ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

union budget 2021: ಬಜೆಟ್ ಪ್ರತಿಕ್ರಿಯೆಗಳು

Last Updated 1 ಫೆಬ್ರುವರಿ 2021, 18:38 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಬಜೆಟ್‌–2021 ಕುರಿತು ಯುವ ಜನರು ಪರ ಮತ್ತು ವಿರೋಧದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ವಾಹನ ಚಾಲಕರು ಬೀದಿಗೆ

ದೇಶದಲ್ಲಿ ಈಗಾಗಲೇ ತೈಲ ದರ ಗಗನಕ್ಕೇರಿದೆ. ಬಜೆಟ್‌ನಲ್ಲಿ ಪೆಟ್ರೋಲ್–ಡೀಸೆಲ್ ದರ ಇಳಿಸುವ ನಿರೀಕ್ಷೆಯೂ ಸುಳ್ಳಾಯಿತು. ಕೊರೊನಾದಿಂದ ನಲುಗಿದ್ದ ವಾಹನ ಚಾಲಕರನ್ನು ಕೇಂದ್ರ ಸರ್ಕಾರ ಮತ್ತೆ ಸಂಕಷ್ಟಕ್ಕೆ ದೂಡಿದೆ. ದರ ಏರಿಕೆಯಿಂದ ಲಾಭ ದೂರದ ಮಾತು. ಚಾಲಕರ ಜೀವನ ಬೀದಿಪಾಲು.

ಭರತ್, ಚಾಲಕ, ಯಶವಂತಪುರ

––

ಉದ್ಯೋಗ ಸೃಷ್ಟಿ ಎಲ್ಲಿ?

ಕೊರೊನಾದಿಂದ ದೇಶದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ಅಭಿವೃದ್ಧಿ ಯೋಜನೆಗಳಿಗಾಗಿ ಕೋಟಿಗಟ್ಟಲೆ ಹಣ ಘೋಷಿಸುವ ಬದಲು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವ ಕಡೆಗೆ ಹೆಚ್ಚು ಗಮನ ನೀಡಬೇಕಿತ್ತು.

ಚಂದು, ವಿದ್ಯಾರ್ಥಿ

–––

ರಾಜಕೀಯ ದೃಷ್ಟಿಯ ಬಜೆಟ್

ಬಜೆಟ್‌ನಲ್ಲಿ ಕೆಲವೇ ರಾಜ್ಯಗಳತ್ತ ಹೆಚ್ಚು ಗಮನ ಹರಿಸಲಾಗಿದೆ. ಆ ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಮತದಾರರನ್ನು ಸೆಳೆಯುವ ಬಜೆಟ್ ಮಂಡನೆಯಾಗಿದೆ. ಇದು, ರಾಜಕೀಯ ದೃಷ್ಟಿಕೋನದ ಬಜೆಟ್‌ ಎಂದರೆ ತಪ್ಪಾಗದು.

ದೇವರಾಜ್‌, ಮತ್ತಿಕೆರೆ

---

‘ಆರೋಗ್ಯ’ಕ್ಕೆ ಬಲ

ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಕೊರೊನಾದಂತಹ ಸೋಂಕುಗಳನ್ನು ನಿಯಂತ್ರಿಸಲು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಲ ಅಗತ್ಯ. ಕೇಂದ್ರ ಸರ್ಕಾರ ಇದರ ಬದ್ಧತೆ ಪ್ರದರ್ಶಿಸಿದೆ.

ಕೆ.ಮುರಳಿ, ಪತ್ರಿಕೋದ್ಯಮ ವಿದ್ಯಾರ್ಥಿ

––

ದೂರದೃಷ್ಟಿ ಚಿಂತನೆ

ವಿಶ್ವಮಟ್ಟದಲ್ಲಿ ಭಾರತದ ಶಕ್ತಿ ಹೊರಹೊಮ್ಮಲು ಈ ಬಜೆಟ್ ಸೂಕ್ತವಾಗಿದೆ. ತಕ್ಷಣವೇ ಫಲ ಸಿಗದಿದ್ದರೂ ಭವಿಷ್ಯದ ಯಶಸ್ಸಿಗೆ ಮುನ್ನುಡಿ ಬರೆದಿದೆ. ಬಜೆಟ್‌ನಲ್ಲಿ ಘೋಷಿತ ಅಂಶಗಳೆಲ್ಲ ದೂರದೃಷ್ಟಿಯಿಂದ ಕೂಡಿವೆ.

ಪಾವನಾ, ವಿದ್ಯಾರ್ಥಿನಿ

–––

ಅಗತ್ಯಗಳಿಗೆ ಅನಗತ್ಯ ಏರಿಕೆ

ಮೊಬೈಲ್‌ ಫೋನ್ ಬಿಡಿಭಾಗಗಳು, ಚಾರ್ಜರ್‌ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ. ಎಲ್ಲರಿಗೂ ಅನಿವಾರ್ಯವಾಗಿರುವ ಈ ವಸ್ತುಗಳ ಬೆಲೆ ಕೈಗೆಟುಕುವಂತಿರಬೇಕು. ಬಜೆಟ್ ಬಡವರ ಪರವಾಗಿ ಇಲ್ಲ.

ಎಂ.ಕೃಪಾ, ಯಲಹಂಕ

–––

ಕುರ್ಚಿ ಉಳಿವಿನ ಬಜೆಟ್

ಸರ್ಕಾರ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಬೇಕಿತ್ತು. ಆದರೆ, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಬಜೆಟ್‌ನಲ್ಲಿ ಜನರಿಗೆ ಒಳಿತಿನ ಅಂಶಗಳಿಗಿಂತ ಕುರ್ಚಿ ಉಳಿಸಿಕೊಳ್ಳುವ ಯತ್ನವೇ ಹೆಚ್ಚಾಗಿ ಕಾಣಿಸುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ಇರುವ ಕಾರಣಕ್ಕಾಗಿ ಹೆಚ್ಚಿನ ಹಣ ನೀಡುವ ಮೂಲಕ ಸ್ವಾರ್ಥ ರಾಜಕಾರಣವನ್ನು ಸಾಬೀತು ಪಡಿಸಿದೆ.

ಪ್ರಿಯಾಂಕ, ಖಾಸಗಿ ಕಂಪನಿ ಉದ್ಯೋಗಿ

–––

ತ್ರಿಶಂಕು ಸ್ಥಿತಿಯಲ್ಲಿ ಮಧ್ಯಮವರ್ಗ

‘ಕೇಳಿದ್ದೊಂದು..ನೀಡಿದ್ದೊಂದು’ ಎನ್ನುವಂತಿದೆ ಈ ಬಾರಿಯ ಕೇಂದ್ರ ಬಜೆಟ್. ಬಡವರ ಬಳಿ ವಾಹನಗಳು ಇರುವುದಿಲ್ಲ. ಶ್ರೀಮಂತರಿಗೆ ತೈಲ ದರ ಎಷ್ಟೇ ಏರಿದರೂ ದುಬಾರಿಯಲ್ಲ. ಈಗಾಗಲೇ ಶತಕದ ಅಂಚಿನಲ್ಲಿರುವ ತೈಲ ದರಗಳು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕಿದೆ. ಜನರ ಮೇಲೆ ತೆರಿಗೆಯ ಹೊರೆ ಹಾಕಿ, ಅಭಿವೃದ್ಧಿಗೆ ಮುಂದಾಗಿರುವುದು ಅರ್ಥಹೀನ.

ಸಿ.ವಿಜಯಕುಮಾರ್, ವಿದ್ಯಾರ್ಥಿ

––

ತೆರಿಗೆ ಹೊರೆ ದುಪ್ಪಟ್ಟು

ಕೊರೊನಾದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಈ ಬಜೆಟ್ ನಿರೀಕ್ಷಿತ ಮಟ್ಟ ತಲುಪುವುದು ಕಷ್ಟವಾಗಿದೆ. ಆದರೆ, ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊಡೆತವನ್ನು ಹೆಚ್ಚು ಮಾಡಿದೆ. ಕೃಷಿ , ಆರೋಗ್ಯ, ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗಿದ್ದರೂ, ಜನರ ನಿರೀಕ್ಷೆಗಳಿಗೆ ಪೂರಕವಾಗಿಲ್ಲ.

ಶ್ರೀಕಾಂತ್, ಸಾಫ್ಟ್‌ವೇರ್‌ ಉದ್ಯೋಗಿ

––

ಆಟೊಮೊಬೈಲ್ ಉದ್ದಿಮೆಗೆ ಬಲ

ಕೇಂದ್ರ ಸರ್ಕಾರ ಗುಜರಿ ನೀತಿಯನ್ನು ಜಾರಿಗೊಳಿಸುವ ಮೂಲಕ ದೇಶದ ಆಟೊಮೊಬೈಲ್ ಕ್ಷೇತ್ರದ ಉತ್ತೇಜನಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆಟೊಮೊಬೈಲ್ ಉದ್ದಿಮೆಗೂ ಇದು ಆರೋಗ್ಯಕರ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ.

ಎನ್‌.ಎಸ್.ದಿಲೀಪ್, ಸ್ನಾತಕೋತ್ತರ ಪದವೀಧರ

–––

ಬ್ಯಾಂಕಿಂಗ್‌ ವಲಯಕ್ಕೆ ಅಸ್ತು

ಬ್ಯಾಂಕಿಂಗ್ ವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ₹20 ಸಾವಿರ ಕೋಟಿ ಅನುದಾನ ನೀಡಿರುವುದು ಶ್ಲಾಘನೀಯ. ಆದಾಯ ತೆರಿಗೆ ಮೌಲ್ಯಮಾನಪನ ಅವಧಿಯನ್ನು 6ರಿಂದ 3 ವರ್ಷಕ್ಕೆ ಇಳಿಸಿರುವುದರಿಂದ ಪಾವತಿದಾರರಿಗೂ ಅನುಕೂಲ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಹಾಗೂ ಆತ್ಮನಿರ್ಭರ್ ಯೋಜನೆಯಡಿ ಅನುದಾನ ನೀಡಿರುವುದು ಒಳ್ಳೆಯ ಬೆಳವಣಿಗೆಗಳೊಂದಿಗೆ ಉತ್ತಮ ಬಜೆಟ್ ಇದಾಗಿದೆ.

ಎಂ.ಆರ್.ವೆಂಕಟೇಶ್, ತ್ಯಾಗರಾಜ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ

–––

ನಿರಾಸೆಯಾದ ನಿರೀಕ್ಷೆ

ಕೊರೊನಾ ಸಂಕಷ್ಟ ಪಾರು ಮಾಡುವ ನಿರೀಕ್ಷೆಯಲ್ಲಿದ್ದ ಮಧ್ಯಮವರ್ಗ ಹಾಗೂ ವೇತನದಾರರಿಗೆ ಈ ಬಜೆಟ್ ನಿರಾಸೆ ಮಾಡಿದೆ. ಬಜೆಟ್‌ನಲ್ಲಿ ಏರಿಳಿತ ಕಂಡುಬಂದರೂ ಜನರ ದೈನಂದಿನ ಬದುಕಿನ ಖರ್ಚುಗಳನ್ನು ಹೆಚ್ಚಿಸಿದೆ. ಎಲ್ಲವೂ ಖಾಸಗೀಕರಣಗೊಳ್ಳುತ್ತಿದ್ದು, ಎಲ್ಲವೂ ಮಾರಾಟದ ವಸ್ತುಗಳಾಗಿರುವುದು ಬೇಸರ ಮೂಡಿಸಿದೆ.

ನಾಗರಾಜ್ ಆಚಾರ್, ಲೆಕ್ಕಪರಿಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT