ಶನಿವಾರ, ಆಗಸ್ಟ್ 13, 2022
25 °C
ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ ಅನುಷ್ಠಾನ: ಮುಖ್ಯಮಂತ್ರಿ

ಪ್ರವಾಹ ಭೀತಿ: 20 ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೊ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಿಲ್ಲಾ ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದರು.

ರಾಜ್ಯದ ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಆರಂಭವಾಗುತ್ತಿರುವುದರಿಂದ ಈ ಭಾಗಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು 20 ಜಿಲ್ಲೆಗಳ ಜಿಲ್ಲಾಧೀಕಾರಿಗಳ ಜೊತೆ ಮುಖ್ಯಮಂತ್ರಿ ಶನಿವಾರ ವಿಡಿಯೊ ಸಂವಾದ ನಡೆಸಿದರು.

ರಾಜ್ಯದಲ್ಲಿ 1,710 ಪ್ರವಾಹ ಪೀಡಿತ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದ ವಿಪತ್ತು ನಿರ್ವಹಣೆ ಕ್ರಿಯಾ ಯೋಜನೆ ಕೂಡಾ ಸಿದ್ಧಪಡಿಸಲಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ತರಬೇತಿ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಜನ, ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೋವಿಡ್ ಸೋಂಕಿನ ಕುರಿತು ಕೂಡಾ ಎಚ್ಚರಿಕೆ ವಹಿಸಬೇಕು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಮತ್ತಿತರ ಸಂಪರ್ಕ ಸಾಧನಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡು, ತುರ್ತು ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಖರೀದಿಸಬೇಕು. ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಅವರಿಗೆ ಅಗತ್ಯ ಮೂಲಸೌಕರ್ಯಗಳ ಕಾಳಜಿ ಕೇಂದ್ರಗಳು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಲಹೆ ನೀಡಿದರು.

‘ಪ್ರವಾಹ ನಿರ್ವಹಣೆಗಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರ ಸಹಕಾರ ಪಡೆದುಕೊಳ್ಳಬೇಕು.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಹದ ಪರಿಣಾಮ ಅತ್ಯಂತ ಕಡಿಮೆ ಆಗುವಂತೆ ಕಾರ್ಯನಿರ್ವಹಿಸಬೇಕು. ಪ್ರವಾಹ ಕಾರಣಕ್ಕೆ ಸ್ಥಳಾಂತರಿಸಿದ ಕೆಲವು ಗ್ರಾಮಗಳಿಗೆ ಗ್ರಾಮಸ್ಥರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಸಲಹೆ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯ ಮಟ್ಟದಲ್ಲಿ  ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಮತ್ತು ಅಭಿವೃದ್ಧಿ ಆಯುಕ್ತರು ಅಧ್ಯಕ್ಷತೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಹವಾಮಾನ ಪರಿಸ್ಥಿತಿ ಅವಲೋಕನ ಸಭೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ– 2021 ಸಿದ್ದಪಡಿಸಲಾಗಿದೆ’ ಎಂದರು.

‘ಪ್ರವಾಹ ಪರಿಸ್ಥಿತಿಗಳಲ್ಲಿ ಜಲಾಶಯಗಳ ಹರಿವು ನಿರ್ವಹಣೆಗೆ ಬೇಕಾದ ಮಾಹಿತಿ ವಿನಿಮಯಕ್ಕೆ ಅಂತರರಾಜ್ಯ ಸಮನ್ವಯತೆ ಸಾಧಿಸಲಾಗಿದೆ. ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರೊಂದಿಗೂ ಸಭೆ ನಡೆಸಲಾಗಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಕಾರ್ಯಪಡೆ, ಕಾರ್ಯಾಚರಣೆ ತಂಡ ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್‌  ರಚಿಸಲಾಗಿದೆ’ ಎಂದರು.

‘ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಯನ್ನು ಗುರುತಿಸಲಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಪ್ರವಾಹ ಮುನ್ಸೂಚನೆ ಕೋಶ ಸ್ಥಾಪಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಪರಿಕರಗಳ ಕ್ರೋಢೀಕರಣ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ. ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ರಾಯಚೂರು, ಕೊಡಗು, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡ (ಎನ್‌ಡಿಆರ್‌ಎಫ್‌)  ನಿಯೋಜಿಸಲಾಗಿದೆ’: ಎಂದೂ ತಿಳಿಸಿದರು.

‘ರಾಜ್ಯದಿಂದ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ರಾಜ್ಯ ವಿಪತ್ತು ಸ್ಪಂದನಾ ತಂಡ (ಎಸ್‌ಡಿಆರ್‌ಎಫ್‌) ತಂಡನು ಬಲಪಡಿಸಿ, ತುರ್ತು ಪರಿಹಾರಕ್ಕೆ ಬೇಕಾದ ಪರಿಕರ ಸಾಮಾಗ್ರಿಗಳೊಂದಿಗೆ ಸನ್ನದ್ದಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ವಿಪತ್ತು ನಿರ್ವಹಣೆಗೆ ಸುಮಾರು ₹ 1000 ಕೋಟಿ ಲಭ್ಯವಿದೆ’ ಎಂದೂ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು