ಗುರುವಾರ , ಸೆಪ್ಟೆಂಬರ್ 16, 2021
29 °C

ಹೆಚ್ಚುತ್ತಿರುವ ಬೇಗುದಿ: ಪ್ರಮುಖ ಖಾತೆಗಳಿಗೆ ಆನಂದ್‌ ಸಿಂಗ್‌, ಎಂ.ಟಿ.ಬಿ. ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಸಚಿವರಾದ ಆನಂದ್‌ ಸಿಂಗ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ತಮಗೆ ನೀಡಿರುವ ಖಾತೆಗಳನ್ನು ಬದಲಿಸಿ, ಪ್ರಬಲ ಖಾತೆಗಳನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದರಿಂದ ಬೊಮ್ಮಾಯಿ ಅವರು ಇಕ್ಕಟ್ಟಿಗೆ ಸಿಲುಕಿದ್ದು, ಇಬ್ಬರನ್ನೂ ಸಮಾಧಾನಪಡಿಸುವ ಕಸರತ್ತಿಗೆ ಕೈ ಹಾಕಿದ್ದಾರೆ. ಆದರೆ, ಇಬ್ಬರೂ ತಮ್ಮ ಪಟ್ಟುಗಳನ್ನು ಬಿಟ್ಟುಕೊಟ್ಟಿಲ್ಲ.

ಆನಂದ್ ಸಿಂಗ್ ಮತ್ತು ನಾಗರಾಜ್‌ ಮುಖ್ಯಮಂತ್ರಿಯವರನ್ನು ಭಾನುವಾರ ಭೇಟಿ ಮಾಡಿ, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು. ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರನ್ನು ತೊರೆದು ಬರುವಾಗ ಕೊಟ್ಟ ಮಾತಿನಂತೆ ‘ಗೌರವಯುತ’ವಾಗಿ ನಡೆಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಅಲ್ಲದೆ, ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸಚಿವ ಬಿ.ಶ್ರೀರಾಮುಲು ಕೂಡಾ ಖಾತೆಯ ಬಗ್ಗೆ ಅಸಮಾಧಾನಗೊಂಡಿದ್ದು, ತಮ್ಮ ಆಪ್ತರ ಬಳಿ ಬೇಗುದಿ ತೋಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಕ್ಷಣಕ್ಕೆ ಬದಲಾವಣೆ ಇಲ್ಲ:‘ತಕ್ಷಣಕ್ಕೆ ಖಾತೆ ಬದಲಾವಣೆ ಸಾಧ್ಯವಿಲ್ಲ’ ಎಂದು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿರುವ ಸಚಿವರನ್ನು ಮನವೊಲಿಸಲು ಬೊಮ್ಮಾಯಿ ಪ್ರಯತ್ನಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಭೇಟಿ ಬಳಿಕವೂ ಈ ಸಚಿವರು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿಲ್ಲ.

ಪಟ್ಟು ಬಿಡದ ಆನಂದ್‌ ಸಿಂಗ್‌: ಪರಿಸರ, ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಖಾತೆ ತಮಗೆ ಬೇಡ ಎಂಬ ನಿಲುವಿನಿಂದ ಆನಂದ್‌ ಸಿಂಗ್‌ ಹಿಂದೆ ಸರಿದಿಲ್ಲ. ಭಾನುವಾರ ಬೆಳಿಗ್ಗೆಯೇ ಕುಟುಂಬ ಸಮೇತರಾಗಿ ಮುಖ್ಯಮಂತ್ರಿಯವರ ಆರ್‌.ಟಿ. ನಗರದ ನಿವಾಸಕ್ಕೆ ಬಂದ ಅವರು, ಪ್ರಬಲ ಖಾತೆ ನೀಡುವಂತೆ ಒತ್ತಡ ಹೇರಿದರು.

ಮುಖ್ಯಮಂತ್ರಿಯವರ ಜತೆ ಕೆಲ ಕಾಲ ಚರ್ಚೆ ನಡೆಸಿದ ಆನಂದ್‌ ಸಿಂಗ್‌, ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು. ಭೇಟಿ ವೇಳೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಕೂಡ ಇದ್ದರು.

ಎಂಟಿಬಿ ಅಸಮಾಧಾನ: ಬೊಮ್ಮಾಯಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆ ಸಚಿವ ಎಂ.ಟಿ.ಬಿ.ನಾಗರಾಜ್, ‘ನನಗೆ ಈಗ ಕೊಟ್ಟಿರುವ ಖಾತೆಯಿಂದ ಹಿಂಬಡ್ತಿಯಾಗಿದೆ. ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ತಂದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದೆ ನಾನು ವಸತಿ ಖಾತೆ ನೀಡುವಂತೆ ಕೇಳಿದ್ದೆ. ಈ ಬಾರಿ ಅದಕ್ಕಿಂತಲೂ ಉತ್ತಮ ಖಾತೆ ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಇಂಧನ, ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಾರಿಗೆ ಖಾತೆಗಳಲ್ಲಿ ಒಂದನ್ನು ಕೊಡಲಿ’ ಎಂದು ಆಗ್ರಹಿಸಿದರು.

‘ಖಾತೆ ಬದಲಾವಣೆ ಬೇಡಿಕೆಗೆ ಸಂಬಂಧಿಸಿ ವರಿಷ್ಠರ ಜತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಬದಲಾವಣೆ ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಅವರ ಮಾತಿನ ಮೇಲೆ ನಂಬಿಕೆ ಇಟ್ಟಿದ್ದೇನೆ. ಜನರ ಜತೆ ಸೇರಿ ಕೆಲಸ ಮಾಡುವ ಖಾತೆ ಬೇಕು’ ಎಂದರು.

ಯಡಿಯೂರಪ್ಪ ಜತೆ ಚರ್ಚೆ: ಸಚಿವರ ಅತೃಪ್ತಿಯ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಮಾಡಿ, ಖಾತೆ ಹಂಚಿಕೆ ಕುರಿತ ಅಸಮಾಧಾನದ ಬಗ್ಗೆ ಸಮಾಲೋಚನೆ ನಡೆಸಿದರು.

‘ಗೌರವ ಉಳಿಸುವ ಭರವಸೆ’

‘ನಿಮ್ಮ ಗೌರವ ಉಳಿಸಲು ಏನೇನು ಮಾಡಬೇಕೊ ಆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ ಎಂಬ ಭರವಸೆಯನ್ನು ಆನಂದ್‌ ಸಿಂಗ್‌ ಅವರಿಗೆ ನೀಡಿದ್ದೇನೆ’ ಎಂದು ವಿಧಾನಸೌಧದ ಬಳಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಹೇಳಿದರು.

‘ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಭಾವನೆಗಳು ನಮಗೂ ಅರ್ಥವಾಗುತ್ತವೆ. ನನ್ನ ಭರವಸೆಯನ್ನು ಆನಂದ್‌ ಸಿಂಗ್‌ ಒಪ್ಪಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.

ಶಾಸಕರ ಅಸಮಾಧಾನವೂ ತಣಿದಿಲ್ಲ:

ಸಂಪುಟದಲ್ಲಿ ಸ್ಥಾನ ದೊರೆಯದಿರುವ ಬಿಜೆಪಿ ಶಾಸಕರ ಅಸಮಾಧಾನವೂ ತಣಿದಿಲ್ಲ. ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್‌ ರೆಡ್ಡಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಭೇಟಿಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾನು 1990 ರಿಂದಲೂ ಬೆಂಗಳೂರಿನಲ್ಲಿ ಪಕ್ಷ ಕಟ್ಟಿ, ಬೆಳೆಸಿದ ಪ್ರಮುಖ
ರಲ್ಲಿ ಒಬ್ಬ. ಈಗ ಸಂಪುಟದಲ್ಲಿರುವ ಬೆಂಗಳೂರಿನವರ ಪೈಕಿ ಆರ್‌. ಅಶೋಕ ಮತ್ತು ಡಾ.ಸಿ.ಎನ್‌. ಅಶ್ವತ್ಥ
ನಾರಾಯಣ ಮಾತ್ರ ಪಕ್ಷ ಸಂಘಟನೆಗೆ ದುಡಿದವರು. ಉಳಿದವರೆಲ್ಲ ಹೊರಗಿನಿಂದ ಬಿಜೆಪಿಗೆ ಬಂದವರು’
ಎಂದು ಬೇಸರ ವ್ಯಕ್ತಪಡಿಸಿದರು.

ಕುಡಚಿ ಶಾಸಕ ಪಿ. ರಾಜೀವ್‌ ಕೂಡ ಸಂಪುಟದಲ್ಲಿ ಸ್ಥಾನ ದೊರೆಯದೇ ಇರುವ ಬಗ್ಗೆ ಫೇಸ್‌ಬುಕ್‌ ಮೂಲಕ ಅಸಮಾಧಾನ ಬಹಿರಂಗಪಡಿಸಿದ್ದಾರೆ.

ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಬಿಎಸ್‌ವೈ:

ತಮಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿತ್ತು.

‘ಈ ಆದೇಶವನ್ನು ಹಿಂಪಡೆಯಬೇಕು. ನಿಕಟಪೂರ್ವ ಮುಖ್ಯಮಂತ್ರಿಗೆ  ಸರ್ಕಾರದಿಂದ ನೀಡುವ ಸೌಲಭ್ಯಗಳಷ್ಟೇ ನನಗೆ ಸಾಕು’ ಎಂದು ಯಡಿಯೂರಪ್ಪ ಪತ್ರದಲ್ಲಿ ಕೋರಿದ್ದಾರೆ.

ಈ ಹಿಂದೆ ನಿರ್ಗಮಿತ ಮುಖ್ಯಮಂತ್ರಿಗಳಿಗೆ ಸಂಪುಟದರ್ಜೆ ಸ್ಥಾನಮಾನ ನೀಡಿದ ಉದಾಹರಣೆಗಳಿಲ್ಲ. ಶಿಷ್ಟಾಚಾರದ ಪ್ರಕಾರ, ವಿಶೇಷ ಭದ್ರತಾ ವ್ಯವಸ್ಥೆ ಸೇರಿ ಕೆಲ ಸೌಲಭ್ಯಗಳನ್ನಷ್ಟೇ ಒದಗಿಸಲಾಗುತ್ತದೆ.

ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನಮಾನ ನೀಡಲು ಬೊಮ್ಮಾಯಿ ನಿರ್ಧರಿಸಿದ್ದರು. ಆದರೆ, ಸರ್ಕಾರ ತಮ್ಮ ಹಿಡಿತದಲ್ಲಿ ಇದೆ ಎಂಬ ತಪ್ಪು ಸಂದೇಶ ರವಾನೆ ಆಗಬಹುದು ಎಂಬ ಕಾರಣದಿಂದ ಯಡಿಯೂರಪ್ಪ ಈ ಸ್ಥಾನಮಾನ  ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು