ಶುಕ್ರವಾರ, ಆಗಸ್ಟ್ 12, 2022
28 °C
ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ

ಕೃಷಿ, ಕೃಷಿಯೇತರ ಬಳಕೆಗೆ ₹39,300 ಕೋಟಿ ಸಾಲ ಸೌಲಭ್ಯ: ಸಿಎಂ ಬಿ.ಎಸ್‌ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡುವ ಒಟ್ಟು ₹ 39,300 ಕೋಟಿ ಸಾಲದ ಸೌಲಭ್ಯ ನೀಡುವ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.

ರಾಜ್ಯ ಸಹಕಾರ ಸಂಸ್ಥೆಗಳ ಮೂಲಕ ಈ ಸಾಲ ಸೌಲಭ್ಯ ನೀಡಲಾಗುತ್ತದೆ. ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಕೇಂದ್ರ ಸರ್ಕಾರ ನೆರವಿನೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಕೋವಿಡ್‌–19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಇಡೀ ದೇಶದಲ್ಲಿ ಮೊದಲು ಮುಂದಾದ ರಾಜ್ಯ ಕರ್ನಾಟಕ. ಲಾಕ್‌ಡೌನ್ ಪರಿಣಾಮವಾಗಿ, ಎಲ್ಲ ವರ್ಗದ ಜನರ ಸಂಕಷ್ಟವನ್ನು ಎದುರಿಸುತ್ತಿದ್ದು, ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ₹ 2,272 ಕೋಟಿ ಪ್ಯಾಕೇಜ್‌ ಅನ್ನು ಮೂರು ಹಂತದಲ್ಲಿ ಅನುಷ್ಠಾನ ಮಾಡಿತು ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಕೋವಿಡ್‌–19 ಪರಿಹಾರ ನಿಧಿಗೆ ₹ 53 ಕೋಟಿಗಳ ದೇಣಿಗೆಯನ್ನು ನೀಡುವ ಮೂಲಕ ಸಹಕಾರ ಸಂಸ್ಥೆಗಳು, ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜತೆ ಕೈಜೋಡಿಸಿದವು ಎಂದು ಹೇಳಿದರು.

ರಾಜ್ಯದಲ್ಲಿ 42,542 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ತಲಾ ₹ 3,000 ದಂತೆ ಒಟ್ಟು ₹ 12.75 ಕೋಟಿ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು ಸ್ಪೆಷಲ್‌ ಲಿಕ್ವಿಡಿಟಿ ಫೆಸಿಲಿಟಿ ಅಡಿಯಲ್ಲಿ ₹1,700 ಕೋಟಿ ನಬಾರ್ಡ್‌ ಮೂಲಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ ನೀಡಲಾಗಿದೆ.

ಬೆಳೆ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಡಿ 2020–21ನೇ ಸಾಲಿನಲ್ಲಿ ಇಲ್ಲಿಯವರೆಗೆ ₹ 11.88 ಲಕ್ಷ ರೈತರಿಗೆ ₹ 7,777.41 ಕೋಟಿ ಸಾಲ ವಿತರಿಸಲಾಗಿದೆ. ಬಡ್ಡಿ ಸಹಾಯ ಧನಕ್ಕಾಗಿ ₹ 992.50 ಕೋಟಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸರ್ಕಾರದಿಂದ ₹ 496.24 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಚೆಕ್‌ ವಿತರಿಸಲಾಯಿತು. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು