ಗುರುವಾರ , ಅಕ್ಟೋಬರ್ 29, 2020
22 °C
ತೆಲಂಗಾಣದ ಬೇಡಿಕೆಗೆ ಮಣಿದ ಕೇಂದ್ರ ಸರ್ಕಾರ

ಮತ್ತೆ ಗರಿಗೆದರಿದ ಕೃಷ್ಣಾ ನೀರು ಹಂಚಿಕೆ ವಿವಾದ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷ್ಣಾ ನದಿ ನೀರನ್ನು ಹೊಸದಾಗಿ ಹಂಚಿಕೆ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿರುವ ತೆಲಂಗಾಣ ಸರ್ಕಾರದ ಇತ್ತೀಚಿನ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸುವ ಇಂಗಿತ ವ್ಯಕ್ತಪಡಿಸಿರುವುದು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಲಿದೆ.

ಕೃಷ್ಣಾ ಹಾಗೂ ಗೋದಾವರಿ ನದಿ ವ್ಯಾಪ್ತಿಯ ನೀರಾವರಿ ಯೋಜನೆಗಳ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಅವರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ನೀಡಿದ ಸಲಹೆ ಈಗ ರಾಜ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.

2014ರಲ್ಲಿ ಹೊಸ ರಾಜ್ಯವಾಗಿ ಹೊರಹೊಮ್ಮಿರುವ ತೆಲಂಗಾಣ, ಕೃಷ್ಣಾ ನೀರಿನ ಮರು ಹಂಚಿಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ‘ಈ ಅರ್ಜಿಯನ್ನು ವಾಪಸ್ ಪಡೆಯುವುದಾದರೆ, ಪ್ರಕರಣವನ್ನು ಹೊಸದಾಗಿ ಪರಿಶೀಲಿಸುವಂತೆ ನ್ಯಾಯಮಂಡಳಿಗೆ ಸೂಚಿಸಲಾಗುವುದು’ ಎಂದು ಸಚಿವ ಶೇಖಾವತ್‌ ಆಶ್ವಾಸನೆ ನೀಡಿರುವುದೇ ಕೃಷ್ಣಾ ನೀರು ಹಂಚಿಕೆ ವಿವಾದವನ್ನು ಮತ್ತೆ ಕೆದಕಿದಂತಾಗಿದೆ.

ಕಣಿವೆ ವ್ಯಾಪ್ತಿಯ ಮಹಾರಾಷ್ಟ್ರ, ಕರ್ನಾಟಕ, ಮತ್ತು ಆಂಧ್ರಪ್ರದೇಶಗಳಿಗೆ ನೀರು ಹಂಚಿಕೆ ಮಾಡಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು 2010ರಲ್ಲೇ ಐತೀರ್ಪು ನೀಡಿದೆ. ಅಲ್ಲದೆ, ಕಣಿವೆ ರಾಜ್ಯಗಳು ಐತೀರ್ಪಿನ ಸ್ಪಷ್ಟೀಕರಣ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್ ನೇತೃತ್ವದ ನ್ಯಾಯಮಂಡಳಿ, 2013ರಲ್ಲಿ ಅಂತಿಮ ವರದಿ ಸಲ್ಲಿಸಿದೆ.

ಒಂದೊಮ್ಮೆ, ತೆಲಂಗಾಣ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂದೆ ಪಡೆದುಕೊಳ್ಳಲು ತೀರ್ಮಾನಿಸಿದಲ್ಲಿ ಕೇಂದ್ರವು ಕೃಷ್ಣಾ ಜಲ ವಿವಾದ ಪ್ರಕರಣವನ್ನು ಮತ್ತೆ ನ್ಯಾಯಮಂಡಳಿಗೆ ಶಿಫಾರಸು ಮಾಡಲಿದೆ. 2013ರ ಐತೀರ್ಪಿನ ಅಧಿಸೂಚನೆಯನ್ನು ಪ್ರಕಟಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ಕರ್ನಾಟಕದ ಹಿತಾಸಕ್ತಿಗೆ ಈ ನಡೆಯಿಂದ ತೀವ್ರ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

2010ರ ಐತೀಪಿರ್ನ ಪ್ರಕಾರ, ಕರ್ನಾಟಕಕ್ಕೆ 911 ಟಿಎಂಸಿ ಅಡಿ, ಆಂಧ್ರಕ್ಕೆ 1001 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 666 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದ ನ್ಯಾಯಮಂಡಳಿಯು, ಸ್ಪಷ್ಟೀಕರಣ ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿ ನೀಡಲಾದ ತೀರ್ಪಿನಲ್ಲಿ ರಾಜ್ಯಕ್ಕೆ ನೀಡಿದ್ದ 4 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ ಆಂಧ್ರಕ್ಕೆ ಹೆಚ್ಚುವರಿಯಾಗಿ ನೀಡಿತ್ತು.

ಇದರಿಂದಾಗಿ ಆಂಧ್ರಕ್ಕೆ 1005 ಟಿಎಂಸಿ ಅಡಿ ನೀರು ಸಿಕ್ಕಂತಾಗಿತ್ತು. ಆದರೆ, 2014ರಲ್ಲಿ ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾದ ತೆಲಂಗಾಣ, ಹೊಸದಾಗಿ ನೀರು ಹಂಚಿಕೆ ಮಾಡುವಂತೆ ಕೋರಿತ್ತು.

‘ನ್ಯಾಯಮಂಡಳಿಯು ಕೃಷ್ಣಾ ನೀರು ಹಂಚಿಕೆ ಪ್ರಕರಣವನ್ನು ಹೊಸದಾಗಿ ವಿಚಾರಣೆಗೆ ಒಳಪಡಿಸಿದರೆ ಮಾತ್ರ ತನಗೆ ನ್ಯಾಯ ದೊರೆಯಬಹುದು’ ಎಂದು ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು, ‘ತೆಲಂಗಾಣವು ಆಂಧ್ರದಿಂದಲೇ ಹೊರಹೊಮ್ಮಿದ್ದು, ಈ ಸಂಬಂಧ ಉದ್ಭವವಾಗಿರುವ ಜಲವಿವಾದಕ್ಕೆ ನಾವು ಜವಾಬ್ದಾರರಲ್ಲ’ ಎಂದು ಹೇಳಿದ್ದವಲ್ಲದೆ, ‘ಹಂಚಿಕೆ ಮಾಡಲಾದ ನೀರನ್ನೇ ಎರಡೂ ರಾಜ್ಯಗಳು ಪಡೆಯಬೇಕು’ ಎಂದೂ ಸಲಹೆ ನೀಡಿದ್ದವು.

ಕರ್ನಾಟಕ ಮತ್ತು ಮಹಾರಾಷ್ಟ್ರಗಳೂ ಹೊಸ ಪ್ರಕರಣದಲ್ಲಿ ಭಾಗಿಯಾಗಬೇಕೇ ಎಂಬುದನ್ನು ಕೇಂದ್ರ ಸ್ಪಷ್ಟಪಡಿಸಿಲ್ಲ. ಆದರೆ, ಕಣಿವೆ ರಾಜ್ಯದ ಎಲ್ಲ ರಾಜ್ಯಗಳನ್ನೂ ಪ್ರಕರಣದಲ್ಲಿ ಭಾಗಿಯಾಗಿಸಬೇಕು ಎಂದು ತೆಲಂಗಾಣ ಸರ್ಕಾರಕೋರಿದರೆ ಕೃಷ್ಣಾ ನದಿ ನೀರಿನ ಸಂಪೂರ್ಣ ಬಳಕೆಗೆ ಸನ್ನದ್ಧವಾಗುತ್ತಿರುವ ಕರ್ನಾಟಕದ ನೆಮ್ಮದಿಗೆ ಭಂಗ ಬರಲಿದೆ.

***

ಕೃಷ್ಣಾ ನದಿ ನೀರಿನ ಮರು ಹಂಚಿಕೆ ಮತ್ತು ಮರು ವಿಚಾರಣೆಯನ್ನು ಕೋರಲು ತೆಲಂಗಾಣಕ್ಕೆ ಅವಕಾಶವೇ ಇಲ್ಲ. ಇದು ಕಾನೂನು ಬಾಹಿರ

–ಮೋಹನ್‌ ಕಾತರಕಿ, ರಾಜ್ಯ ಪರ ವಕೀಲರು, ಜಲವಿವಾದ ಕಾನೂನು ತಜ್ಞರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು