡ್ಡಿ ಪ್ರವಾಸಕ್ಕೆ ತಡೆಹಾಕಿದ್ದರು. ಪ್ರವಾಸಕ್ಕೆ ತಡೆಹಾಕಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಅರುಣ ಸಿಂಗ್‌ ಹೇಳಿಕೆಯನ್ನೂ ನೀಡಿದ್ದರು. 

ಆದರೆ, ಯಡಿಯೂರಪ್ಪ ಪ್ರವಾಸವನ್ನು ಆರಂಭಿಸಿರಲಿಲ್ಲ. ‘ದೀಪಾವಳಿ ಮುಗಿದ ಬಳಿಕ ಪ್ರವಾಸ ಕೈಗೊಳ್ಳುವೆ’ ಎಂದು ಅವರೇ ಹೇಳಿದ್ದರು.

ಪ್ರವಾಸದ ರೂಪುರೇಷೆ ಇನ್ನೂ ಸಿದ್ಧವಾಗಿಲ್ಲ. ನಾಲ್ವರ ನೇತೃತ್ವದ ತಂಡದಲ್ಲಿ ಯಾರು ಇರಬೇಕು? ಎಷ್ಟು ಜನರ ತಂಡ ಇರಲಿದೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಇದೇ 8ರಂದು ನಡೆಯಲಿರುವ ಪಕ್ಷ ಪದಾಧಿಕಾರಿಗಳ ಸಭೆ ಹಾಗೂ ಪ್ರಮುಖರ ಸಮಿತಿ ಸಭೆಯಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಯಾವ ವಿಭಾಗಕ್ಕೆ ಯಾರ ನೇತೃತ್ವದ ತಂಡ ಹೋಗಬೇಕು ಎಂಬ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮೂಲಗಳು ವಿವರಿಸಿವೆ.

8ರಂದು ರಾಜ್ಯಕ್ಕೆ ಸಿಂಗ್‌: 

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನವದೆಹಲಿಯಲ್ಲಿ ಭಾನುವಾರ (ನ.7) ನಡೆಯಲಿದೆ. ಅಲ್ಲಿ ಕರ್ನಾಟಕದ ಪಕ್ಷ ಸಂಘಟನೆ ಕುರಿತು ಚರ್ಚೆಗೆ ಬರುವ ಸಾಧ್ಯತೆ ಕಡಿಮೆ. ಅದಾದ ಬಳಿಕ ಅರುಣ ಸಿಂಗ್ ಬೆಂಗಳೂರಿಗೆ ಬರಲಿದ್ದಾರೆ. ಕಟೀಲ್, ಬೊಮ್ಮಾಯಿ ಹಾಗೂ ಯಡಿಯೂರಪ್ಪ ಮತ್ತಿತರ ನಾಯಕರ ಜತೆ ಸಮಾಲೋಚನೆ ನಡೆಸಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ. ಪದಾಧಿಕಾರಿಗಳ ಸಭೆಯ ಬಳಿಕವಷ್ಟೇ ಪ್ರವಾಸದ ಕಾರ್ಯಸೂಚಿ, ದಿನಾಂಕ, ರೂಪುರೇಷೆ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು