ಬುಧವಾರ, ಜುಲೈ 28, 2021
27 °C

ಸಿಇಟಿ: ಎರಡು–ಮೂರನೇ ರ‍್ಯಾಂಕ್‌ ಸಾಧಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಐದು ವಿಭಾಗಗಳಲ್ಲಿ ಎರಡು ಮತ್ತು ಮೂರನೇ ರ‍್ಯಾಂಕ್‌ ಪಡೆದವರ ವಿವರ ಇಂತಿದೆ.

ಎಂಜಿನಿಯರಿಂಗ್‌
02. ಆರ್. ಶುಭನ್: ಶ್ರೀ ಚೈತನ್ಯ ಇ–ಟೆಕ್ನೊ ಸ್ಕೂಲ್‌, ಬೆಂಗಳೂರು

ಸಿಇಟಿಯಲ್ಲಿ ಎರಡನೇ ರ‍್ಯಾಂಕ್‌ ಬಂದಿರುವುದು ಸಂತಸ ತಂದಿದೆ. ಕಳೆದ ಜನವರಿಯಲ್ಲಿ ನಡೆದ ಜೆಇಇ ಮುಖ್ಯಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದೇನೆ. ಉಪನ್ಯಾಸಕರು ಉತ್ತಮ ಮಾರ್ಗದರ್ಶನ ನೀಡಿದರು. ತಂದೆ–ತಾಯಿ ಮೆಡಿಕಲ್‌ ಟ್ರಾನ್ಸ್‌ಸ್ಕ್ರಿಪ್ಷನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಸಲಹೆ ನೀಡಿದರು. ಎಂಜಿನಿಯರಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯ ಆಯ್ಕೆಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ.

03. ಶಶಾಂಕ್ ಬಾಲಾಜಿ: ಬೇಸ್‌ ಪಿಯು ಕಾಲೇಜು, ಹುಬ್ಬಳ್ಳಿ

ನಿತ್ಯ ಐದಾರು ಗಂಟೆ ಓದುತ್ತಿದ್ದೆ. ಜೆಇ ಮೇನ್ಸ್‌ಗೆ ಸಿದ್ಧತೆ ನಡೆಸಿದ್ದೇನೆ. ಸಿಇಟಿಗೆ ಎಂದು ಓದಿರಲಿಲ್ಲ. ರ‍್ಯಾಂಕ್‌ ಬಂದಿರುವುದು ಖುಷಿತಂದಿದೆ. ಕಾಲೇಜಿನಲ್ಲಿ ಗ್ರಂಥಾಲಯ ಚೆನ್ನಾಗಿದೆ. ಉಪನ್ಯಾಸಕರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ಲಾಕ್‌ಡೌನ್‌ಗೆ ಮುಂಚೆಯೇ ಪಿಯುಸಿ ಪಠ್ಯ ಪೂರ್ಣವಾಗಿತ್ತು. ಓದಲು ಹೆಚ್ಚಿನ ಸಮಯ ಸಿಕ್ಕಿದ್ದು ಅನುಕೂಲವಾಯಿತು. ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್ ಮಾಡುತ್ತೇನೆ.

ಕೃಷಿ ವಿಜ್ಞಾನ
02. ಕೆ. ಸಂಜನಾ: ಬೇಸ್‌ ಪಿಯು ಕಾಲೇಜು, ಮೈಸೂರು

ಬಿಎಸ್‌ಸಿ ಕೃಷಿ ಮತ್ತು ಯೋಗ ವಿಜ್ಞಾನದಲ್ಲಿ ಎರಡನೇ ರ‍್ಯಾಂಕ್‌ ಅಲ್ಲದೆ, ಪಶುವೈದ್ಯಕೀಯ 3, ಬಿ.ಫಾರ್ಮಾ ಮತ್ತು ಡಿ.ಫಾರ್ಮಾ 5, ಎಂಜಿನಿಯರಿಂಗ್‌ನಲ್ಲಿ 52ನೇ ರ್‍ಯಾಂಕ್‌ ಬಂದಿರುವುದು ಸಂತಸ ತಂದಿದೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಆಸೆ. ಸೆ.13 ರಂದು ನಡೆಯಲಿರುವ ನೀಟ್‌ ಪರೀಕ್ಷೆಯನ್ನು ಎದುರು ನೋಡುತ್ತಿದ್ದು, ಅದರ ತಯಾರಿಯಲ್ಲಿ ತೊಡಗಿದ್ದೇನೆ.

03. ಲೋಕೇಶ್‌ ಬಿ.ಜೋಗಿ: ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

ಸಿಇಟಿಗಾಗಿ ವಿಶೇಷ ತರಬೇತಿ ಅಥವಾ ಟ್ಯೂಷನ್‌ಗೆ ಹೋಗಲಿಲ್ಲ. ಲಾಕ್‌ಡೌನ್‌ ವೇಳೆ ಪರೀಕ್ಷೆ ಮುಂದೂಡಿದ್ದರಿಂದ ಓದಲು ಹೆಚ್ಚು ಸಮಯ ದೊರೆಯಿತು. ಮೂರನೇ ರ‍್ಯಾಂಕ್‌ ಬಂದಿರುವುದು ಖುಷಿ ತಂದಿದೆ. ನೀಟ್‌ ಮತ್ತು ಜೆಇಇಗೂ ತಯಾರಿ ನಡೆಸುತ್ತಿದ್ದೇನೆ. ಏರೋಸ್ಪೇಸ್‌ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಕನಸಿದೆ.

ಪಶುವೈದ್ಯಕೀಯ
02.
ಆರ್ಯನ್‌ ಮಹಾಲಿಂಗಪ್ಪ ಚನ್ನಾಳ್: ಪ್ರಗತಿ ಪಬ್ಲಿಕ್‌ ಸೆಕೆಂಡರಿ ಸ್ಕೂಲ್, ಕೋಟ, ರಾಜಸ್ಥಾನ

ತಂದೆ–ತಾಯಿ ಇಬ್ಬರೂ ವೈದ್ಯರು. ನಾನೂ ವೈದ್ಯನಾಗಬೇಕು ಎಂಬ ಹಂಬಲವಿದೆ. ಧಾರವಾಡ ಜಿಲ್ಲೆಯ ಮಿಶ್ರಿಕೋಟಿಯಲ್ಲಿ ಪ್ರೌಢಶಾಲೆ ಓದಿದ್ದೆ. ರಾಜಸ್ಥಾನದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಕೋಚಿಂಗ್ ಕೊಡುತ್ತಾರೆ ಎಂಬ ಉದ್ದೇಶದಿಂದ ಅಲ್ಲಿ ಪಿಯುಸಿ ಓದಿದೆ. ಬಾಗಲಕೋಟೆಯ ಮಹಾಲಿಂಗಪುರ ನಮ್ಮೂರು. ರಾಜಸ್ಥಾನದಿಂದ ಬಂದಿದ್ದರಿಂದ ಕ್ವಾರಂಟೈನ್‌ ಕೂಡ ಆಗಿದ್ದೆ. ಮುಂದೆ, ನೀಟ್‌ ಬರೆದು ಎಂಬಿಬಿಎಸ್‌ ಮಾಡುತ್ತೇನೆ.

ಬಿ.ಫಾರ್ಮಾ, ಡಿ ಫಾರ್ಮಾ
03. ಪವನ್ ಎಸ್. ಗೌಡ: ನಾರಾಯಣ ಪಿಯು ಕಾಲೇಜು, ಬೆಂಗಳೂರು

ಬಿ.ಫಾರ್ಮಾದಲ್ಲಿ ಎರಡನೇ ರ‍್ಯಾಂಕ್‌ ಅಲ್ಲದೆ, ಪಶುವೈದ್ಯಕೀಯ ವಿಭಾಗದಲ್ಲಿಯೂ ನಾಲ್ಕನೇ ರ‍್ಯಾಂಕ್‌ ಬಂದಿರುವುದು ಸಂತಸ ತಂದಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಪರೀಕ್ಷೆ ಬಗ್ಗೆ ಗೊಂದಲವಾಗಿತ್ತು. ಆದರೆ, ಆ ದರ್ಭದಲ್ಲಿಯೂ ಯಾವುದೇ ತೊಂದರೆಯಾಗದಂತೆ ಕಾಲೇಜಿನವರು ಆನ್‌ಲೈನ್‌ ತರಗತಿಯನ್ನು ಅಚ್ಚುಕಟ್ಟಾಗಿ ನಡೆಸಿದರು. ಪರೀಕ್ಷೆ ಮುಂದೂಡುತ್ತಿದ್ದಾಗ ವಿಶ್ವಾಸ ಕಳೆದುಕೊಂಡಿದ್ದೆ. ಉಪನ್ಯಾಸಕರು, ಪೋಷಕರು ವಿಶ್ವಾಸ ತುಂಬಿದರು. ನೀಟ್‌ ಬರೆದು ನಂತರ ಎಂಬಿಬಿಎಸ್‌ ಮಾಡಬೇಕೆಂದುಕೊಂಡಿದ್ದೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು