ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿ: ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು

ಮುನಿರತ್ನ ಅಧಿಕ ಮತ ಗಳಿಕೆ
Last Updated 10 ನವೆಂಬರ್ 2020, 20:59 IST
ಅಕ್ಷರ ಗಾತ್ರ

ಭಾರಿ ಜಿದ್ದಾಜಿದ್ದಿ ಏರ್ಪಟ್ಟಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ.

ಆರ್‌.ಆರ್‌.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 58,113 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸುವ ಮೂಲಕ ಹ್ಯಾಟ್ರಿಕ್‌ ವಿಜಯ ಸಾಧಿಸಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್‌ನಿಂದ ಎರಡು ಬಾರಿ ಜಯಗಳಿಸಿದ್ದರು. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಅವರು 13,414 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆ ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್‌ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿ, ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದ್ದರು. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆದ ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂಬ ಪಣತೊಟ್ಟಿದ್ದರು. ಮುನಿರತ್ನ ಅವರ ವೈಯಕ್ತಿಕ ವರ್ಚಸ್ಸು ಮತ್ತು ಬಿಜೆಪಿ ಪ್ರಯತ್ನದ ಮುಂದೆ ಅವರ ಶ್ರಮ ಫಲ ನೀಡಲಿಲ್ಲ.

ಅಂತಿಮ ಸುತ್ತಿನ ಎಣಿಕೆಯವರೆಗೂ ಮುನಿರತ್ನ ಮುನ್ನಡೆ ಸಾಧಿಸಿದರು. ಸಮೀಪದ ಸ್ಪರ್ಧಿಗಳಾದ ಕಾಂಗ್ರೆಸ್‌ನ ಕುಸುಮಾ ಮತ್ತು ಜೆಡಿಎಸ್‌ನ ಕೃಷ್ಣ ಮೂರ್ತಿ ಯಾವುದೇ ಹಂತದಲ್ಲೂ ಅವರ ಸಮೀಪಕ್ಕೂ ಸುಳಿಯಲು ಸಾಧ್ಯವಾಗಲಿಲ್ಲ.

ಶಿರಾ ‘ಕೋಟೆ’ಗೆ ಲಗ್ಗೆ ಇಟ್ಟ ಬಿಜೆಪಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆ ಶಿರಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಯೋಜಿತ ಕಾರ್ಯತಂತ್ರ ಮತ್ತು ಸಂಘಟಿತ ಪ್ರಚಾರದ ಮೂಲಕ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಮತ್ತು ಜೆಡಿಎಸ್‌ನ ಅಮ್ಮಾಜಮ್ಮ ಅವರನ್ನು ಡಾ.ರಾಜೇಶ್‌ಗೌಡ ಪರಾಭವ ಗೊಳಿಸಿ ದರು. ಜೆಡಿಎಸ್ ಅನುಕಂಪದ ನೆಲೆ ಯಲ್ಲಿ ತನ್ನ ದಾಳ ಉರುಳಿಸಿದರೂ ಆ ಪ್ರಯತ್ನ ಸಫಲವಾಗಲಿಲ್ಲ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 24,600 ಮತ ಪಡೆದಿತ್ತು. ಇದೇ ಆ ಪಕ್ಷ ಗಳಿಸಿದ ಗರಿಷ್ಠ ಮತ. 2018ರ ಚುನಾವಣೆಯಲ್ಲಿ ಕೇವಲ 16 ಸಾವಿರ ಮತಗಳನ್ನು ಪಡೆದಿತ್ತು. ಆದರೆ, 2019ರ ಲೋಕಸಭಾ ಚುನಾ ವಣೆಯಲ್ಲಿ ಬಿಜೆಪಿ ಅತ್ಯಧಿಕ ಮತ ಪಡೆದಿದ್ದರಿಂದ, ಪ್ರಯತ್ನಿಸಿದರೆ ಕ್ಷೇತ್ರ ಗೆಲ್ಲಬಹುದು ಎಂಬ ಕಾರಣಕ್ಕೆ ಇದಕ್ಕೆ ಬೇರೆ ಕಾರ್ಯತಂತ್ರ ರೂಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT