ಸೋಮವಾರ, ಜನವರಿ 25, 2021
20 °C
ಶೇ 80 ರಷ್ಟು ಗೆಲುವಿನ ಗುರಿ * ಪಂಚ ರತ್ನ ಸಮಿತಿ’ ಮತ್ತು ‘ಪಂಚ ಸೂತ್ರ ಯೋಜನೆ’

ಗ್ರಾ.ಪಂ ಚುನಾವಣೆ: ಬಿಜೆಪಿ ಹೊಸ ಕಾರ್ಯತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಹೊಸ ಕಾರ್ಯತಂತ್ರ ರೂಪಿಸಲು ಬಿಜೆಪಿ ಮುಂದಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮಸ್ವರಾಜ್ಯ ಸಮಾವೇಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಚುನಾವಣಾ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

ಚುನಾವಣಾ ಕಾರ್ಯತಂತ್ರದ ಭಾಗವಾಗಿ ‘ಪಂಚರತ್ನ ಸಮಿತಿ’ ಮತ್ತು ‘ಪಂಚಸೂತ್ರ ಯೋಜನೆ’ ಅಳವಡಿಸಿಕೊಳ್ಳಲಿದೆ ಎಂದರು.

‘ಗ್ರಾಮ ಪಂಚಾಯತ್‌ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಪಂಚಸೂತ್ರದ ಅಡಿಯಲ್ಲಿ ವಾರ್‌ರೂಂಗಳು ಕಾರ್ಯನಿರ್ವಹಿಸಲಿವೆ. ಇದಲ್ಲದೆ ಕುಟುಂಬ ಮಿಲನ ಕಾರ್ಯಕ್ರಮವನ್ನೂ ಅನುಷ್ಠಾನಗೊಳಿಸಲಾಗಿದೆ. ಇವೆಲ್ಲವುಗಳ ನೆರವಿನಿಂದ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಶೇ 80ಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಅಧಿಕಾರ ಪಡೆಯುವುದು ಶತಸಿದ್ಧ’ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರೂ ನಾಯಕತ್ವ ವಹಿಸುವಂತಾಗಬೇಕು. ಇದಕ್ಕಾಗಿ ಬಿಜೆಪಿ ವತಿಯಿಂದ ಗ್ರಾಮ ಸ್ವರಾಜ್‌ ಸಮಾವೇಶಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ಪ್ರತಿ ಜಿಲ್ಲೆಗೆ ಎರಡು ಸಮಾವೇಶಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕೋವಿಡ್‌ ಕಾರಣ ನಿಯಮ ಉಲ್ಲಂಘನೆ ಆಗದಂತೆ ಮತ್ತು ಕಾನೂನಿಗೆ ಧಕ್ಕೆ ಆಗದ ರೀತಿಯಲ್ಲಿ ಈ ಸಮಾವೇಶಗಳನ್ನು ಏರ್ಪಡಿಸಲಾಗುವುದು. ಇದೇ ತಿಂಗಳ 27 ರಂದು ಆರಂಭಗೊಂಡು ಡಿ.3 ರವರೆಗೆ ಸಮಾವೇಶಗಳು ನಡೆಯಲಿವೆ ಎಂದು ಹೇಳಿದರು.

6 ತಂಡಗಳ ರಚನೆ: ಗ್ರಾಮ ಪಂಚಾಯತ್‌ ಚುನಾವಣಾ ಸಿದ್ಧತೆ ದೃಷ್ಟಿಯಿಂದ ರಾಜ್ಯ ಪದಾಧಿಕಾರಿಗಳ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ನಳಿನ್‌ ಕುಮಾರ್‌ ಕಟೀಲ್‌, ಗೋವಿಂದ ಕಾರಜೋಳ, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಮತ್ತು ಆರ್‌.ಅಶೋಕ್ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯ ನಿರ್ವಹಿಸಲಿವೆ. ಸಂಸದರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ತಂಡದ ಜತೆಗಿರುತ್ತಾರೆ.

ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ
ಸಮಾವೇಶ ಉದ್ಘಾಟಿಸಿದ ನಳಿನ್‌ ಕುಮಾರ್‌, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಜಾತಿಯವರಿಗೆ ಪ್ರಾತಿನಿಧ್ಯ ನೀಡಿ ಸ್ಪರ್ಧಿಸಲು ಆದ್ಯತೆ ನೀಡಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಚಾಯತ್‌ಗಳಿಗೆ ಗರಿಷ್ಠ ಅನುದಾನ ನೀಡಿದ್ದಾರೆ. ಇದು ಪಕ್ಷದ ಅಭೂತಪೂರ್ವ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ, ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು