ಶನಿವಾರ, ಮೇ 28, 2022
24 °C
ಎರಡು ದಿನಗಳ ರಾಜ್ಯಕಾರಿಣಿ ಆರಂಭ

ವಿಜಯನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ; ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಶನಿವಾರ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಆರಂಭಗೊಂಡ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹೆಚ್ಚಿನ ಮುಖಂಡರು ಕಾಂಗ್ರೆಸ್‌ ವಿರುದ್ಧ ಗುಡುಗಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಹಲವರು ಮುಖಂಡರು ಬಿಜೆಪಿಯ ಸಾಧನೆಗಳನ್ನು ವಿವರಿಸಿದರು. ಅಷ್ಟೇ ಸಮಯವನ್ನು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಲು ತೆಗೆದುಕೊಂಡರು.

ಕಟೀಲ್‌ ಮಾತನಾಡಿ, ‘70 ವರ್ಷ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿಯೇ ಮುಳುಗಿತ್ತು. ಆದರೆ, ಕಳೆದ ಏಳು ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಉಜ್ವಲ, ಜನ್‌ಧನ್‌, ಮುದ್ರಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾವುದರಲ್ಲೂ ಭ್ರಷ್ಟಾಚಾರ ನಡೆದಿಲ್ಲ. ದೇಶದ ಆಡಳಿತದಲ್ಲಿ ಪರಿವರ್ತನೆ ತರುವ ಕೆಲಸವಾಗುತ್ತಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಆಡಳಿತದಲ್ಲಿ ಕಾಲರಾ, ಮಲೇರಿಯಾ, ಪೋಲಿಯೋ ಬಂದಿತ್ತು. ಇವುಗಳನ್ನು ನಿಯಂತ್ರಿಸಲು ಕಾಂಗ್ರೆಸ್‌ 50 ವರ್ಷಗಳಲ್ಲಿ ಸಾಧ್ಯವಾಗಲಿಲ್ಲ. ಆದರೆ, ಬಹಳ ಕಡಿಮೆ ಅವಧಿಯಲ್ಲಿ ಕೋವಿಡ್‌ ಲಸಿಕೆ ಕಂಡು ಹಿಡಿದು, ದೇಶದ ಎಲ್ಲ ಜನರಿಗೂ ಲಸಿಕೆ ನೀಡಲಾಯಿತು. ಇದರಿಂದ ಜನರಿಗೆ ಬಿಜೆಪಿ ಬಗ್ಗೆ ವಿಶ್ವಾಸ ಮೂಡಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸತತ ಸೋಲುಗಳಿಂದ ಕಾಂಗ್ರೆಸ್‌ಗೆ ದಿಕ್ಕು ತೋಚದಂತಾಗಿದೆ. ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದ ಹುಲ್ಲು ಕಡ್ಡಿ ಹಿಡಿದುಕೊಂಡು ಮೇಲೆ ಬರಲು ಯತ್ನಿಸುತ್ತಿದೆ. ಆದರೆ, ಅದರಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದರು. ಇತರೆ ಮುಖಂಡರು ಅವರ ಭಾಷಣದಲ್ಲಿ ಕಾಂಗ್ರೆಸ್‌ ಅನ್ನು ಕುಟುಕಿದರು.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಸಂಸದ ಡಿ.ವಿ. ಸದಾನಂದಗೌಡ, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷದ ಸಹ ಕಾರ್ಯದರ್ಶಿ ಡಿ.ಕೆ. ಅರುಣಾ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ಇದನ್ನೂ ಓದಿ: 

‘ಡಿಕೆಶಿಯಷ್ಟು ಪ್ರಾಮಾಣಿಕರು ಯಾರಾದರೂ ಇದ್ದಾರೆಯೇ?’
‘ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಷ್ಟು ಪ್ರಾಮಾಣಿಕ ವ್ಯಕ್ತಿ ಬೇರೆ ಯಾರಾದರೂ ಇದ್ದಾರೆಯೇ? ಅವರು ಅಣ್ಣಾ ಹಜಾರೆ ತರಹ ಪ್ರಾಮಾಣಿಕ ವ್ಯಕ್ತಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.

ಈಶ್ವರಪ್ಪನವರು ಅವರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ನವರು ಹೋರಾಟದ ನಾಟಕವಾಡುತ್ತಿದ್ದಾರೆ. ಈ ನಾಟಕದ ಪ್ರತಿಭಟನೆಯನ್ನು ಯಾರೂ ನಂಬುವುದಿಲ್ಲ. ಕಾಂಗ್ರೆಸ್‌ನವರಿಗೆ ಮಾನ, ಮರ್ಯಾದೆ ಇಲ್ಲ. ಇಂತಹದ್ದರಲ್ಲಿ ಶಿವಕುಮಾರ ಬಗ್ಗೆ ಮತ್ತೇನೂ ಹೇಳುವುದು’ ಎಂದರು.

‘ಬೆಲೆ ಏರಿಕೆ ಬಗ್ಗೆ ಈಗ ಮಾತನಾಡಲಾರೆ’
‘ಬೆಲೆ ಏರಿಕೆ ಬಗ್ಗೆ ಈಗ ಮಾತನಾಡಲಾರೆ. ಈಗೇನಿದ್ದರೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಕುರಿತಾಗಿಯಷ್ಟೇ ಮಾತನಾಡುವೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

‘ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ನೀವೇನೂ ಹೇಳುವಿರಿ ಎಂದು ಸುದ್ದಿಗಾರರು ಕೇಳಿದಾಗ, ‘ಬೇರೆ ವಿಷಯಗಳ ಬಗ್ಗೆ ಈಗ ಮಾತನಾಡಲಾರೆ. ಕಾರ್ಯಕಾರಿಣಿ ಬಗ್ಗೆಯಷ್ಟೇ ಪ್ರಶ್ನೆ ಕೇಳಿ. 4 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿರುವುದರಿಂದ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಈಗ ಕರ್ನಾಟಕದಲ್ಲಿ ಗೆಲ್ಲುವ ಸಂಕಲ್ಪ ಕೈಗೊಳ್ಳಲಾಗಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘150 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು’
‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಈಗಾಗಲೇ ಹಲವು ತಂಡಗಳನ್ನು ರಚಿಸಿಕೊಂಡು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಜನ ಮತ್ತೊಮ್ಮೆ ಆಶೀರ್ವದಿಸುತ್ತಾರೆ’ ಎಂದರು.

ಸಚಿವ ಸಂಪುಟದ ಸಚಿವರು ಭಾಗಿ
ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಕೆಲ ಶಾಸಕರು, ಕೇಂದ್ರ ಸಚಿವರು, ಸಚಿವ ಸಂಪುಟದ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು. ಸಚಿವರಾದ ಆರ್‌. ಅಶೋಕ್‌, ಶಿವರಾಮ ಹೆಬ್ಬಾರ್‌, ಬಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ಎಲ್ಲ 31 ಜಿಲ್ಲೆಗಳ ಬಿಜೆಪಿ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ಗೋಪೂಜೆ, ಬಿಜೆಪಿ ಧ್ವಜಾರೋಹಣ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಗೋ ಪೂಜೆ ನೆರವೇರಿಸಿದರು. ಸಿ.ಎಂ. ಗೋವಿನ ಹಣೆಗೆ ಮುತ್ತಿಟ್ಟರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಇತರೆ ಮುಖಂಡರು ಪಕ್ಷದ ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮವನ್ನು ಸಿ.ಎಂ. ಉದ್ಘಾಟಿಸಿದರು. ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳ ಪ್ರದರ್ಶನವನ್ನು ವಿವಿಧ ಕಡೆಗಳಿಂದ ಬಂದಿದ್ದ ಕಾರ್ಯಕಾರಿಣಿ ಸದಸ್ಯರು ಕಣ್ತುಂಬಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು