ಬೆಂಗಳೂರು: ‘ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹೋರಾಟ ನಡೆಯಲಿದ್ದು, ಜೆಡಿಎಸ್ ಲೆಕ್ಕಕ್ಕಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರದ ‘ಬೂತ್ ವಿಜಯ ಸಂಕಲ್ಪ ಸಮಾವೇಶ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘25ರಿಂದ 30 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಜೆಡಿಎಸ್, ಚುನಾವಣೆ ಬಳಿಕ ಅಧಿಕಾರಕ್ಕಾಗಿ ಕಾಂಗ್ರೆಸ್ ಮಡಿಲಿನಲ್ಲಿ ಬೆಚ್ಚಗೆ ಕೂರುತ್ತದೆ. ಆದ್ದರಿಂದ, ಜೆಡಿಎಸ್‌ಗೆ ಮತ ಹಾಕಿದರೆ, ಅದು ಕಾಂಗ್ರೆಸ್‌ಗೆ ಮತ ಹಾಕಿದಂತೆ’ ಎಂದು ಹರಿಹಾಯ್ದರು.
‘ಬಿಜೆಪಿ ರಾಷ್ಟ್ರಭಕ್ತರ ಸಂಘಟನೆ ಮತ್ತು ಪಕ್ಷ. ಕಾಂಗ್ರೆಸ್ ಪಕ್ಷವು ದೇಶವನ್ನು ವಿಭಜಿಸುವ ತುಕ್ಡೇ ತುಕ್ಡೇ ಗ್ಯಾಂಗ್ ಜತೆಗಿದೆ. ಕರ್ನಾಟಕದ ಮತದಾರರು ದೇಶ ಭಕ್ತರ ಜತೆಗೆ ನಿಲ್ಲಬೇಕೋ ಅಥವಾ ತುಕ್ಡೇ ತುಕ್ಡೇ ಗ್ಯಾಂಗ್ ಜತೆ ನಿಲ್ಲಬೇಕೋ ಎಂಬುದನ್ನು ತೀರ್ಮಾನಿಸುತ್ತಾರೆ’ ಎಂದರು.
‘ಈ ಹಿಂದೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಸರ್ಕಾರಗಳು ರಾಷ್ಟ್ರ ವಿರೋಧಿ ಸಂಘಟನೆಯಾದ ಪಿಎಫ್‌ಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟವು. ಆದರೆ, ಪಿಎಫ್‌ಐ ಅನ್ನು ಬಿಜೆಪಿ ನಿಷೇಧಿಸಿತು. ಈ ಸಂಘಟನೆ
ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ನೋಡಿದ್ದೇವೆ. ಈ ಸಂಘಟನೆಯನ್ನು ನಿಷೇಧಿಸಿದ್ದರಿಂದ ಸಾವಿರಾರು ಯುವಕ–ಯುವತಿಯರನ್ನು ರಕ್ಷಿಸಿದಂತಾಗಿದೆ’ ಎಂದು ಶಾ ಹೇಳಿದರು.
‘ಸಿದ್ದರಾಮಯ್ಯ ಅವಧಿಯ ಹಗರಣದ ತನಿಖೆ’
‘ಸಿದ್ದರಾಮಯ್ಯ ಅವಧಿಯಲ್ಲಿ ನಡೆದ 50ಕ್ಕೂ ಹೆಚ್ಚು ಹಗರಣಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸಿ ಮರು ತನಿಖೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಹಗರಣಗಳನ್ನು ಮುಚ್ಚಿ ಹಾಕಲೆಂದು ಎಸಿಬಿಗೆ ಪ್ರಕರಣಗಳನ್ನು ಒಪ್ಪಿಸಿ, ಕ್ಲೀನ್‌ಚಿಟ್ ಪಡೆಯಲಾಯಿತು. ಈ ಉದ್ದೇಶದಿಂದಲೇ ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಗಿಸಿದರು’ ಎಂದರು.
‘ಮೋದಿ–ಶಾ, ಬೆಂಕಿ–ಬಿರುಗಾಳಿ’
‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬೆಂಕಿ– ಬಿರುಗಾಳಿ ಇದ್ದಂತೆ. ಇವರನ್ನು ತಡೆಯುವ ಶಕ್ತಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಇಲ್ಲ. ರಾಹುಲ್ ಗಾಂಧಿ ಸನ್ಯಾಸಿ ಆಗೋಣ ಅಂತ ಗಡ್ಡ ಬಿಟ್ಟಿದ್ದಾರೆ. ರಾಹುಲ್ ಮತ್ತು ಸೋನಿಯಾ ಅವರಿಗೂ ಮೋದಿ– ಶಾ ಅವರ ಪ್ರವಾಹ ತಡೆಯುವ ಶಕ್ತಿ ಇಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.