ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘108 ಆಂಬುಲೆನ್ಸ್‌’ ಸೇವೆಗೆ ಗಡಿ ನಿರ್ಬಂಧ ತೆರವು

ನೂತನ ತಂತ್ರಜ್ಞಾನಗಳ ಅಳವಡಿಕೆಗೆ ಸರ್ಕಾರ ನಿರ್ಧಾರ
Last Updated 4 ಸೆಪ್ಟೆಂಬರ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಆರೋಗ್ಯ ಕವಚ 108’ ಆಂಬುಲೆನ್ಸ್ ಸೇವೆಗೆ ಗಡಿ ಹಾಗೂ ಕಿಲೋಮೀಟರ್ ನಿರ್ಬಂಧವನ್ನು ತೆರವುಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

2008ರಲ್ಲಿ ಜಿವಿಕೆ ಇಎಂಆರ್‌ಐ ಸಂಸ್ಥೆಯು ಆರೋಗ್ಯ ಇಲಾಖೆಯ ಜತೆಗೆ ಮಾಡಿಕೊಂಡಿದ್ದ ಒಪ್ಪಂದ 2018ರಲ್ಲಿಯೇ ಅಂತ್ಯವಾಗಿದೆ. ಬಳಿಕ ಟೆಂಡರ್ ದಾಖಲೆ ಸಿದ್ಧಪಡಿಸಲು ಉನ್ನತಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಈಗ ಆರೋಗ್ಯ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂದಿನ ಸೋಮವಾರ ಟೆಂಡರ್ ಆಹ್ವಾನಿಸಲಾಗುತ್ತದೆ. 7 ವರ್ಷಗಳ ಅವಧಿಗೆ ಈ ಟೆಂಡರ್ ಕರೆಯಲಾಗುತ್ತಿದ್ದು, ಅಂದಾಜು ₹ 1,850 ಕೋಟಿ ವೆಚ್ಚವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ 711 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಆ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಆರೋಗ್ಯ ಕವಚ’ವು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಮಗ್ರ ತುರ್ತು ಚಿಕಿತ್ಸೆ ಸೇವೆಯನ್ನು ನೀಡುವ ಸಲುವಾಗಿ ಶುಲ್ಕ ರಹಿತ ಸಹಾಯವಾಣಿ 108ರ ಮೂಲಕ24 ಗಂಟೆಗಳು ಕಾರ್ಯನಿರ್ವಹಿಸುತ್ತಿದೆ. ಆಂಬುಲೆನ್ಸ್‌ಗಳು ನಗರ ‍ಪ್ರದೇಶಗಳಲ್ಲಿ 20 ನಿಮಿಷಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 30 ನಿಮಿಷಗಳ ಅವಧಿಯಲ್ಲಿ ನಿಗದಿತ ಸ್ಥಳಗಳನ್ನು ತಲುಪಬೇಕೆಂಬ ನಿಯಮವಿದೆ. ಆದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಇದು ಕಷ್ಟ ಎಂಬುದು ಚಾಲಕರ ಅಳಲು. ಚಾಲಕರ, ಪ್ಯಾರಾಮೆಡಿಕಲ್ ಸಿಬ್ಬಂದಿಯ ಸಮಸ್ಯೆಗೆ ಕೂಡ ಪರಿಹಾರ ಒದಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ದೂರದ ಮಿತಿಯಿಲ್ಲ: ‘ನೂತನ ನಿಯಮದ ಪ್ರಕಾರ ಎಷ್ಟೇ ದೂರವಾದರೂ ರೋಗಿ ತೆರಳಲು ಇಚ್ಛಿಸಿದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಸದ್ಯ ಕಿ.ಮೀ ವ್ಯಾಪ್ತಿಯ ಮಿತಿಯಿದೆ. ಅದೇ ರೀತಿ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತೆರಳುವಾಗ ನಿಗದಿತ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆಂಬುಲೆನ್ಸ್ ಸೇವೆಯನ್ನೇ ಪಡೆಯಬೇಕಿತ್ತು. ನೂತನ ಟೆಂಡರ್ ಬಳಿಕ ಈ ನಿರ್ಬಂಧಗಳು ಇರುವುದಿಲ್ಲ’ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಡಾ. ಸ್ವತಂತ್ರಕುಮಾರ್ ಬಣಕಾರ್ ತಿಳಿಸಿದರು.

‘ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ರೋಗಿಗಳನ್ನು ದೂರವಾಣಿ ಕರೆಯ ಮೂಲಕ ಗುರುತಿಸುವುದು, ಜಿಪಿಎಸ್ ತಂತ್ರಜ್ಞಾನ, ಮೊಬೈಲ್ ಆ್ಯಪ್ ಅಭಿವೃದ್ಧಿ ಸೇರಿದಂತೆ ಹಲವು ವೈಶಿಷ್ಟ್ಯತೆ ಇರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT