ಸೋಮವಾರ, ಅಕ್ಟೋಬರ್ 26, 2020
20 °C
ಪರಿಶೀಲನೆ ಮುಗಿದ ಬಳಿಕವೇ ಡಿ.ಕೆ. ಶಿವಕುಮಾರ್‌ಗೆ ಸಮನ್ಸ್

ಡಿ.ಕೆ.ಶಿವಕುಮಾರ್ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿರುವ ಸಿಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸ, ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ವಶಕ್ಕೆ ಪಡೆದಿರುವ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 

ದೆಹಲಿ, ಮುಂಬೈ ಹಾಗೂ ರಾಜ್ಯದ ವಿವಿಧೆಡೆ ವಶಪಡಿಸಿಕೊಂಡಿರುವ ದಾಖಲೆಗಳನ್ನು ಕ್ರೋಡೀಕರಿಸುತ್ತಿದ್ದಾರೆ. ಬ್ಯಾಂಕ್‌ ಖಾತೆ, ಕಂಪ್ಯೂಟರ್‌ನಲ್ಲಿ ಇರುವ ಮಾಹಿತಿ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ. ಈ ಕಾರ್ಯ ಮುಗಿದ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ಇತರರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

‘ಪ್ರಾಥಮಿಕ ತನಿಖೆ ಆಧರಿಸಿ ಮೊದಲು ಎಫ್‌ಐಆರ್ ದಾಖಲಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ದೊರೆತ ದಾಖಲೆಗಳು, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ವಿವರಣೆ ನೀಡಲು ಆರೋಪಿಗೆ ಅವಕಾಶ ನೀಡಲಾಗುತ್ತದೆ’ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಅವರು ತನಿಖಾ ಪ್ರಕ್ರಿಯೆಗಳ ಬಗ್ಗೆ ತಿಳಿಸಿದರು.

‘ಆಸ್ತಿ ಸಂಪಾದನೆಗೆ ಇರುವ ಆದಾಯದ ಮೂಲ ಯಾವುದು ಎಂಬುದರ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಪಡೆಯಲಾಗುತ್ತದೆ. ದಾಳಿ ವೇಳೆ ದೊರೆತಿರುವ ದಾಖಲೆ ಮತ್ತು ವಿಚಾರಣೆ ಸಂದರ್ಭದಲ್ಲಿ ನೀಡುವ ಮಾಹಿತಿ ಆಧರಿಸಿ ಆದಾಯದ ಮೂಲ ಸರಿಯಾಗಿದ್ದರೆ ಪ್ರಕರಣವನ್ನು ಕೈಬಿಡಲಾಗುತ್ತದೆ. ಅಕ್ರಮ ಆಸ್ತಿ ಎಂಬುದು ಕಂಡು ಬಂದರೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಿಬಿಐ ಅಧಿಕಾರಿಗಳು ಸಲ್ಲಿಸುತ್ತಾರೆ’ ಎಂದು ವಿವರಿಸಿದರು.

‘ಸದ್ಯ ದಾಖಲೆಗಳ ಪರಿಶೀಲನೆ ಹಂತದಲ್ಲಿದೆ. ಅದು ಮುಗಿದ ಬಳಿಕ ಅವಶ್ಯ ಇದ್ದರೆ ವಿಚಾರಣೆಗೆ ಹಾಜರಾಗಲು ಆರೋಪಿಗೆ ಸಮನ್ಸ್ ನೀಡುತ್ತಾರೆ’ ಎಂದರು.

ಸಿಬಿಐಗೆ ಮತ್ತೊಂದು ದೂರು

ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಹಲವು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಈ ಬಗ್ಗೆಯೂ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ರವಿಕುಮಾರ್ ಕಂಚನಹಳ್ಳಿ ಸಿಬಿಐಗೆ ದೂರು ನೀಡಿದ್ದಾರೆ.

‘ಶೋಭಾ ಡೆವಲಪರ್ಸ್, ಪ್ರಸ್ಟೀಜ್ ಡೆವಲಪರ್ಸ್‌, ಪುರವಂಕರ ಡೆವಲಪರ್ಸ್ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಳ್ಕರ ಅವರ ಸಕ್ಕರೆ ಕಾರ್ಖಾನೆಗಳಲ್ಲಿ ಹೂಡಿಕೆಗೆ ಆದಾಯ ಮೂಲ ಯಾವುದು ಎಂಬದನ್ನೂ ಪರಿಶೀಲಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ದೂರನ್ನು ಇ–ಮೇಲ್ ಮೂಲಕ ಸಿಬಿಐಗೆ ಕಳುಹಿಸಲಾಗಿದ್ದು, ರಿಜಿಸ್ಟರ್ ಪೋಸ್ಟ್ ಮೂಲಕವೂ ಬುಧವಾರ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು