ಭಾನುವಾರ, ನವೆಂಬರ್ 29, 2020
20 °C
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ.ರವಿ ತಿರುಗೇಟು

ಪರ್ಸೆಂಟೇಜ್‌ ಸರ್ಕಾರ ಕಾಂಗ್ರೆಸ್ ಕಾಲದಲ್ಲಿತ್ತು: ಸಿ.ಟಿ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪರ್ಸೆಂಟೇಜ್‌ ಸರ್ಕಾರವಿತ್ತು. ಆಗ ಏನೇನು ಮಾಡುತ್ತಿದ್ದರೋ ಅದನ್ನು ನೆನಪಿಸಿಕೊಂಡು ರಾಜ್ಯ ಸರ್ಕಾರದ ಮೇಲೆ ಈಗ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ಇಲ್ಲಿನ ಮುರುಘಾ ಮಠಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಜಾತಿ ನಿಂದನೆ ಪ್ರಕರಣ ದಾಖಲಿಸುವುದು, ಹೆದರಿಸುವುದು ಹಾಗೂ ಮನೆಗಳ ಮೇಲೆ ಕಲ್ಲು ತೂರುವುದು ಬಿಜೆಪಿ ಸಂಸ್ಕೃತಿ ಅಲ್ಲ. ಇವೆಲ್ಲವೂ ಕನಕಪುರದ ಸಂಸ್ಕೃತಿ. ಬೆದರಿಸುವ ಸಂಸ್ಕೃತಿಯನ್ನು ರಾಜ್ಯಕ್ಕೆ ವಿಸ್ತರಿಸಲು ಕಾಂಗ್ರೆಸ್‌ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

‘ಒಂದೆಡೆ ಕೋವಿಡ್, ಮತ್ತೊಂದೆಡೆ ನೆರೆ ಇದೆ. ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತಿದೆ. ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದಾರೆ. ಅಗತ್ಯ ಹಣಕಾಸು ನೆರವು ನೀಡಲಾಗಿದೆ. ಉಸ್ತುವಾರಿ ಸಚಿವರು ನೆರೆಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ಥರಿಗೆ ನೆರವಾಗುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಕುದುರೆ ಜೂಜು ಆಡುವವರನ್ನು ಕರೆತಂದು ರಾಜ್ಯಸಭೆ, ವಿಧಾನಸಭೆಗೆ ಆಯ್ಕೆ ಮಾಡಿದ್ದನ್ನು ನೋಡಿದ್ದೇವೆ. ವಿಧಾನಪರಿಷತ್ತು ಹಾಗೂ ರಾಜ್ಯಸಭೆಯನ್ನು ವ್ಯಾಪಾರಕ್ಕಿಟ್ಟ ಪಕ್ಷಗಳನ್ನು ಕಂಡಿದ್ದೇವೆ. ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಪಕ್ಷ ಬಿಜೆಪಿ. ಬೇರೆ ಪಕ್ಷಗಳಿಗೆ ಯಾರಾರೋ ಮಾಲೀಕರಿದ್ದಾರೆ. ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು