ಮಂಗಳವಾರ, ಆಗಸ್ಟ್ 9, 2022
20 °C
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯ

ಕಪ್ಪು ಶಿಲೀಂಧ್ರ: ಔಷಧ ಪೂರೈಕೆ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವನ್ನು ಆಸ್ಪತ್ರೆಗಳಿಗೆ ಪೂರೈಸುವಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ.

ಕೋವಿಡ್ ಎರಡನೇ ಅಲೆ ಪೂರ್ವದಲ್ಲಿ ಅಷ್ಟಾಗಿ ಕಂಡುಬರದ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಕೆಲ ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸೋಂಕು, ಮೂಗಿನ ಮೂಲಕ ಕಣ್ಣು ಹಾಗೂ ಮಿದುಳಿಗೆ ಹರಡುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸೋಂಕು ಮಿದುಳನ್ನು ವ್ಯಾಪಿಸಿಕೊಂಡು, ವ್ಯಕ್ತಿಯ ಜೀವವನ್ನೇ ಕಸಿದುಕೊಳ್ಳುತ್ತದೆ.

ಈಗಾಗಲೇ ನಗರದಲ್ಲಿ 800ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಪ್ರಕರಣಗಳು ವರದಿಯಾದ ಬಳಿಕ ಸರ್ಕಾರಕ್ಕೆ ಮಾಹಿತಿ ಒದಗಿಸಬೇಕೆಂದು ಸೂಚಿಸಲಾಗಿದ್ದರೂ ಕೆಲ ಖಾಸಗಿ ಆಸ್ಪತ್ರೆ
ಗಳು ಸಮರ್ಪಕವಾಗಿ ವಿವರ ಸಲ್ಲಿಸುತ್ತಿಲ್ಲ.

ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇಳಿಮುಖವಾದರೂ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುವರ ಸಂಖ್ಯೆ ಕಡಿಮೆಯಾಗಿಲ್ಲ. ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಮುಂದುವರಿದಿದೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಔಷಧ ಸಿಗದ ಪರಿಣಾಮ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಔಷಧ ನಿಯಂತ್ರಕರ ಮೂಲಕ ಔಷಧ ಹಂಚಿಕೆ ವ್ಯವಸ್ಥೆ ರೂಪಿಸಿದ್ದರೂ ಮನವಿ ಸಲ್ಲಿಸಿದ ಬಳಿಕ ಪೂರೈಕೆಯಾಗಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತಿವೆ. ಇದರಿಂದಾಗಿ ಕಾಯಿಲೆಯ ತೀವ್ರತೆ ಹೆಚ್ಚುವ ಸಾಧ್ಯತೆ ಇರುತ್ತದೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ರೋಗಿಗಳಿಗೆ ಸಮಸ್ಯೆ: ನಗರದಲ್ಲಿ ಈ ಸೋಂಕಿನ ಉಚಿತ ಚಿಕಿತ್ಸೆಗೆ ಸರ್ಕಾರ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳನ್ನು ಗುರುತಿಸಿದೆ. ಈ ಆಸ್ಪತ್ರೆಗಳಲ್ಲಿ ಈ ಸೋಂಕಿನ ಚಿಕಿತ್ಸೆಗೆ ಗೊತ್ತುಪಡಿಸಲಾದ ಹಾಸಿಗೆಗಳು ಭರ್ತಿಯಾಗಿರುವ ಪರಿಣಾಮ ಸೋಂಕಿತರು ದಾಖಲಾತಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 160 ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಅದೇ ರೀತಿ, ವಿಕ್ಟೋರಿಯಾದಲ್ಲಿಯೂ 100ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಔಷಧ ಪೂರೈಕೆಯಾಗದ ಪರಿಣಾಮ ಆಸ್ಪತ್ರೆಗಳು ಇರುವ ಔಷಧದಲ್ಲಿಯೇ ನಿರ್ವಹಣೆ ಮಾಡುತ್ತಿವೆ. ಕಳೆದ ಮೇ 11ರಿಂದ ಕೇಂದ್ರ ಸರ್ಕಾರವು ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧದ 37,980 ಸೀಸೆಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ.

‘ಕಪ್ಪು ಶಿಲೀಂಧ್ರ ಸೋಂಕಿಗೆ ಈ ಮೊದಲು 10 ಹಾಸಿಗೆಗಳನ್ನು ಗುರುತಿಸಲಾಗಿತ್ತು. ಈಗ ಆ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿರುವ ಪರಿಣಾಮ ಎಲ್ಲರನ್ನೂ ದಾಖಲಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ಈಗಾಗಲೇ ದಾಖಲಾದವರಿಗೂ ಸಮರ್ಪಕವಾಗಿ ಔಷಧ ಪೂರೈಕೆಯಾಗುತ್ತಿಲ್ಲ. ಇರುವ ಔಷಧ ಬಳಸಿ ಚಿಕಿತ್ಸೆ ಮುಂದುವರಿಸಬೇಕಾಗಿದೆ’ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಕಪ್ಪು ಶಿಲೀಂಧ್ರ ಔಷಧ ಹಂಚಿಕೆಯ ನೋಡಲ್ ಅಧಿಕಾರಿ ಅವಿನಾಶ್ ಮೆನನ್ ಅವರು ಪ್ರತಿಕ್ರಿಯೆ ಪಡೆಯಲು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

‘ಬಗೆಹರಿಯದ ಔಷಧ ಸಮಸ್ಯೆ’

‘ಕಪ್ಪು ಶಿಲೀಂಧ್ರ ಸೋಂಕಿಗೆ ಮಾರುಕಟ್ಟೆಯಲ್ಲಿ ಔಷಧ ಸಿಗುತ್ತಿಲ್ಲ. ಸರ್ಕಾರದ ಮೂಲಕವೇ ಲಭ್ಯವಿರುವ ಔಷಧವು ಖಾಸಗಿ ಆಸ್ಪತ್ರೆಗಳಿಗೂ ಹಂಚಿಕೆಯಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದಂತೆ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಆದರೂ ಔಷಧದ ಸಮಸ್ಯೆ ಬಗೆಹರಿದಿಲ್ಲ. ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧ ಸಿಗದ ಪರಿಣಾಮ ಪರ್ಯಾಯ ಔಷಧವನ್ನು ಬಳಕೆ ಮಾಡಲಾಗುತ್ತಿದೆ. 30 ರೋಗಿಗಳಿಗೆ ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧಕ್ಕೆ ಮನವಿ ಸಲ್ಲಿಸಿದರೆ 4ರಿಂದ 5 ಮಂದಿಗೆ ಅಗತ್ಯವಿರುವಷ್ಟು ದೊರೆಯುತ್ತಿದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

ಪೀಪಲ್ ಟ್ರೀ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ರವಿ ಸಚ್ಚಿದಾನಂದ, ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ ಔಷಧಕ್ಕೆ ಸಲ್ಲಿಸಲಾದ ಬೇಡಿಕೆಯಲ್ಲಿ ಶೇ 30ರಿಂದ ಶೇ 40ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ರೋಗಿಗಳನ್ನು ದಾಖಲಿಸಿಕೊಂಡ ಬಳಿಕ ವಿವರವನ್ನು ಸರ್ಕಾರದ ಪೋರ್ಟಲ್‌ನಲ್ಲಿ ಸಲ್ಲಿಸಲಾಗುತ್ತದೆ. ಬಳಿಕ ಔಷಧ ತಲುಪಲು ಮೂರು ದಿನಗಳಾಗುತ್ತವೆ. ಚಿಕಿತ್ಸೆ ವಿಳಂಬವಾದಲ್ಲಿ ರೋಗಿಗಳಿಗೆ ಸಮಸ್ಯೆಯಾಗುತ್ತದೆ’ ಎಂದರು.

ಕೋವಿಡ್ ಪೀಡಿತರಲ್ಲದವರಿಗೂ ಸೋಂಕು

ಬೌರಿಂಗ್ ಸೇರಿದಂತೆ ನಗರದ ಕೆಲ ಆಸ್ಪತ್ರೆಗಳಲ್ಲಿ ಕೋವಿಡ್‌ ಪೀಡಿತರಲ್ಲದವರೂ ಕಪ್ಪು ಶಿಲೀಂಧ್ರ ಸೋಂಕಿತರಾಗಿ ದಾಖಲಾಗಿದ್ದಾರೆ. ಮಕ್ಕಳಿಗೆ ಕೂಡ ಸೋಂಕು ತಗುಲಿದೆ. ಇಂತಹ ಕೆಲ ಪ್ರಕರಣಗಳಲ್ಲಿ ವ್ಯಕ್ತಿಗೆ ಅರಿವಿಲ್ಲದೆಯೇ ಕೊರೊನಾ ಸೊಂಕು ತಗುಲಿ, ಕೋವಿಡ್ ಕಾಯಿಲೆ ವಾಸಿಯಾಗಿರುವ ಬಗ್ಗೆ ಕೂಡ ವೈದ್ಯಕೀಯ ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಆ್ಯಂಟಿಬಾಡಿ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತಿದೆ. ಇನ್ನೂ ಕೆಲವು ‍ಪ್ರಕರಣಗಳಲ್ಲಿ ಅನಿಯಂತ್ರಿತ ಮಧುಮೇಹ, ವಿವಿಧ ಕಾಯಿಲೆಗಳಿಂದ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವುದೇ ಕಾರಣ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ಕಾಯಿಲೆ ಕಾಣಿಸಿಕೊಳ್ಳುವ ಪೂರ್ವದಲ್ಲಿ ಕೂಡ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗುತ್ತಿದ್ದವು. ಕೋವಿಡ್‌ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಜತೆಗೆ ಸ್ಟೆರಾಯ್ಡ್‌ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಅನಿಯಂತ್ರಿತ ಪ್ರಮಾಣವಿರುತ್ತದೆ. ಅಂತಹವರಲ್ಲಿ ಹೆಚ್ಚಾಗಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಅನಿಯಂತ್ರಿತ ಮಧುಮೇಹ ಇದಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಸ್ಟೆರಾಯ್ಡ್ ಪಡೆದಲ್ಲಿ ಕೊರೊನಾ ಸೋಂಕಿತರಾಗಿರದಿದ್ದರೂ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳಲಿದೆ’ ಎಂದು ಶ್ವಾಸಕೋಶ ತಜ್ಞ ಡಾ. ವಿವೇಕ್ ಜಿ. ತಿಳಿಸಿದರು.

‘ಕೋವಿಡ್‌ ಪೂರ್ವದಲ್ಲಿ ಕೂಡ ಕಪ್ಪು ಶಿಲೀಂಧ್ರ ಸೊಂಕು ಕಾಣಿಸಿಕೊಳ್ಳುತ್ತಿತ್ತು. ಇದು ಹೊಸ ಕಾಯಿಲೆಯಲ್ಲ. ಮುಂದೆ ಕೂಡ ಇರುತ್ತದೆ. ಅನಿಯಂತ್ರಿತ ಮಧುಮೇಹ, ಕ್ಯಾನ್ಸರ್, ಎಚ್‌ಐವಿ ಸೇರಿದಂತೆ ವಿವಿಧ ಕಾಯಿಲೆ ಇರುವವರಿಗೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೋವಿಡ್ ಪೀಡಿತರಾಗದೆಯೇ ಶಿಲೀಂಧ್ರ ಸೋಂಕಿಗೆ ಒಳಗಾದ ಹಲವು ಪ್ರಕರಣಗಳನ್ನು ನೋಡಿದ್ದೇವೆ’ ಎಂದು ಡಾ. ರವಿ ಸಚ್ಚಿದಾನಂದ ವಿವರಿಸಿದರು.

* ಕಪ್ಪು ಶಿಲೀಂಧ್ರ ಸೋಂಕಿತರಿಗೆ ಸಮಸ್ಯೆಯಾಗದಂತೆ ಔಷಧವನ್ನು ಒದಗಿಸಲಾಗುತ್ತಿದೆ. ನಮಗೆ ಅಗತ್ಯವಿರುವುಷ್ಟು ಔಷಧಗಳು ಪೂರೈಕೆಯಾಗುತ್ತಿವೆ. ರೋಗಿಗಳ ಸಂಖ್ಯೆ ಹೆಚ್ಚಾಗಿದೆ

-ಡಾ. ಮನೋಜ್ ಕುಮಾರ್, ಬೌರಿಂಗ್ ಆಸ್ಪತ್ರೆ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು