ಬುಧವಾರ, ಜುಲೈ 6, 2022
22 °C
₹ 1,200 ಕೋಟಿ ವೆಚ್ಚದ ಯೋಜನೆ

’108’ ಮೇಲ್ದರ್ಜೆಗೇರಿಸಲು ಸಂಪುಟ ಅಸ್ತು: ಸಚಿವ ಡಾ.ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಕವಚ–108 ಆಂಬುಲೆನ್ಸ್‌ ಸೇವೆಯನ್ನು ಮೇಲ್ದರ್ಜೆಗೇರಿಸುವ ₹ 1,260 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

‘ಆರೋಗ್ಯ ಇಲಾಖೆ ನೇಮಿಸಿದ್ದ ತಜ್ಞರ ಸಲಹಾ ಸಮಿತಿಯ ಶಿಫಾರಸಿನಂತೆ ಆಂಬುಲೆನ್ಸ್‌ ಸೇವೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಮಾರ್ಗಸೂಚಿಗಳ ಅನುಸಾರ ಆಂಬುಲೆನ್ಸ್‌ ಸೇವೆಯಲ್ಲಿ ಸುಧಾರಣೆ ತರಲಾಗುವುದು’ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

‘ಸದ್ಯ ಆರೋಗ್ಯ ಕವಚದಲ್ಲಿ 710 ಆಂಬುಲೆನ್ಸ್‌ಗಳಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾನದಂಡಗಳ ಪ್ರಕಾರ, ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಒಂದು ‘ಬೇಸಿಕ್‌ ಲೈಫ್‌ ಸಪೋರ್ಟ್‌’ (ಬಿಎಲ್‌ಎಸ್‌) ಆಂಬುಲೆನ್ಸ್‌ ಮತ್ತು ಪ್ರತಿ ಐದು ಲಕ್ಷ ಜನಸಂಖ್ಯೆಗೆ ಒಂದು ‘ಅಡ್ವಾನ್ಸ್ಡ್‌ ಲೈಫ್‌ ಸಪೋರ್ಟ್‌’ (ಎಎಲ್‌ಎಸ್‌) ಆಂಬುಲೆನ್ಸ್‌ ಬೇಕಿದೆ. ಈ ಪ್ರಕಾರ, ಒಟ್ಟು ಆಂಬುಲೆನ್ಸ್‌ಗಳ ಸಂಖ್ಯೆಯನ್ನು 750ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಈಗ ಬಳಕೆಯಲ್ಲಿರುವ ಆಂಬುಲೆನ್ಸ್‌ಗಳಲ್ಲಿ 340 ದುಃಸ್ಥಿತಿಯಲ್ಲಿವೆ. ಅವುಗಳನ್ನು ಬದಲಿಸಲಾಗುವುದು. ಒಟ್ಟು 350 ಹೊಸ ಆಂಬುಲೆನ್ಸ್‌ಗಳನ್ನು ಖರೀದಿಸಲಾಗುವುದು. 24 ಗಂಟೆಗಳ ಅವಧಿಯಲ್ಲಿ ಒಂದು ಆಂಬುಲೆನ್ಸ್‌ ಐದಕ್ಕಿಂತ ಹೆಚ್ಚು ಪ್ರಕರಣಗಳನ್ನು ನಿರ್ವಹಿಸಿದರೆ ಅಥವಾ 120 ಕಿ.ಮೀ. ಸಂಚರಿಸಿದರೆ ಅಂಥ ಕಡೆ ಮತ್ತೊಂದು ಆಂಬುಲೆನ್ಸ್‌ ಒದಗಿಸಲಾಗವುದು’ ಎಂದು ಹೇಳಿದ್ದಾರೆ.

‘ಹೊಸ ಯೋಜನೆಯ ಅಡಿಯಲ್ಲಿ ಶೇ 40ರಷ್ಟು ಎಎಲ್‌ಎಸ್‌ ಮತ್ತು ಶೇ 60ರಷ್ಟು ಬಿಎಲ್‌ಎಸ್‌ ಆಂಬುಲೆನ್ಸ್‌ಗಳನ್ನು ಒದಗಿಸಲಾಗುವುದು. ಎಲ್ಲ ವಾಹನಗಳಿಗೂ ಜಿಪಿಎಸ್‌ ಅಳವಡಿಸಲಾಗುವುದು. ಆಂಬುಲೆನ್ಸ್‌ ಸಿಬ್ಬಂದಿಗೆ ಆಧಾರ್‌ ಜೋಡಣೆಯೊಂದಿಗೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಕಲ್ಪಿಸಲಾಗುವುದು. ಸ್ವಯಂಚಾಲಿತ ಕರೆ ಸ್ವೀಕಾರ ಮತ್ತು ಕರೆ ಮಾಡಿದವರು ಇರುವ ಸ್ಥಳದ ಮಾಹಿತಿ ಒದಗಿಸುವ ವ್ಯವಸ್ಥೆಯನ್ನೂ ಅಳವಡಿಸಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಕರೆ ಕೇಂದ್ರ ಉನ್ನತೀಕರಣ: ‘ಆರೋಗ್ಯ ಕವಚ ಕರೆ ಕೇಂದ್ರದ ಸಿಬ್ಬಂದಿ ಆಸನಗಳ ಸಂಖ್ಯೆಯನ್ನು 54ರಿಂದ 75ಕ್ಕೆ ಹೆಚ್ಚಿಸಲಾಗುವುದು’ ಎಂದು ವಿವರಿಸಿದ್ದಾರೆ.

‘ಆರೋಗ್ಯ ಕವಚ ಯೋಜನೆಯ ಗುತ್ತಿಗೆಗೆ ಕೇವಲ ದರದ ಆಧಾರದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುವ ಪದ್ಧತಿ ಇತ್ತು. ಅದನ್ನು ಬದಲಿಸಿ, ದರ ಮತ್ತು ಸೇವೆಯ ಗುಣಮಟ್ಟವನ್ನೂ ಮಾನದಂಡವಾಗಿ ನಿಗದಿಪಡಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು