ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾ ನೋಟು ಹಾವಳಿ- ಸಿಗದ ಆರೋಪಿಗಳ ಸುಳಿವು l ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ

Last Updated 1 ಅಕ್ಟೋಬರ್ 2022, 3:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವು ಬ್ಯಾಂಕ್‌ಗಳಲ್ಲಿ ಜಮೆ ಆಗುತ್ತಿರುವ ನೋಟುಗಳಲ್ಲಿ, ಖೋಟಾ ನೋಟುಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಬ್ಯಾಂಕ್ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದ್ದು, ಖೋಟಾ ನೋಟು ಸಮೇತ ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗುತ್ತಿಲ್ಲ.

ನಗರದ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಾದೇಶಿಕ ಕಚೇರಿಯ ಚೆಸ್ಟ್ ವಿಭಾಗಕ್ಕೆ ರಾಜ್ಯದ ಹಲವು ಬ್ಯಾಂಕ್‌ಗಳ ಚೆಸ್ಟ್‌ಗಳಿಂದ (ಹಣ ನಿರ್ವಹಣೆ ವಿಭಾಗ) ಹಣ ಜಮೆ ಆಗುತ್ತಿದೆ. ಹೀಗೆ, ಜಮೆ ಆಗುವ ನೋಟುಗಳಲ್ಲಿ ಖೋಟಾ ನೋಟುಗಳು ಸಿಗುತ್ತಿವೆ. ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣಗಳೂ ದಾಖಲಾಗುತ್ತಿವೆ.

‘ಇತ್ತೀಚೆಗೆ ನಮ್ಮ ಬ್ಯಾಂಕ್‌ನಲ್ಲಿ ಸಂಗ್ರಹವಾಗಿದ್ದ ನೋಟುಗಳ ಪೈಕಿ ₹ 500 ಮುಖಬೆಲೆಯ 8 ಖೋಟಾ ನೋಟುಗಳು ಪತ್ತೆಯಾಗಿವೆ. ಇಂಥ ನೋಟುಗಳನ್ನು ನೀಡಿರುವವರನ್ನು ಪತ್ತೆ ಮಾಡಿ’ ಎಂದು ಕರ್ನಾಟಕ ಬ್ಯಾಂಕ್ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು, ‘ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಸಂಗ್ರಹವಾಗುವ ಹಣವನ್ನು ಚೆಸ್ಟ್‌ಗಳ ಮೂಲಕ ಆರ್‌ಬಿಐ ಶಾಖೆಗೆ ತರಲಾಗುತ್ತಿದೆ. ಜಮೆಗೂ ಮುನ್ನ ಪರಿಶೀಲನೆ ನಡೆಸುವಾಗ ಖೋಟಾ ನೋಟುಗಳು ಸಿಗುತ್ತಿವೆ. ಅಂಥ ಖೋಟಾ ನೋಟುಗಳ ಸಮೇತ ಅಧಿಕಾರಿಗಳು ದೂರು ನೀಡುತ್ತಿದ್ದಾರೆ’ ಎಂದರು.

‘ಖೋಟಾ ನೋಟುಗಳ ತನಿಖೆಗೆಂದು ಹಲಸೂರು ಗೇಟ್ ಠಾಣೆಯನ್ನು ನೋಡಲ್ ಠಾಣೆಯನ್ನಾಗಿ ಮಾಡಲಾಗಿದೆ. ಹೀಗಾಗಿ, ತಿಂಗಳಿಗೆ 5 ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಖೋಟಾ ನೋಟುಗಳು ಹೇಗೆ ಬಂದವು? ಯಾರು ಕೊಟ್ಟರು? ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ. ಕೇವಲ ಖೋಟಾ ನೋಟು ಇಟ್ಟುಕೊಂಡು, ಆರೋಪಿಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT