ಸೋಮವಾರ, ಮಾರ್ಚ್ 27, 2023
22 °C
ನಿರ್ಲಜ್ಜ ರಾಜಕಾರಣ: ಸಿ.ಎಚ್ ಹನುಮಂತರಾಯ

‘ಬಾಂಬೆ ರಿಟರ್ನ್‌ ಡೇಸ್‌’ ಪುಸ್ತಕ ಬಿಡುಗಡೆ: 21 ತಿಂಗಳ ರಾಜಕೀಯ ಘಟನಾವಳಿ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಂದಿನ ಬಹುತೇಕ ರಾಜಕೀಯ ನಾಯಕರು ಅನೂಹ್ಯ ನಿರ್ಲಜ್ಜತನದಿಂದ ಬಳಲುತ್ತಿದ್ದಾರೆ. ಎಂತಹ ನಗೆಪಾಟಲಿನ ಮಟ್ಟಕ್ಕೂ ಹೋಗಲು ಹಿಂಜರಿಯುವುದಿಲ್ಲ ಎನ್ನುವಂತಾಗಿದೆ. ಇದು ನಮ್ಮ ಸಮಕಾಲೀನ ಬದುಕಿನ ದುರಂತ’ ಎಂದು ಹಿರಿಯ ವಕೀಲ ಮತ್ತು ಚಿಂತಕ ಸಿ.ಎಚ್ ಹನುಮಂತರಾಯ ವಿಷಾದಿಸಿದರು.

ಪತ್ರಕರ್ತ ವಿ. ವೀರಭದ್ರಪ್ಪ ಬಿಸ್ಲಳ್ಳಿ ರಚಿಸಿರುವ, ‘ಬಾಂಬೆ ರಿಟರ್ನ್ ಡೇಸ್’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ರಾಜ್ಯ ರಾಜಕೀಯದ 21 ತಿಂಗಳ ಘಟನಾವಳಿಗಳನ್ನು ಲೇಖಕರು ಇದರಲ್ಲಿ ಸಮರ್ಥವಾಗಿ ಅನಾವರಣಗೊಳಿಸಿದ್ದಾರೆ. ಕೃತಿಯಲ್ಲಿ ನವಿರಾದ ಭಾಷೆಯಿದೆ, ಎಲ್ಲಿಯೂ ಅತಿರೇಕವಿಲ್ಲ. ಎಲ್ಲ ಘಟನಾವಳಿಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಣೆ ಮಾಡಿರುವುದು ಆಪ್ತವೆನಿಸುತ್ತದೆ’ ಎಂದರು.

‘ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಅವರನ್ನು ಇಸ್ರೇಲ್ ಜನತೆ ಮೊತ್ತಮೊದಲ ರಾಷ್ಟ್ರಾಧ್ಯಕ್ಷರಾಗುವಂತೆ ಒಕ್ಕೊರಲಿನಿಂದ ಮನವಿ ಮಾಡಿದರು. ಆಗ ಐನ್‌ಸ್ಟೀನ್‌ ಅಯ್ಯೋ ಹುಚ್ಚಪ್ಪಗಳಾ, ರಾಜಕಾರಣ ಎಂಬುದು ಮನುಷ್ಯರ ಮಧ್ಯದ ವ್ಯವಹಾರಗಳಿಗೆ ಸಂಬಂಧಿಸಿದ್ದು. ನನಗೆ ಅದು ಅರ್ಥವಾಗದ್ದು ಎಂದಿದ್ದರು. ಐನ್‌ಸ್ಟೀನ್‌ ಅವರಿಗೆ ಅವರಿಗೆ ತಮ್ಮ ಮಿತಿಯ ಅರಿವಿತ್ತು. ಆದರೆ, ಭರತಖಂಡದ ಬಹುಸಂಖ್ಯಾತ ರಾಜಕಾರಣಿಗಳಲ್ಲಿ ತಮ್ಮ ಮಿತಿಗಳ ಅರಿವಿಲ್ಲದಿರುವುದು ನಮ್ಮ ದೌರ್ಭಾಗ್ಯ’ ಎಂದು ಹನುಮಂತರಾಯ ಹೇಳಿದರು.

ಲೇಖಕ ವಿ.ವೀರಭದ್ರಪ್ಪ ಬಿಸ್ಲಳ್ಳಿ, ‘ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ ಎಂಬ ಕಾರಣಕ್ಕಾಗಿ ಈ ಕೃತಿ ಬಿಡುಗಡೆ ಮಾಡುತ್ತಿಲ್ಲ. ರಾಜಕೀಯ ವ್ಯವಸ್ಥೆ ಎಷ್ಟೊಂದು ಕಲುಷಿತಗೊಂಡಿದೆ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಲು ಕೃತಿ ರಚಿಸಿದ್ದೇನೆ’ ಎಂದರು. ಪತ್ರಕರ್ತ ಮತ್ತು ಲೇಖಕ ಜಯಪ್ರಕಾಶ್ ನಾರಾಯಣ್ ಪುಸ್ತಕ ಕುರಿತು ಮಾತನಾಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು