ಗುರುವಾರ , ನವೆಂಬರ್ 26, 2020
20 °C
ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದೆ ಅಂತಿಮ ಎರಡು ದಿನಗಳ ಲೆಕ್ಕಾಚಾರ

ಹಳ್ಳಿ ಹಳ್ಳಿಗಳಲ್ಲೂ ಪ್ರವಹಿಸಿದ ಜಾತಿ ಅಸ್ತ್ರ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ತುಮಕೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಲೊನಿಯಲ್ಲಿ ಬಿಜೆಪಿಗೆ ಹೆಚ್ಚು ಮತ ಬಿದ್ದಿರಲಿಲ್ಲ. ಈ ಸಲ ಬಿಜೆಪಿಗೆ ಹೆಚ್ಚು ಮತ ಬೀಳುವ ಸಾಧ್ಯತೆ ಇದೆ. ಆದರೆ ಕೊನೆಯ ಎರಡು ದಿನಗಳಲ್ಲಿ ಏನಾದರೂ ಆಗಬಹುದು’ ಹೀಗೆ ಹೇಳಿದ್ದು ಶಿರಾ ತಾಲ್ಲೂಕು ಹೊನ್ನೆಭೋವಿ ಕಾಲೊನಿಯ ನಾಗರಾಜ.

ಶಿರಾ ವಿಧಾನಸಭಾ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಭಾನುವಾರ (ನವೆಂಬರ್‌ 1ರಂದು) ತೆರೆ ಬೀಳಲಿದೆ.  ಮೂರು ಪಕ್ಷಗಳ ಘಟಾನುಘಟಿಗಳು ಕೊನೆಯ ಯತ್ನವಾಗಿ ಹಳ್ಳಿ, ಹಳ್ಳಿಗಳಿಗೆ ಎಡತಾಕಿ ಮತ ಸೆಳೆಯುವ ಉತ್ಸಾಹದಲ್ಲಿದ್ದಾರೆ. ಯಾವ ಜಾತಿ ಮತದಾರರು ಹೆಚ್ಚಿದ್ದಾರೋ ಅಂಥ ಹಳ್ಳಿಗಳಿಗೆ ಅದೇ ಜಾತಿಯ ನಾಯಕರನ್ನೇ ಮೂರು ಪಕ್ಷಗಳು ಮತಯಾಚನೆಗೆ ಕಳುಹಿಸಿವೆ. 

ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ ಶಿರಾ ತಾಲ್ಲೂಕಿನ ಹೊನ್ನೆಭೋವಿ ಕಾಲೊನಿ ತಲುಪಿದಾಗ ಅಲ್ಲಿ ರಾಜಕೀಯ ಚರ್ಚೆ ಕಾವು ಪಡೆದಿತ್ತು. ಕಾಲೊನಿಯಲ್ಲಿ ಮೂರು ಪಕ್ಷಗಳ ಬೆಂಬಲಿಗರು, ಕಾರ್ಯ
ಕರ್ತರು ಇದ್ದಾರೆ. ಈ ಬಾರಿ ಬಿಜೆಪಿಗೆ ಹೆಚ್ಚು ಮತ ಬರುತ್ತವೆ ಎನ್ನುತ್ತಲೇ ಮಾತು ಆರಂಭಿಸಿದ ಜನರು, ಕೊನೆಯ ಎರಡು ದಿನದ ಆಟ ಒಟ್ಟಾರೆ ಚಿತ್ರಣ ಬದಲಿಸಲೂಬಹುದು ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗಣ್ಯ ಎನ್ನುವಂತಿದ್ದ ಬಿಜೆಪಿ ಬಗ್ಗೆ ಕಾಲೊನಿಯಲ್ಲಿ ಒಲವು ಕಾಣುತ್ತಿದೆ.

ಗೌಡಗೆರೆ, ಕಸಬಾ, ಕಳ್ಳಂಬೆಳ್ಳ ಮತ್ತು ಹುಲಿಕುಂಟೆ ಹೋಬಳಿ ಒಳಗೊಂಡ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ಜಾತಿ ಲೆಕ್ಕಚಾರಗಳನ್ನು ತೀವ್ರಗೊಳಿಸಿದೆ. ಒಂದೊಂದು ಹಳ್ಳಿಗಳಲ್ಲಿಯೂ ಒಂದೊಂದು ‘ಮತ’ದ ಲೆಕ್ಕಾಚಾರ ಇದೆ.

‘ನಮ್ಮ ಊರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದಿನಿಂದಲೂ ಎದುರಾಳಿಗಳಾಗಿದ್ದವು. ಈಗ ಬಿಜೆಪಿಯೂ ಸೇರಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು ತಾವರೆಕೆರೆಯ ಬಂಡಿ ರಂಗನಾಥಸ್ವಾಮಿ ದೇಗುಲದ ಅರ್ಚಕರು. ಜೆಡಿಎಸ್ ಭದ್ರಕೋಟೆ ಎನಿಸಿದ್ದ ತಾವರೆಕೆರೆಯಲ್ಲಿ ಕೇಸರಿ ಶಲ್ಯ ಹೆಗಲಿಗೆ ಹಾಕಿಕೊಂಡ ಬಿಜೆಪಿ ಕಾರ್ಯಕರ್ತರ ಪಡೆ ಢಾಳಾಗಿತ್ತು.‌ ಹಳ್ಳಿಗಳಲ್ಲಿ ಕಾಣುವ ಕಾರ್ಯಕರ್ತರ ದಂಡು ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಶಿರಾದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಳ್ಳಲಿವೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುವಂತೆ ಕಾಣಿಸಿತು.

‘ಕಾಂಗ್ರೆಸ್‌ ಕಾರ್ಯಕರ್ತರು ಚದುರಿಲ್ಲ. ಜೆಡಿಎಸ್ ಕಾರ್ಯಕರ್ತರು ಚದುರಿದ್ದಾರೆ. ಜೆಡಿಎಸ್‌ನ ಬಹಳಷ್ಟು ಮಂದಿ ಬಿಜೆಪಿ ಸೇರಿದ್ದಾರೆ. ನಮ್ಮಲ್ಲಿ ಬಿಜೆಪಿ ಬಲ ಹೆಚ್ಚಿದಂತೆ ಜೆಡಿಎಸ್ ಬಲ ಕುಸಿಯುತ್ತಿದೆ’ ಎಂದು ಲೆಕ್ಕಾಚಾರಗಳನ್ನು ಮುಂದಿಟ್ಟರು ತಾವರೆಕೆರೆಯ ಕೃಷ್ಣಪ್ಪ, ಟೀ ಅಂಗಡಿಯ ಪಾಂಡಪ್ಪ.

ತಾವರೆಕೆರೆಯಿಂದ ಹುಯಿಲ್‌ದೊರೆ ಮಾರ್ಗದಲ್ಲಿರುವ ಜಿ.ರಂಗನಹಳ್ಳಿ ಇಡೀ ಶಿರಾ ಕ್ಷೇತ್ರದ ರಾಜಕೀಯ ‘ಆಟ’ಗಳನ್ನೇ ತನ್ನೊಳಗೆ ಹುದುಗಿಸಿಕೊಂಡಂತೆ ಇದೆ.

ಗ್ರಾಮದ ಕುಮಾರ್‌ ಕಾಂಗ್ರೆಸ್ ಗೆಲ್ಲಲಿದೆ ‌ಎಂದರೆ, ಹನುಮಂತ ಬಿಜೆಪಿ ಮತ್ತು ಮಂಜುನಾಥ್ ಜೆಡಿಎಸ್ ಪರ ಒಲವು ವ್ಯಕ್ತಪಡಿಸಿದರು. ‘ಕೊನೆ ಕ್ಷಣದಲ್ಲಿ ಯಾರು ಯಾವ ‍ಪಕ್ಷಕ್ಕಾದರೂ ಮತ ನೀಡಬಹುದು. ನಾವೂ ಬದಲಾಗಬಹುದು’ ಎನ್ನುವ ಈ ಮೂವರು ‘ಕೊನೆಯ ಕೊಡುಕೊಳ್ಳುವಿಕೆಯ ಆಟ’ವೇ ಫಲಿತಾಂಶ ನಿರ್ಧರಿಸಲಿದೆ ಎನ್ನುವುದನ್ನು ಒತ್ತಿ ಹೇಳುತ್ತಾರೆ.

ಹೊರಗಿನಿಂದ ಬಂದವರೇ ಬಿಜೆಪಿಯಲ್ಲಿ ‘ಉಡುಗೊರೆ’ ಹಂಚುತ್ತಿದ್ದಾರೆ. ಇವರು ಕ್ಷೇತ್ರದಿಂದ ಹೊರ ಹೋದ ನಂತರ ‘ಗಣಿತ’ ಬದಲಾಗುತ್ತದೆ. ಆ ನಂತರವೇ ನಿಜವಾದ ‘ಆಟ’ ಆರಂಭ. ಈ ಕ್ಷಣಗಳೇ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುತ್ತದೆ ಎನ್ನುತ್ತಾರೆ ಕಳ್ಳಂಬೆಳ್ಳದ ರಂಗಸ್ವಾಮಿ, ಜಿ.ರಂಗನಹಳ್ಳಿಯ ಪವನ್, ಶಿರಾದ ರಂಗಸ್ವಾಮಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು