ಮಂಗಳವಾರ, ಮೇ 17, 2022
30 °C
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿಕೆ

ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸೋಣ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ರೈತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ರೈತರ ದಾರಿ ತಪ್ಪಿಸುತ್ತಿವೆ. ನಾವೆಲ್ಲರೂ ಸೇರಿ ಈ ಕಾಯ್ದೆಗಳ ಕುರಿತು ರೈತರಲ್ಲಿ ಅರಿವು ಮೂಡಿಸೋಣ. ಆ ಮೂಲಕ ಕೇಂದ್ರದ ವಿರುದ್ಧ ರೈತರನ್ನು ಎತ್ತಿಕಟ್ಟುತ್ತಿರುವವರಿಗೆ ತಿರುಗೇಟು ನೀಡೋಣ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕರೆ ನೀಡಿದರು.

ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ‘ನೂತನ ಕಾಯ್ದೆಗಳ ಜಾರಿಯಿಂದ ರೈತರು ಈಗಾಗಲೇ ಪಡೆಯುತ್ತಿರುವ ಸೌಲಭ್ಯಗಳು ರದ್ದಾಗುವುದಿಲ್ಲ. ಎಪಿಎಂಸಿಯನ್ನು ಸದೃಢಗೊಳಿಸುವ ಸದಾಶಯವನ್ನು ಇವು ಒಳಗೊಂಡಿವೆ. ಇವುಗಳಿಂದ ರೈತರ ಸ್ವಾತಂತ್ರ್ಯ ಹರಣವಾಗುವುದಿಲ್ಲ. ಅವರನ್ನು ವ್ಯಾಪಾರಿಗಳ ಕಪಿಮುಷ್ಠಿಗೆ ದೂಡುವ ದುರುದ್ದೇಶವೂ ಅಡಗಿಲ್ಲ. ಕೆಲ ಪಕ್ಷ ಹಾಗೂ ವ್ಯಕ್ತಿಗಳು ಈ ಕಾಯ್ದೆಗಳ ಕುರಿತು ಅಪಪ್ರಚಾರ ನಡೆಸುತ್ತಿವೆ. ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು ಎಂಬುದು ರೈತರ ಬಹುಕಾಲದ ಬೇಡಿಕೆ. ಹೊಸ ಕಾಯ್ದೆಗಳ ಮೂಲಕ ಸರ್ಕಾರವು ಅವರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಿದೆ’ ಎಂದು ಪ್ರತಿಪಾದಿಸಿದರು.

‘ಸರ್ಕಾರದ ವತಿಯಿಂದ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಆದರೆ ಬಹುಪಾಲು ಮಂದಿಗೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಸರ್ಕಾರದ ಸಾಧನೆಗಳ ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ವಿಚಾರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಇನ್ನು ಮುಂದಾದರೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪಿ.ಸಿ.ಮೋಹನ್‌ ‘ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮುಖೇನ ಜನರಿಗೆ ತಲುಪಿಸುವುದು ಅಸಾಧ್ಯ. ಸಾಮಾಜಿಕ ಜಾಲತಾಣಗಳ ಬಳಕೆ ಗೊತ್ತಿದ್ದರೆ ಈ ಹಾದಿ ಸರಳವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಜೊತೆ ಮಾತನಾಡುವಾಗಲೆಲ್ಲಾ ಈ ಮಾತನ್ನು ಒತ್ತಿ ಹೇಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕನಿಷ್ಠ 2 ಲಕ್ಷ ಹಿಂಬಾಲಕರಿಲ್ಲದವರಿಗೆ ಲೋಕಸಭಾ ಟಿಕೆಟ್‌ ನೀಡೊಲ್ಲ ಎಂದು ಹಿಂದೊಮ್ಮೆ ಅಮಿತ್‌ ಶಾ ನುಡಿದಿದ್ದರು’ ಎಂದರು.

ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಸಂಚಾಲಕ ವಿನೋದ್‌ ಕೃಷ್ಣಮೂರ್ತಿ, ಸಹ ಸಂಚಾಲಕ ಪ್ರಶಾಂತ್ ಜಾಧವ್‌ ಇದ್ದರು.

ಸೌಲಭ್ಯಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು ಸಹಜ

‘ತಮ್ಮ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಕುರುಬರು, ಪಂಚಮಶಾಲಿ ಲಿಂಗಾಯತರು, ಒಕ್ಕಲಿಗರು ಹೀಗೆ ವಿವಿಧ ಜನಾಂಗದವರು ತಮಗೆ ಎಸ್‌ಸಿ, ಎಸ್‌ಟಿ, 2ಎ ಸ್ಥಾನಮಾನ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಯಾರನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು. ಯಾರಿಗೆ ಯಾವ ಸೌಕರ್ಯ ಒದಗಿಸಬೇಕು ಎಂಬುದರ ಬಗ್ಗೆ ಸರ್ಕಾರವು ತೀರ್ಮಾನ ಕೈಗೊಳ್ಳಲಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ಎಲ್ಲಾ ವರ್ಗದವರಿಗೆ ನ್ಯಾಯ ದೊರಕಿಸಿಕೊಡಬೇಕಾದುದು ಸರ್ಕಾರದ ಕರ್ತವ್ಯ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇವೆ’ ಎಂದರು.

ಇದನ್ನೂ ಓದಿ: 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು