ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ ಸ್ವರೂಪ ಬದಲು?

ಜಲ ಆಯೋಗದ ಷರತ್ತು l ಬಗೆಹರಿಯದ ಕಗ್ಗಂಟು l ಅನುಮತಿಗೆ ಕೇಂದ್ರದ ಮೇಲೆ ಒತ್ತಡ
Last Updated 19 ಜೂನ್ 2022, 20:45 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ಮಹದಾಯಿ (ಕಳಸಾ– ಬಂಡೂರಿ) ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಿರುವ ಕರ್ನಾಟಕ ಸರ್ಕಾರ, ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ.

ಈ ಯೋಜನೆಯು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಗದಗ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರಅಧಿಕಾರಕ್ಕೆ ಬಂದ ಕೂಡಲೇ ಮಹದಾಯಿ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಕಮಲ ಪಾಳಯದ ನಾಯಕರು ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಾಗ್ದಾನ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ, ಯೋಜನೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಯೋಜನೆ ಅನುಷ್ಠಾನವಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ಯೋಜನೆಗೆ ಬಾಕಿ ಇರುವ ಅನುಮತಿಗಳನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರ ಮೇಲೆ ಒತ್ತಡ ಹೇರಿದ್ದಾರೆ.

ಜಲ ಆಯೋಗದ ವಾದವೇನು: ಮಹದಾಯಿ ನದಿ ನೀರು ವಿವಾದ ನ್ಯಾಯಾಧಿಕರಣವು 2018ರ ಆಗಸ್ಟ್‌ 14ರಂದು ಕಳಸಾ – ಬಂಡೂರಿ ಯೋಜನೆಗೆ ನೀರಿನ ಹಂಚಿಕೆ ಮಾಡಿದೆ. ಬಳಿಕ ಕರ್ನಾಟಕ ಸರ್ಕಾರವುಯೋಜನೆಯ ಪೂರ್ವ- ಕಾರ್ಯಸಾಧ್ಯತಾ ವರದಿಗಳನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಆಯೋಗವು, ‘ನ್ಯಾಯಮೂರ್ತಿ ಬಚಾವತ್‌ ಆಯೋ ಗದ ವರದಿಯ ಪ್ರಕಾರ, ಈಯೋಜನೆಗೆ ಕೃಷ್ಣಾ ನದಿ ತೀರದ ಇತರ ರಾಜ್ಯಗಳ ಅನುಮತಿ ಕೂಡ ಅಗತ್ಯ’ ಎಂದು
ಸ್ಪಷ್ಟಪಡಿಸಿದೆ.

‘ಇತರ ಯಾವುದೇ ನದಿಗಳ ತಿರುವಿನಿಂದ ಕೃಷ್ಣಾ ನದಿಯ ನೀರಿನ ಪ್ರಮಾಣ ಏರಿಕೆಯಾದರೆ, ಯಾವುದೇ ರಾಜ್ಯಗಳು ಯಾವುದೇ ಪ್ರಾಧಿಕಾರ ಅಥವಾ ನ್ಯಾಯಾಧಿಕರಣದ ಎದುರು ಅದರ ಹಕ್ಕು ಕೇಳುವುದರಿಂದ ತಡೆಯುವಂತಿಲ್ಲ. ಅದನ್ನು ಪ್ರಶ್ನಿಸುವುದರಿಂದ ಕೂಡ ಯಾವುದೇ ರಾಜ್ಯವನ್ನು ತಡೆಯುವಂತಿಲ್ಲ’ ಎಂದು ಬಚಾವತ್‌ ಆಯೋಗ ಸ್ಪಷ್ಟಪಡಿಸಿದೆ. ಈ ಕಾರಣ ಮುಂದಿಟ್ಟುಕೊಂಡು ಕೇಂದ್ರ ಜಲ ಆಯೋಗವು ಪೂರ್ವ ಕಾರ್ಯಸಾಧ್ಯತಾ ವರದಿಗೆ ಇನ್ನೂ ಒಪ್ಪಿಗೆ ನೀಡಿಲ್ಲ.

‘ಒಂದು ವೇಳೆ ಇಂತಹ ಪರಿಸ್ಥಿತಿ ಎದುರಾದರೆಕರ್ನಾಟಕ ಸರ್ಕಾರ ಅದನ್ನು ಪರಿಣಾಮಕಾರಿಯಾಗಿ
ನಿಭಾಯಿಸಲಿದೆ. ಬಚಾವತ್‌ ಅಯೋಗದ ಷರತ್ತಿನ ಪ್ರಕಾರ, ಮಹದಾಯಿ ಯೋಜನೆಗೆನದಿ-ತೀರದ ಇತರ ರಾಜ್ಯಗಳ ಅನುಮತಿ ಪಡೆಯುವುದು ಕಡ್ಡಾಯವಲ್ಲ. ಈ ಅಂಶವನ್ನು ಪರಿಗಣಿಸಿ ಜಲ ಆಯೋಗವು ವರದಿಗೆ ಒಪ್ಪಿಗೆ ನೀಡಬೇಕು’’ ಎಂದು ಕರ್ನಾಟಕ ಸರ್ಕಾರವು ಒತ್ತಾಯಿಸಿದೆ.

ಈ ಯೋಜನೆಗೆ 499 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ತಕರಾರು ಇಲ್ಲ ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ 2019ರಲ್ಲೇ ಸ್ಪಷ್ಟಪಡಿಸಿದೆ. ಭಾರಿ ಪ್ರಮಾಣದ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೇಳೆ ಪರಿಸರ ಹೋರಾಟಗಾರರಿಂದ ತಕರಾರು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, 49 ಹೆಕ್ಟೇರ್‌ನಷ್ಟೇ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿದೆ. ಇದರಿಂದಾಗಿ, ಯೋಜನಾ ವೆಚ್ಚವು ₹700 ಕೋಟಿಯಷ್ಟು ಕಡಿಮೆ ಆಗಲಿದೆ. ಕೆಲವು ಕಡೆಗಳಲ್ಲಷ್ಟೇ ಕಾಲುವೆ ನಿರ್ಮಿಸಿ ಉಳಿದ ಕಡೆ ಪೈಪ್‌ಲೈನ್‌ ಮೂಲಕ ನೀರು ಹಾಯಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

‘ಯೋಜನೆಗೆ ಗೋವಾದಿಂದ ತಕರಾರು ಎದುರಾಗುವುದು ಸಹಜ. ಅಲ್ಲಿಯೂ ಬಿಜೆಪಿ ಸರ್ಕಾರ ಇದೆ. ಗೋವಾ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ವಿವಾದ ಬಗೆಹರಿಸುವ ವಿಶ್ವಾಸ ಇದೆ. ಶೀಘ್ರದಲ್ಲೇ ಯೋಜನೆಗೆ ಚಾಲನೆ ಸಿಗಲಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT