ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರನ್ನು ಬಿಜೆಪಿ ದಾರಿ ತಪ್ಪಿಸುತ್ತಿದೆ–ಸಿದ್ದರಾಮಯ್ಯ

Last Updated 4 ನವೆಂಬರ್ 2021, 6:56 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನ ಬದಲಾವಣೆ ಮಾಡುವುದಕ್ಕೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡುವಾಗ ಬಿಜೆಪಿಯಲ್ಲಿರುವ ಪರಿಶಿಷ್ಟ ನಾಯಕರೆಲ್ಲ ಎಲ್ಲಿ ಹೋಗಿದ್ದರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸಂವಿಧಾನಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಸಂವಿಧಾನದ ಪರ ಇರುವವರುನಾವು (ಕಾಂಗ್ರೆಸಿಗರು). ಪರಿಶಿಷ್ಟರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢರಾಗಬೇಕು ಅನ್ನುವುದರಲ್ಲಿ ನಾನು ಮೊದಲಿಗ’ ಎಂದರು.

‘ಸಂವಿಧಾನ ಮೀಸಲಾತಿ ಕೊಟ್ಟಿದೆ ನಿಜ. ಅದನ್ನು ಅನುಷ್ಠಾನಕ್ಕೆ ತಂದದ್ದು ಕಾಂಗ್ರೆಸ್. ಈಗ ಅದನ್ನು ಬದಲಾವಣೆ ಮಾಡಬೇಕು ಎನ್ನುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಪರಿಶಿಷ್ಟರು ಹೊಟ್ಟೆಪಾಡಿಗಾಗಿ
ಬಿಜೆಪಿಗೆ ಹೋದರು ಎಂದು ನಾನು ಎಲ್ಲಿಯೂ ಹೇಳಿಲ್ಲ. ಇದನ್ನು ರಾಜಕೀಯವಾಗಿ ಬಿಜೆಪಿಯವರು ಸೃಷ್ಟಿ ಮಾಡಿದ್ದಾರೆ. ಪರಿಶಿಷ್ಟರಿಗೆ ಅವಮಾನ ಮಾಡುವ ಕೆಲಸ ನನ್ನ ಜೀವಮಾನದಲ್ಲೇ ಮಾಡುವುದಿಲ್ಲ’ ಎಂದರು.

‘ಪರಿಶಿಷ್ಟರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು. ಮಹದೇವಪ್ಪ ಅವರನ್ನು ಲೋಕೋಪಯೋಗಿ, ಶ್ರೀನಿವಾಸ ಪ್ರಸಾದ್ ಅವರನ್ನು ಕಂದಾಯ, ಎಚ್. ಆಂಜನೇಯ ಅವರನ್ನು ಸಮಾಜ ಕಲ್ಯಾಣ‌, ಜಿ. ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಿದ್ದು ಕಾಂಗ್ರೆಸ್. ಈಗಾಗಲೆ ಪಕ್ಷ ಬಿಟ್ಟು ಹೋದವರನ್ನು ಏನೂ ಮಾಡಲಾಗದು. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ನೀಡಿದ್ದು ಕಾಂಗ್ರೆಸ್’ ಎಂದರು.

ಬಿಟ್‌ ಕಾಯಿನ್ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಗರಣದಲ್ಲಿ ಕೆಲವು ರಾಜಕೀಯ ಪ್ರಭಾವಿಗಳು ಇದ್ದಾರೆ ಎಂಬ ಮಾಹಿತಿ ಇದೆಯಷ್ಟೆ. ಇದರ ಬಗ್ಗೆ ಸರ್ಕಾರ ಸರಿಯಾದ ತನಿಖೆ ಮಾಡಿಸಲಿ, ಅಲ್ಲಿ ಯಾವ ಪಕ್ಷದ ಪ್ರಭಾವಿಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ’

‘ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೂ ಈ ಸಮುದಾಯದ ನ್ಯಾಯಬದ್ಧ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವ ಬಗ್ಗೆ ತುಟಿ ಬಿಚ್ಚದ ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಅವರು ಸಿದ್ದರಾಮಯ್ಯ ಅವರ ಮಾತನ್ನು ತಿರುಚಿ ಅಪಪ್ರಚಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ‌.

‘ಅಧಿಕಾರ ಸಿಕ್ಕಾಗ ಪರಿಶಿಷ್ಟರ ಪರ ಅತಿ ಹೆಚ್ಚು ಕೆಲಸ ಮಾಡಿದವರು ಸಿದ್ದರಾಮಯ್ಯ. ಅಂಬೇಡ್ಕರ್ ಸಿದ್ಧಾಂತವನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಂಡಿರುವ ಅವರು, ಪರಿಶಿಷ್ಟರ ವಿರುದ್ಧ ಎಂದೂ ಹಗುರವಾಗಿ ಮಾತನಾಡಿಲ್ಲ. ಬಿಜೆಪಿಯ ಪರಿಶಿಷ್ಟ ನಾಯಕರು ಸುಳ್ಳು ಪ್ರಚಾರಕ್ಕೆ ಮತ್ತು ಪರಿಶಿಷ್ಟರ ವಿರೋಧಿ ನೀತಿಗಳಿಗಾಗಿ ರಾಜ್ಯದ ಜನರ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT