ಶನಿವಾರ, ಮೇ 21, 2022
27 °C
ಇಂದಿನಿಂದ ಎರಡು ದಿನ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ

ಬಿಜೆಪಿ ಕಾರ್ಯಕಾರಿಣಿ| ವಿಧಾನ ಪರಿಷತ್‌ ಚುನಾವಣೆ ಹಿನ್ನಡೆ ಕುರಿತು ಆತ್ಮಾವಲೋಕನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಾಳೆಯಿಂದ (ಮಂಗಳವಾರ) ಎರಡು ದಿನಗಳ ಕಾಲ ರಾಜ್ಯ ಘಟಕದ ಪದಾಧಿಕಾರಿಗಳ ಸಭೆ ಮತ್ತು ಕಾರ್ಯಕಾರಿಣಿ ಸಭೆ ನಡೆಯಲಿದೆ. ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆ, ಮತಾಂತರ ನಿಷೇಧ ಮಸೂದೆ, ಪಕ್ಷದ ಬಲವರ್ಧನೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.

ಎರಡು ದಿನ ಸಭೆಯಲ್ಲಿ ಭಾಗವಹಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರು ಸೋಮವಾರ ಸಂಜೆಯೇ ಹುಬ್ಬಳ್ಳಿಗೆ ಆಗಮಿಸಿದರು. ಕಾರ್ಯಕಾರಿಣಿಯಲ್ಲಿ ಭಾಗವಹಿಸಬೇಕಾಗಿದ್ದ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊನೆ ಕ್ಷಣದಲ್ಲಿ ತಮ್ಮ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ಕೋವಿಡ್‌ಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಬೇಕಾಗಿರುವುದರಿಂದ ಅವರು ರಾಜ್ಯ ಪ್ರವಾಸ ರದ್ದು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಹಾನಗಲ್‌ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನ ಕುರಿತು ಆತ್ಮಾವಲೋಕನ ನಡೆಯಲಿದೆ. ಆಡಳಿತದಲ್ಲಿದ್ದೂ ವಿಧಾನಪರಿಷತ್‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೇ ಇರುವುದು. ಬಿಜೆಪಿಯ ಭದ್ರಕೋಟೆಗಳೆನಿಸಿದ ಕ್ಷೇತ್ರಗಳಲ್ಲೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವುದು ಹಿನ್ನಡೆ ಎಂದೇ ಭಾವಿಸಿದ್ದು, ಈ ಬಗ್ಗೆ ಪರಾಮರ್ಶೆ ನಡೆಯಲಿದೆ.

ಬೆಳಗಾವಿಯಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ತಮ್ಮ ಸಹೋದರ ಲಖನ್‌ ಜಾರಕಿಹೊಳಿಯವರನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿ, ಗೆಲ್ಲಿಸಿಕೊಂಡು ಬಂದಿರುವ ವಿಷಯವೂ ಚರ್ಚೆಗೆ ಬರಲಿದೆ. ಜಾರಕಿಹೊಳಿ ಸಹೋದರರು ಮಾತ್ರವಲ್ಲದೆ,

ಪಕ್ಷದ ಇತರರೂ ಕೈಜೋಡಿಸಿದ್ದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಸೋಲಾಯಿತು ಎಂಬ ಚರ್ಚೆ ‍ಪಕ್ಷದ ವಲಯದಲ್ಲಿದೆ.

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಬಗ್ಗೆಯೂ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಬೆಳಗಾವಿ ಅಧಿವೇಶನದ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಿದ ಬಗ್ಗೆ ಮುಂಬರುವ ಜಂಟಿ ಅಧಿವೇಶನದಲ್ಲಿ ವಿಧಾನಪರಿಷತ್ತಿನಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಬಗ್ಗೆ ಚರ್ಚೆ ನಡೆಯಲಿದೆ.

ಬಾಕಿ ಇರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗಳನ್ನು ಎದುರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. 2023 ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಪ್ರಾಥಮಿಕ ಹಂತದ ಸಮಾಲೋಚನೆ ನಡೆಯಲಿದೆ.

ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಕುಟುಂಬ ಸಮೇತ ದುಬೈಗೆ ಪ್ರವಾಸ ತೆರಳಿರುವುದರಿಂದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದೂ ಮೂಲಗಳು ತಿಳಿಸಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು