ಮಂಗಳವಾರ, ಜುಲೈ 27, 2021
28 °C
444 ಜನರಲ್ಲಿ ರೋಗ ಪತ್ತೆ: 12 ಮಂದಿ ಮರಣ

ಕಪ್ಪು ಶಿಲೀಂಧ್ರ: ಚುಚ್ಚುಮದ್ದಿಗೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕರ್‌ಮೈಕೊಸಿಸ್‌) ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಔಷಧಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪ್ರತ್ಯೇಕವಾಗಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದರೂ, ಲೈಪೊಸೋಮಲ್‌ ಆ್ಯಂಫೊಟೆರಿಸಿನ್‌ ಚುಚ್ಚುಮದ್ದಿಗಾಗಿ ಪರದಾಟ ಆರಂಭವಾಗಿದೆ.

ರಾಜ್ಯದಲ್ಲಿ ಈವರೆಗೆ 444 ಜನರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಅಷ್ಟೂ ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ನಿತ್ಯವೂ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಔಷಧಿಯ ಬೇಡಿಕೆಯೂ ಹೆಚ್ಚತೊಡಗಿದೆ. ರಾಜ್ಯದ ಬೇಡಿಕೆಗೆ ಹೋಲಿಸಿದರೆ ಅತ್ಯಲ್ಪ ಪ್ರಮಾಣದಲ್ಲಿ ಆ್ಯಂಫೊಟೆರಿಸಿನ್‌ ಚುಚ್ಚುಮದ್ದು ಪೂರೈಕೆಯಾಗುತ್ತಿದೆ.

‘ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಬಳಸುವ ಆ್ಯಂಫೊಟೆರಿಸಿನ್‌ ಚುಚ್ಚುಮದ್ದಿನ 20,000 ವಯಲ್ಸ್‌ಗಳಿಗೆ ಆರೋಗ್ಯ ಇಲಾಖೆ ಬೇಡಿಕೆ ಸಲ್ಲಿಸಿದ್ದು, ಸೋಮವಾರ 1,150 ವಯಲ್ಸ್ ಪೂರೈಕೆಯಾಗಿದೆ. ಕೇಂದ್ರ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಂಡು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಇನ್ನೂ 5,000 ವಯಲ್ಸ್ ಆ್ಯಂಫೊಟೆರಿಸಿನ್‌ ಚುಚ್ಚುಮದ್ದು ತುರ್ತಾಗಿ  ಒದಗಿಸುವಂತೆ ಕೇಂದ್ರ ರಾಸಾಯನಿಕ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಸರ್ಕಾರವು ಸೋಮವಾರ 9,000 ವಯಲ್ಸ್ ಆ್ಯಂಫೊಟೆರಿಸಿನ್‌ ಚುಚ್ಚುಮದ್ದು ಆಮದು ಮಾಡಿಕೊಂಡಿದೆ. ಅದರಲ್ಲಿ 1,030 ವಯಲ್ಸ್‌ಗಳನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿರುವುದಾಗಿ ಸದಾನಂದಗೌಡ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಈ ಚುಚ್ಚುಮದ್ದುಗಳು ರಾಜ್ಯದ ಆರೋಗ್ಯ ಇಲಾಖೆಯನ್ನು ತಲುಪುವ ಸಾಧ್ಯತೆಯಿದೆ.

ಇದನ್ನೂ ಓದಿ: 

30 ಜಿಲ್ಲಾ ಕೇಂದ್ರಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇರಿದಂತೆ 38 ಸ್ಥಳಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆ್ಯಂಫೊಟೆರಿಸಿನ್‌ ಹೊರತಾಗಿ ಇತರ ಔಷಧಿಗಳನ್ನೂ ಬಳಸಿ ಈ ಸೋಂಕನ್ನು ಗುಣಪಡಿಸಲು ಸಾಧ್ಯವಿದೆ. ಪರ್ಯಾಯ ಔಷಧಿಗಳನ್ನು ಗುರುತಿಸಿ, ಖರೀದಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಸುಧಾಕರ್‌ ತಿಳಿಸಿದರು.

ಖಾಸಗಿ ಖರೀದಿಗೆ ಲಭ್ಯವಿಲ್ಲ: ಆ್ಯಂಫೊಟೆರಿಸಿನ್‌ ಚುಚ್ಚುಮದ್ದು ಸದ್ಯಕ್ಕೆ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ತೀವ್ರವಾದ ಕೊರತೆ ಇರುವುದರಿಂದ ಕೇಂದ್ರ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಂಡ ಚುಚ್ಚುಮದ್ದುಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಕೇಂದ್ರದಿಂದ ನೇರವಾಗಿ ರಾಜ್ಯಗಳ ಆರೋಗ್ಯ ಇಲಾಖೆಗೆ ತಲುಪುವ ಚುಚ್ಚುಮದ್ದನ್ನು, ಕಪ್ಪು ಶಿಲೀಂಧ್ರ ಸೋಂಕಿತ ರೋಗಿಗಳು ಇರುವ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ’ ಎಂದು ಔಷಧ ನಿಯಂತ್ರಣ ಇಲಾಖೆಯ ಮೂಲಗಳು ತಿಳಿಸಿವೆ.

ಸೋಂಕಿಗೆ ಕಾರಣಗಳೇನು?
‘ಅತಿಯಾದ ಪ್ರಮಾಣದ ಸ್ಟೆರಾಯ್ಡ್‌ ಬಳಕೆ, ಆಮ್ಲಜನಕ ಪೂರೈಕೆ ಯಂತ್ರದ ಹ್ಯೂಮಿಡಿಫೈರ್‌ ಸಾಧನದಲ್ಲಿ ಡಿಸ್ಟಿಲ್ಡ್‌ ನೀರಿನ ಬದಲಿಗೆ ನಲ್ಲಿ ನೀರನ್ನು ಬಳಸುತ್ತಿರುವುದು, ಆಮ್ಲಜನಕ ಪೂರೈಕೆ ಯಂತ್ರದ ಮುಖ ಕವಚ, ಮಾಸ್ಕ್‌ ಮತ್ತು ಕೊಳವೆಗಳನ್ನು ಸ್ವಚ್ಛಗೊಳಿಸದೆ ಬೇರೆ ರೋಗಿಗಳಿಗೆ ಬಳಸುವುದು, ಒಂದು ಮಾಸ್ಕ್‌ ಅನ್ನು ಶುಚಿಗೊಳಿಸದೆ ನಿರಂತರವಾಗಿ ಬಳಸುವುದು ಹಾಗೂ ಅತಿಯಾದ ಹೈ ಫ್ಲೋ ಆಮ್ಲಜನಕದ ಬಳಕೆ ಕೋವಿಡ್‌ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚಲು ಕಾರಣ’ ಎಂದು ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ಸಮಿತಿಯು ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: 

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಚಿವ ಡಾ.ಕೆ. ಸುಧಾಕರ್‌, ‘ಈ ಎಲ್ಲ ಕಾರಣಗಳ ಜತೆಗೆ ಕೋವಿಡ್‌ ರೋಗಿಗಳ ಸಂಬಂಧಿಗಳು ಸೇರಿದಂತೆ ಹೊರಗಿನ ವ್ಯಕ್ತಿಗಳು ವಾರ್ಡ್‌, ತೀವ್ರ ನಿಗಾ ಘಟಕಗಳಿಗೆ ಭೇಟಿ ನೀಡುತ್ತಿರುವುದರಿಂದಲೂ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಈ ಕುರಿತು ಅಧ್ಯಯನ ಮುಂದುವರಿದಿದೆ’ ಎಂದರು.

ಆಸ್ಪತ್ರೆಯ ವೈದ್ಯರು ಮತ್ತು ನಿಗದಿತ ಸಿಬ್ಬಂದಿಯ ಹೊರತಾಗಿ ಇತರರು ವಾರ್ಡ್‌ಗಳಿಗೆ ಪ್ರವೇಶಿಸುವುದನ್ನು ತಡೆಯಲು ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಕೋವಿಡ್‌ ರೋಗಿಗಳ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳಿಗೆ ಸಿಸಿಟಿವಿ ಮೂಲಕವೇ ರೋಗಿಗಳನ್ನು ನೋಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು