ಮಂಗಳವಾರ, ಜನವರಿ 19, 2021
27 °C

ಕುತೂಹಲಕ್ಕೆ ಕಾರಣವಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಗೈರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೃಹಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಗೈರು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ ನಡೆದಾಗಲೂ ಸಂತೋಷ್‌ ಅವರು ಹಾಜರಾಗುವುದು ಸಹಜ. ಕೆಲವು ಸಂದರ್ಭಗಳಲ್ಲಿ ಯಡಿಯೂರಪ್ಪ ವರಿಷ್ಠರಿಗೆ ಮಾಹಿತಿ ಮುಟ್ಟಿಸಲು ಸಂತೋಷ್‌ ಅವರನ್ನು ಭೇಟಿ ಮಾಡಿದ್ದೂ ಇದೆ. ಆದರೆ, ಈ ಬಾರಿ ಅವರು ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ.

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್‌ಸಿಂಗ್ ಅವರ ನೇಮಕ ಆದ ಬಳಿಕ ಸಂತೋಷ್‌ ಅವರು ರಾಜ್ಯ ರಾಜಕೀಯದತ್ತ ಹೆಚ್ಚು ಗಮನ ಹರಿಸುತ್ತಿಲ್ಲ. ಅರುಣ್‌ ಅವರು ರಾಜ್ಯದ ವಿದ್ಯಮಾನಗಳ ವರದಿಯನ್ನು ನೇರವಾಗಿ ಅಮಿತ್‌ ಶಾ ಮತ್ತು ನಡ್ಡಾ ಅವರಿಗೆ ತಲುಪಿಸುತ್ತಾರೆ. ಉಸ್ತುವಾರಿಯಾಗಿ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದೊಳಗಿನ ಸಮಸ್ಯೆಯನ್ನು ಬಗೆಹರಿಸಲು ಆದ್ಯತೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲೂ ನಾಯಕತ್ವದ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಸಂಪುಟ ವಿಸ್ತರಣೆಗೆ ಇರುವ ಅಡ್ಡಿಗಳನ್ನು ನಿವಾರಿಸಿದ್ದೂ ಅಲ್ಲದೆ, ಅದರ ಪರಿಣಾಮ ದಿಢೀರ್‌ ಎಂದು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು, ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಲು ಸಾಧ್ಯವಾಯಿತು ಎಂದು ವ್ಯಾಖ್ಯಾನಿಸಲಾಗಿದೆ.

ಈ ಬಾರಿ ಯಡಿಯೂರಪ್ಪ ಅವರು ವರಿಷ್ಠರ ಭೇಟಿಗಾಗಿ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕರೆದುಕೊಂಡು ಹೋಗಿದ್ದರು. ವರಿಷ್ಠರ ಜತೆ ಸಂವಹನಕ್ಕೆ ತೊಡಕು ಆಗಬಾರದು ಎಂಬ ಕಾರಣಕ್ಕೆ ಕರೆದೊಯ್ದಿದ್ದು, ಅದಕ್ಕೆ ವರಿಷ್ಠರ ಅನುಮತಿಯೂ ಇತ್ತು ಎಂದು ಮೂಲಗಳು ಹೇಳಿವೆ.

‘ಕಮಾಲ್‌ ಕರ್‌ ದಿಯಾ’: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಭದ್ರಕೋಟೆ ಎನಿಸಿದ್ದ ಕೆ.ಆರ್‌.ಪೇಟೆ ಮತ್ತು ಶಿರಾ ಚುನಾವಣೆಯಲ್ಲಿ ‘ಕಮಲ’ ಅರಳಿಸಿದ ಬಗ್ಗೆ ಅಮಿತ್‌ ಶಾ ಮತ್ತು ನಡ್ಡಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ತಳವೂರುವುದು ಅಸಂಭವ ಎಂದೇ ವರಿಷ್ಠರು ಭಾವಿಸಿದ್ದರು. ರಾಷ್ಟ್ರೀಯ ಮಟ್ಟದ ಆಂಗ್ಲ ಪತ್ರಿಕೆಯೊಂದರಲ್ಲಿ ಈ ಗೆಲುವಿನ ವಿಶ್ಲೇಷಣೆ ನೋಡಿ ಅಮಿತ್‌ ಶಾ ಅವರು ‘ಕಮಾಲ್‌ ಕರ್‌ ದಿಯಾ’ ಎಂಬ ಉದ್ಘಾರ ಹೊರಡಿಸಿದರು. ಫಲಿತಾಂಶ ಇಬ್ಬರನ್ನೂ ಬೆರಗುಗೊಳಿಸಿದೆ. ಈ ಗೆಲುವಿಗಾಗಿ ಬಿ.ವೈ. ವಿಜಯೇಂದ್ರ ಅವರ ಶ್ರಮ ತಮ್ಮ ಗಮನಕ್ಕೆ ಬಂದಿದೆ ಎಂಬ ಮಾತುಗಳನ್ನೂ ಆಡಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ತಮ್ಮ ಬಗ್ಗೆ ನಿರಂತರವಾಗಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ವಿಜಯೇಂದ್ರ ಸಮಜಾಯಿಷಿ ನೀಡಿದ್ದರು. ತಂದೆಯವರ ಸಹಾಯಕ್ಕೆ ಇದ್ದೇನೆಯೇ ಹೊರತು, ಆಡಳಿತ ಅಥವಾ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕೆಲವೊಮ್ಮೆ ಸಲಹೆ ಕೇಳುತ್ತಾರೆ. ಅಂತಿಮವಾಗಿ ತಂದೆಯವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು