ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ಪುಂಡಾಟಿಕೆ ನಿಯಂತ್ರಣಕ್ಕೆ ಬೊಮ್ಮಾಯಿ ಆಗ್ರಹ

ಸಿ.ಎಂ ಸೂಚನೆ: ಮಹಾರಾಷ್ಟ್ರ ಸಿಎಸ್‌ ಜತೆ ರಾಜ್ಯದ ಎಸಿಎಸ್‌ ಚರ್ಚೆ
Last Updated 26 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಜ್ಯ ಗಡಿ ವಿವಾದ ಮತ್ತು ಭಾಷೆಯ ಕಾರಣದಿಂದ ಕನ್ನಡಿಗರ ಮೇಲೆ ಪುಂಡಾಟಿಕೆ ನಡೆಸುವವರನ್ನು ನಿಯಂತ್ರಿಸುವಂತೆ ರಾಜ್ಯ ಸರ್ಕಾರವು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಪಡಿಸಿದೆ. ಈ ಸಂಬಂಧ ಉಭಯ ರಾಜ್ಯಗಳ ಅಧಿಕಾರಿಗಳ ಹಂತದಲ್ಲಿ ಮಾತುಕತೆಗಳು ಆರಂಭವಾಗಿವೆ.

ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದಂತೆಯೇ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ಬಸ್‌ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯ ಬಳಿಕ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಿರುವ ರಾಜ್ಯದ ಅಧಿಕಾರಿಗಳು, ಎರಡೂ ರಾಜ್ಯಗಳ ನಡುವೆ ಸಂಘರ್ಷದ ಸ್ಥಿತಿ ಉದ್ಭವಿಸಲು ಕಾರಣವಾಗುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಹಿರಿಯ ಅಧಿಕಾರಿಗಳಿಗೆ ಶನಿವಾರ ಬೆಳಿಗ್ಗೆ ಸೂಚಿಸಿದ್ದರು. ಸಾಮರಸ್ಯ ಕದಡುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಹಾಗೂ ಕರ್ನಾಟಕದ ಬಸ್‌, ಜನರು ಮತ್ತು ಅವರ ಆಸ್ತಿಗಳಿಗೆ ರಕ್ಷಣೆ ನೀಡುವಂತೆ ಅಲ್ಲಿನ ಅಧಿಕಾರಿಗಳಿಗೆ ಆಗ್ರಹಿಸಲು ಸೂಚಿಸಿದ್ದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮತ್ತು ರಾಜ್ಯದಿಂದ ಅಲ್ಲಿಗೆ ಸಂಚರಿಸುವ ವಾಹನಗಳಿಗೆ ತೊಂದರೆ ಆಗದಂತೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ’ ಎಂದರು.

ಬಸ್‌ ಮೇಲೆ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕರು ಮತ್ತು ಮಹಾರಾಷ್ಟ್ರದಿಂದ ಬರುವ ವಾಹನಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವ ಭರವಸೆಯನ್ನು ರಾಜ್ಯ ಸರ್ಕಾರವು ನೀಡಿದೆ ಎಂದು ತಿಳಿಸಿದರು.

ಪೊಲೀಸ್‌ ಅಧಿಕಾರಿಗಳಸಭೆ: ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಎರಡೂ ರಾಜ್ಯಗಳ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯೂ ಗಡಿ ಭಾಗದಲ್ಲೇ ನಡೆದಿದೆ. ಕೊಲ್ಹಾಪುರದಲ್ಲಿ ನಡೆದ ಸಭೆಯಲ್ಲಿ ಅಲ್ಲಿನ ಐಜಿಪಿ, ಪೊಲೀಸ್‌ ಕಮಿಷನರ್‌ ಮತ್ತು ರಾಜ್ಯದ ಉತ್ತರ ವಲಯದ (ಬೆಳಗಾವಿ) ಐಜಿಪಿ ಹಾಗೂ ಬೆಳಗಾವಿ ನಗರ ಪೊಲೀಸ್‌ ಕಮಿಷನರ್‌ ಪಾಲ್ಗೊಂಡಿದ್ದರು ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಎರಡೂ ಕಡೆಯಿಂದಲೂ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವ ತೀರ್ಮಾನವನ್ನು ಅಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕರ್ನಾಟಕದ ಬಸ್‌ಗೆ ಕಲ್ಲೆಸೆತ

ಕಾಗವಾಡ (ಬೆಳಗಾವಿ ಜಿಲ್ಲೆ): ಪುಣೆಯಿಂದ ಅಥಣಿಗೆ ಶುಕ್ರವಾರ ರಾತ್ರಿ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರದ ಗಡಿಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ಸಿನ ಮುಂಭಾಗದ ಗಾಜು ಹಾಗೂ ಎರಡು ಕಿಟಕಿ ಒಡೆದಿವೆ.

ಬಸ್ ಸಂಚರಿಸುವ ವೇಳೆಯೇ ಕತ್ತಲಲ್ಲಿ ರಸ್ತೆಗೆ ಅಡ್ಡಬಂದ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾದರು. ಬಸ್ಸಿನ ಚಾಲಕ ಕುಳಿತಿದ್ದ ಭಾಗದಲ್ಲಿ ಗಾಜು ಒಡೆಯಿತು. ಆದರೂ ಚಾಲಕ ವಾಹನ ನಿಲ್ಲಿಸದೇ ಸುರಕ್ಷಿತವಾಗಿ ದಾಟಿಸಿದರು. ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲ ಬಸ್ ಸಂಚಾರವನ್ನು ಶನಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಬೆಳಗಾವಿ ಮಾರ್ಗದಲ್ಲಿ ಶುಕ್ರವಾರ ನಿಲ್ಲಿಸಿದ್ದ ಬಸ್‌ ಸಂಚಾರ ಪುನಃ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT